Advertisement

ಕಡಬ: ಅಕ್ರಮ ಕಸಾಯಿಖಾನೆಗೆ ಪೊಲೀಸ್‌ ದಾಳಿ

11:41 PM May 01, 2022 | Team Udayavani |

ಕಡಬ: ಇಲ್ಲಿನ ಕಳಾರ ಸಮೀಪದ ತಿಮರಡ್ಡದ ಮನೆಯೊಂದರ ಬಳಿ ಮಾಂಸ ಮಾಡುವ ಸಲುವಾಗಿ ಅಕ್ರಮವಾಗಿ ಜಾನುವಾರನ್ನು ವಧಿಸುತ್ತಿದ್ದ ವೇಳೆ ಕಡಬ ಪೊಲೀಸರು ದಾಳಿ ನಡೆಸಿ ತಲೆ ಕಡಿದು ವಧಿಸಿದ ಜಾನುವಾರು ಹಾಗೂ ಕಸಾಯಿಖಾನೆಗೆ ಬಳಸಿದ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

Advertisement

ಖಚಿತ ಸುಳಿವಿನ ಮೇರೆಗೆ ಕಡಬ ಎಸ್‌ಐ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ಎಎಸ್‌ಐ ಸುರೇಶ್‌ ಸಿ.ಟಿ. ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.

ಕಸಾಯಿಖಾನೆ ನಡೆಸುತ್ತಿದ್ದ ಆರೋಪಿ ಫಾರೂಕ್‌ ಹಾಗೂ ಇನ್ನಿತರರು ದಾಳಿಯ ವೇಳೆ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಪತ್ತೆಯಾಗಿದ್ದ ವಧಿಸಲ್ಪಟ್ಟ ಜಾನುವಾರಿನ ಜತೆಗೆ ಹತ್ತಿರದಲ್ಲಿ ಕಟ್ಟಿಹಾಕಲಾಗಿದ್ದ ಇನ್ನಿತರ ಜಾನುವಾರುಗಳನ್ನು ಕೂಡ ಆರಂಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆ ಪೈಕಿ 2 ಜಾನುವಾರುಗಳನ್ನು ಸ್ಥಳೀಯರು ಬಲಾತ್ಕಾರವಾಗಿ ಪೊಲೀಸರ ವಶದಿಂದ ಬಿಡಿಸಿಕೊಂಡು ತೋಟದೊಳಗೆ ಅಟ್ಟಿದ ಘಟನೆಯೂ ನಡೆಯಿತು. ಬಳಿಕ ಕಟ್ಟಿಹಾಕಲಾಗಿದ್ದ ಜಾನುವಾರುಗಳು ಬೇರೆಯರಿಗೆ ಸೇರಿದ್ದು ಎನ್ನುವ ದಾಖಲೆಗಳನ್ನು ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವುಗಳನ್ನು ವಾರಸುದಾರರಿಗೆ ಬಿಟ್ಟುಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾತಿನ ಚಕಮಕಿ
ಘಟನಾ ಸ್ಥಳದಲ್ಲಿ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಎರಡೂ ಕೋಮಿನ ಯುವಕರು ಸ್ಥಳದಲ್ಲಿ ಜಮಾಯಿಸುತ್ತಿರುವುದನ್ನು ಕಂಡ ಪೊಲೀಸರು ಎಲ್ಲರೂ ಸ್ಥಳದಿಂದ ತೆರಳುವಂತೆ ಸೂಚಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿಹಿಂಪ-ಬಜರಂಗದಳ ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಕಾರ್ಯದರ್ಶಿ ಪ್ರಮೋದ್‌ ರೈ ನಂದಗುರಿ ಅವರು ಕಡಬದ ಕಳಾರ ಹಾಗೂ ತಿಮರಡ್ಡದಲ್ಲಿ ನಿರಂತರವಾಗಿ ಗೋವಧೆ ನಡೆಯುತ್ತಿದೆ. ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಪೊಲೀಸರು ಕೂಡಲೇ ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೋಣಂಗೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಸುಳ್ಯ : ಇಲ್ಲಿಗೆ ಸಮೀಪದ ಸೋಣಂಗೇರಿ ಅರ್ತಾಜೆ ಎಂಬಲ್ಲಿ ಕಾರು ರಸ್ತೆ ಬದಿಯ ಹೊಂಡಕ್ಕೆ ಪಲ್ಟಿಯಾಗಿರುವ ಘಟನೆ ರವಿವಾರ ಸಂಭವಿಸಿದೆ.

Advertisement

ಕಾರಿನಲ್ಲಿದ್ದವರು ಮೈಸೂರಿನ ವರಾಗಿದ್ದು, ಧರ್ಮಸ್ಥಳಕ್ಕೆ ತೆರಳಿ ಕುಕ್ಕೆ ಸುಬ್ರಹ್ಮಣ್ಯದಿಂದ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಅರ್ತಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಪುರುಷರು, ಓರ್ವ ಮಹಿಳೆ ಇದ್ದರು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳೀಯರ ಸಹಕಾರದಿಂದ ಕಾರನ್ನು ಮೇಲಕ್ಕೆತ್ತಲಾಯಿತು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next