Advertisement

Kadaba police Station: ದಾಖಲೆ ಕಾಪಿಡುವುದೇ ಇಲ್ಲಿ ಸಾಹಸದ ಕೆಲಸ

12:50 PM Sep 30, 2024 | Team Udayavani |

ಕಡಬ: ಈಗ ತಾಲೂಕು ಕೇಂದ್ರ ವಾಗಿರುವ ಕಡಬದ ಪೊಲೀಸ್‌ ಠಾಣೆ ಹಳೆಯ ಹಂಚಿನ ಕಟ್ಟಡದಿಂದ ಹೊಸದಾಗಿ ನಿರ್ಮಿಸಲ್ಪಟ್ಟ ಆರ್‌ಸಿಸಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಸುಮಾರು 15 ವರ್ಷಗಳಾಗುತ್ತಾ ಬಂದಿದೆ. ಆದರೆ ಈ ಕಟ್ಟಡದ ಛಾವಣಿ ಸೋರಲಾರಂಭಿಸಿ ಠಾಣೆಗೆಗೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನು ಜತನದಿಂದ ಕಾಪಾಡುವುದೇ ಅಲ್ಲಿ ಬಲುದೊಡ್ಡ ಸಾಹಸವೆಂಬಂತಾಗಿದೆ.

Advertisement

ಲಕ್ಷಾಂತರ ರೂ. ವ್ಯಯ ಮಾಡಿ ಅಂದಿನ ಗೃಹ ಮಂತ್ರಿ ಡಾ| ವಿ.ಎಸ್‌.ಆಚಾರ್ಯ ಅವರಿಂದ 2009 ರಲ್ಲಿ ಉದ್ಘಾಟನೆಗೊಂಡ ಕಟ್ಟಡದ ಸ್ಲ್ಯಾಬ್‌ ಬಿರುಕುಬಿಟ್ಟು ದಾಖಲೆಗಳ ಕೊಠಡಿ ಮತ್ತು ಕೈದಿಗಳನ್ನಿರಿಸುವ ಸೆಲ್‌ ಕೊಠಡಿಯ ನಡುವೆ ಇರುವ ಕಾರಿಡಾರ್‌ಗೆ ನೀರು ಬೀಳುತ್ತಿದೆ. ಈ ಹಿಂದೆ ಕೆಲವು ದಾಖಲೆಗಳು ಕೂಡಾ ನೀರಿನಿಂದ ತೇವಗೊಂಡು ಹಾನಿಯಾದ ವಿದ್ಯಮಾನಗಳೂ ನಡೆದಿವೆ. ಏಳು ವರ್ಷಗಳ ಹಿಂದೆಯೇ ನೀರು ಸೋರಿಕೆ ಕಂಡು ಬಂದಿದ್ದರೂ ಇನ್ನೂ ಸೋರಿಕೆ ತಡೆಯುವ ಕೆಲಸ ಸಮರ್ಪಕವಾಗಿ ನಡೆದಿಲ್ಲ.

19 ಗ್ರಾಮಗಳ ವ್ಯಾಪ್ತಿ
ಈ ಹಿಂದೆ 26 ಗ್ರಾಮಗಳು ಈ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಕೆಲವು ಗ್ರಾಮಗಳು ಬೆಳ್ಳಾರೆ ಠಾಣೆಗೆ ಸೇರ್ಪಡೆಯಾದ ಬಳಿಕ ಕಡಬ ಠಾಣೆಯ ವಿಸ್ತಾರ ಕಡಿಮೆಯಾಗಿ 19 ಗ್ರಾಮಗಳಿಗೆ ಸೀಮಿತಗೊಂಡಿದೆ. ಮಹಿಳಾ ಪೊಲೀಸ್‌ ಸಿಬಂದಿ ಒಂದು ಹುದ್ದೆ ಹೊರತು ಪಡಿಸಿ ಉಳಿದ ಎಲ್ಲ ಹುದ್ದೆಗಳು ಭರ್ತಿಯಾಗಿದ್ದರೂ ಠಾಣೆಯ ವಿಸ್ತಾರದ ದೃಷ್ಟಿಯಿಂದ ಹಾಗೂ ಸರಕಾರ ಇನ್ನಷ್ಟು ಹುದ್ದೆಗಳನ್ನು ಸೃಷ್ಟಿ ಮಾಡಬೇಕಿದೆ. ಕಡಬವು ತಾಲೂಕು ಕೇಂದ್ರವಾಗಿರುವುದರಿಂದ ಪೊಲೀಸ್‌ ಸಿಬಂದಿ ಸಂಖ್ಯೆ ಹೆಚ್ಚಿಸಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈಗ ಇಲ್ಲಿ ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳು, ಮೂವರು ಎಎಸ್‌ಐ ಗಳು, ಎಂಟು ಹೆಡ್‌ಕಾನ್‌ ಸ್ಟೇಬಲ್‌ಗ‌ಳು ಹಾಗೂ 19 ಜನ ಕಾನ್‌ ಸ್ಟೇಬಲ್‌ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಬೆಳೆಯುತ್ತಿರುವ ಕಡಬದಲ್ಲಿ ಟ್ರಾಫಿಕ್‌ ಕಂಟ್ರೋಲ್‌ಗೆಂದು ಪೊಲೀಸ್‌ ಸಿಬಂದಿ ನಿಯೋಜಿಸುತ್ತಿಲ್ಲ. ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಜನಸಂದಣಿ ಇರುವಾಗ ಸಾರ್ವಜನಿಕರನ್ನು ನಿಭಾಯಿಸಲು ಪೊಲೀಸ್‌ ಸಿಬಂದಿ ಸಾಕಾಗುತ್ತಿಲ್ಲ. ನೆರೆಯ ಠಾಣೆಗಳ ವ್ಯಾಪ್ತಿಯಲ್ಲಿ ಅಥವಾ ಮಂಗಳೂರಿಗೆ ಬೇಕಾದರೆ ಇಲ್ಲಿನ ಸಿಬಂದಿ ಕೂಡ ಅಲ್ಲಿನ ಬಂದೋಬಸ್ತ್ಗಾಗಿ ತೆರಳಬೇಕಾಗುತ್ತದೆ. ಹಿಂದೆ ಇಲ್ಲಿ 15 ಜನ ಗೃಹರಕ್ಷಕ ಸಿಬಂದಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರ ಸಂಖ್ಯೆ 4 ಕ್ಕೆ ಇಳಿದಿದೆ.

ಸಿಸಿ ಕೆಮರಾಗಳಿಗೆ ಬೇಕು ಕಾಯಕಲ್ಪ
ಠಾಣೆಯ ವತಿಯಿಂದ ಕಡಬ ಪೇಟೆಯಲ್ಲಿರುವ ಒಂದು ಸಿಸಿ ಕೆಮರಾ ಹೊರತು ಪಡಿಸಿ ಮರ್ದಾಳ, ಆಲಂಕಾರು ಮುಂತಾದೆಡೆ ಹಾಕಲಾಗಿರುವ ಸಿಸಿ ಕೆಮರಾಗಳು ಕೆಟ್ಟು ಹೋಗಿ ಹಲವು ವರ್ಷಗಳೇ ಸಂದು ಹೋಗಿವೆ. ಅವುಗಳನ್ನು ದುರಸ್ತಿಪಡಿಸಿದರೆ ಅಪರಾಧ ಕೃತ್ಯಗಳು ಅಥವಾ ವಾಹನ ಅಪಘಾತಗಳ ಸಂದರ್ಭದಲ್ಲಿ ಪೊಲೀಸರ ತನಿಖೆಗೆ ಸಹಾಯ ವಾಗಲಿದೆ ಎನ್ನುವುದು ಸ್ಥಳೀಯ ಜನರ ಅಭಿಪ್ರಾಯ.

Advertisement

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next