ಕಡಬ: ನೈಲದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾದ ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾದ ಕಾಡಾನೆಯನ್ನು ಸ್ಥಳಾಂತರಿಸುವ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಅರಣ್ಯ, ಪೊಲೀಸ್ ಇಲಾಖೆಯ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ 7 ಮಂದಿಗೆ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಉಮೇಶ್ ಕಮರ್ಕಜೆ, ರಾಜೇಶ್ ಕನಡ ಕಮರ್ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ಕೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದರು.
ರೆಂಜಿಲಾಡಿಯ ನೈಲದಲ್ಲಿ ಫೆ. 20ರಂದು ಬೆಳ್ಳಂಬೆಳಗ್ಗೆ ಕಾಡಾನೆಯೊಂದು ದಾಳಿ ನಡೆಸಿ ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ ಮತ್ತು ನೈಲ ರಮೇಶ್ ರೈ ಎಂಬವರು ಮೃತಪಟ್ಟಿದ್ದರು. ಆದ್ದರಿಂದ ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ಫೆ. 23ರಂದು ರಾತ್ರಿ ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮೂಜೂರು ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಿತು. ಸೆರೆ ಹಿಡಿಯಲಾದ ಒಂದು ಆನೆಯನ್ನು ರಾತ್ರಿ 9 ಗಂಟೆ ಸುಮಾರಿಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಕಾರ್ಯಾಚರಣೆ ತಂಡ ಮುಂದಾದಾಗ ನಾಗರಿಕರ ಗುಂಪೊಂದು ಕಾಡಾನೆ ಇದ್ದ ಲಾರಿಯನ್ನು ತಡೆದು ನಿಲ್ಲಿಸಿ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ ಇತರ ಕಾಡಾನೆಗಳನ್ನೂ ಸೆರೆ ಹಿಡಿದು ಒಟ್ಟಿಗೆ ಎಲ್ಲ ಆನೆಗಳನ್ನು ಕೊಂಡು ಹೋಗಬೇಕು ಎಂದು ಹೇಳಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದರು.
ಸೆರೆಹಿಡಿದ ಕಾಡಾನೆಯನ್ನು ಹೆಚ್ಚು ಸಮಯ ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲವಾದ್ದರಿಂದ ನಾವು ಮೊದಲು ಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಆನೆಗಳನ್ನು ಸೆರೆ ಹಿಡಿಯುವುದಾಗಿ ಅಧಿಕಾರಿಗಳು ಹೇಳಿದರೂ ಕೇಳದ ಕೆಲವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತಗಾದೆ ತೆಗೆದಿದ್ದರು. ಪೋಲಿಸ್ ಅಧಿಕಾರಿಗಳೂ ಸ್ಥಳಕ್ಕೆ ಬಂದು ವಿಷಯ ಮನವರಿಕೆ ಮಾಡಿದರೂ ಕೇಳದೆ ಕೆಲವರು ಕರ್ತವ್ಯದಲ್ಲಿದ್ದ ಪೊಲೀಸ್, ಅರಣ್ಯ ಇಲಾಖೆಯ ಸಿಬಂದಿ ಮೇಲೆ ಕಲ್ಲು ತೂರಾಟ ಮಾಡಿದ್ದರು. ಇಲಾಖಾ ವಾಹನಗಳಿಗೂ ಕಲ್ಲುತೂರಾಟ ಮಾಡಿ ಹಾನಿ ಉಂಟು ಮಾಡಿದ್ದರಲ್ಲದೆ ಸಿಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದಾಗಿ ಉಪವಲಯ ಅರಣ್ಯ ಅಧಿಕಾರಿ ಮದನ್ ಬಿ.ಕೆ. ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದು, ಅವರ ವಾದವನ್ನು ಪುರಸ್ಕರಿಸಿದ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಪ್ರಭಾರವನ್ನು ಹೊಂದಿರುವ ಆರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಅವರು ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ನಿರೀಕ್ಷಣ ಜಾಮೀನು
ಅದೇ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಕೊಂಡಿದ್ದ ಆರೋಪಿಗಳಾದ ಯೋಗೀಶ್ ಯಾನೆ ಯಶೋಧರ, ಉಮೇಶ್ ಯು., ಭರತ್ ಯಾನೆ ಭರತೇಶ್ ಬಿ. ಹಾಗೂ ಸತ್ಯಪ್ರಿಯ ಅವರು ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆರೋಪಿಗಳಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ. ಆರೋಪಿಗಳ ಪರವಾಗಿ ಸುಳ್ಯದ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ ಹಾಗೂ ರಾಜೇಶ್ ಬಿ.ಜಿ. ಅವರು ವಾದಿಸಿದ್ದರು.