Advertisement

ಕಬೂತರ್‌ ಜಾಜಾಜಾ!

05:15 PM Jun 08, 2019 | mahesh |

ಮನೆ ಸೊಗಸಾಗಿದೆ. ನಿಮಗೆ ಹೇಳಿ ಮಾಡಿಸಿದ ಹಾಗಿದೆ!”
ಬ್ರೋಕರ್‌ ಹಾಡಿದ- “”ಏನೆಂದರೆ…” ಸ್ವಲ್ಪ ತಡವರಿಸಿದ.
ನಮ್ಮ ಆತಂಕವನ್ನು ಗಮನಿಸಿದವನೇ ಅವಸರವಸರವಾಗಿ ಮುಗಿಸಿದ. “”ಆ… ಏನಿಲ್ಲ, ಅಲ್ಲಿ ಸ್ವಲ್ಪ ಪಾರಿವಾಳಗಳು ಅಲ್ಲಿಇಲ್ಲಿ ಹಾರಾಡ್ತಾ ಇರತೆ. ಏನ್‌ ಮಾಡಲ್ಲ, ತಮ್ಮ ಪಾಡಿಗೆ ತಾವು ಇರತೆ ಪಾಪ. ಕಾಗೆ ಹಾಗೆ ಮೂರ್‌ ಮೂರು ನಿಮಿಷಕ್ಕೂ ಕಾಕಾ ಅಂತ ಕಿರುಚಾ ತೊಂದ್ರೆ ಕೊಡಲ್ಲ. ಹಾಯಾಗಿ ಹಾರಾಡ್ಕೊಂಡು ಇರತೆ. ನೋಡೋಕ್ಕೂ ಸುಂದರ”

Advertisement

“”ಎಷ್ಟಾದ್ರೂ ಪೌರಾಣಿಕ ಹಾಗೂ ಐತಿಹಾಸಿಕ ಪಕ್ಷಿ. ನಂಗೂ ಅವನ್ನ ನೋಡೋಕ್ಕೆ ಇಷ್ಟ. ಅಂಥಾದ್ರಲ್ಲಿ ಬೇಸರ ಪಟ್ಕೊಳ್ಳೋದಿಕ್ಕೆ ಸಾಧ್ಯವೆ?”- ಎಂದು ನಾನಂದಾಗ ಬ್ರೋಕರ್‌ ಮುಖಾನ ನೋಡ್ಬೇಕಿತ್ತು- ಮಲ್ಲಿಗೆಯ ಹೂವಿನಂತೆ ಅರಳಿತು. ದೊಡ್ಡ ಭಾರವನ್ನ ಕಳಚಿಕೊಂಡವನಂತೆ ಹಗುರವಾಗಿ ಉಸಿರಾಡಿದ. ನಾವು ಕೊಟ್ಟ ದೊಡ್ಡ ಮೊತ್ತವನ್ನ ತೆಗೆದುಕೊಂಡು ದೌಡು-ಒಂದು ಬಾರಿಯೂ ಹಿಂತಿರುಗಿ ನೋಡದೆ!

ನಿಜ, ಮೊದಮೊದಲು ಮೋಹಕವಾಗಿತ್ತು- ಅಚ್ಚುಕಟ್ಟಾದ ಮನೆ, ಎಲ್ಲೆಲ್ಲೂ ಹೂಗಿಡಗಳು, ಅವುಗಳ ನಡುವೆ ಹಸಿರಿನಿಂದ ಕಂಗೊಳಿಸುವ ಎತ್ತರದ ಮರ. ಆ ಮರದ ರೆಂಬೆಗಳಲ್ಲಿ ಉಯ್ನಾಲೆಯಾಡುತ್ತಿದ್ದ ಶ್ವೇತವರ್ಣದ ಸಮೂಹ; ಕ್ಷಣ ನಮ್ಮನ್ನೇ ನಿಬ್ಬೆರಗಾಗಿ ನೋಡುತ್ತಿದ್ದು, ಹಾರಿ ಹಾರಿ ಬಂದವು, ಸ್ವಾಗತ ಕೋರುವಂತೆ; ರೆಕ್ಕೆಗಳನ್ನು ಬಡಿಯುತ್ತ ಸುತ್ತಿಕೊಂಡವು, ನಮ್ಮನ್ನು. ಹಂಸದಷ್ಟೇ ಮೋಹಕ ಪಕ್ಷಿ. ನೋಡಿದಷ್ಟೂ ನೋಡುತ್ತಲೇ ಇರಬೇಕೆಂಬ ದೃಶ್ಯ.

ಥ್ರಿ ಡೇಸ್‌ ವಂಡರ್‌ ಎನ್ನುತ್ತಾರಲ್ಲ , ಹಾಗೆ. ಪಾರಿವಾಳಗಳ ಹಾರಾಟ ಕ್ರಮೇಣ ಕಾಟವಾಗತೊಡಗಿತು. ಹೊತ್ತಿಲ್ಲ-ಗೊತ್ತಿಲ್ಲ ಎಂದು ವಕ್ರಿಸುವ ನೆಂಟರಂತೆ ಒಳಗೆ ನುಗ್ಗತೊಡಗಿತು. ಮುಂಬಾಗಿಲನ್ನು ಮುಚ್ಚಿದರೆ ಹಿಂಬಾಗಿಲಿನಿಂದ, ಎರಡೂ ಬಾಗಿಲುಗಳನ್ನ ಮುಚ್ಚಿದರೆ ಕಿಟಕಿಗಳ ಮೂಲಕ! ಎಲ್ಲೆಂದರಲ್ಲಿ ರಾಜಾರೋಷಾಗಿ ಠಿಕಾಣಿ. ಅಡುಗೆಯಮನೆಯನ್ನೂ ಬಿಡುತ್ತಿರಲಿಲ್ಲ-ಆರಾಮವಾಗಿ ಜಾಂಡ, ಅಡಿಗೆ ಮಾಡಿಟ್ಟ ಪಾತ್ರೆಗಳ ಬೊಡ್ಡೆಯಲ್ಲೇ! ತಥ್‌! ಸ್ವಲ್ಪಾನೂ ಮಡಿ, ಆಚಾರ ಇಲ್ಲ! ಹೋದ ಕಡೆ, ನಿಂತ ಕಡೆ, ಕೂತ ಕಡೆ, ಎಲ್ಲಾ ಒಂದೇ ಗಲೀಜು. ಅವುಗಳ ಕಕ್ಕ ಬಳಿಯೋದೇ ಒಂದು ನಿತ್ಯಕೆಲಸವಾಯ್ತು. ಕರ್ಮ ಕರ್ಮ! ಯಾವ ಜನ್ಮದ ಪಾಪ?

ಸ್ವಲ್ಪಾನೂ ಬೇಸರ ಅನ್ನೋದು ಇಲ್ಲದೆ ಗೂಡು ಕಟಿ¤ತ್ತು, ಎಲ್ಲೆಂದರಲ್ಲಿ ಕಣ್ಣುಮುಚ್ಚಿ ತೆಗೆಯುವುದರೊಳಗೆ ಮೊಟ್ಟೆಗಳು. ಆ ಗೂಡನ್ನು ಕೆಡವಿ, ಅದರಲ್ಲಿದ್ದ ಆ ಮೊಟ್ಟೆಗಳನ್ನು ರವಾನೆ ಮಾಡೋದೇ ನಿತ್ಯ ಕೆಲಸ; ಆದ್ರೂ, ಸ್ವಲ್ಪಾನೂ ಬೇಜಾರಿಲ್ಲದೆ ಮತ್ತೆ ಮತ್ತೆ ಗೂಡು ಕಟ್ಟೋದು- ಮೊಟ್ಟೆ ಇಡೋದು. ತಥ್‌, ಸ್ವಲ್ಪಾನೂ ಸಂತಾನ ನಿಯಂತ್ರಣ ಇಲ್ಲ. ಆ ಮೊಟ್ಟೆಗಳ್ಳೋ, ಯಾವುದಕ್ಕೂ ಉಪಯೋಗ ಇಲ್ಲ. ಅವು ಕಾಣದಾದಾಗ ಅದೇನು ಅರಚಾಟ-ಕಿರಿಚಾಟ-ರಂಪಾಟ. ಇಷ್ಟು ಸಾಲದು, ಎಂಬಂತೆ, ಬರೀದಿನಗಳಲ್ಲೂ ಗೊಣಗಾಟ. ಅಯ್ಯೊ, ಆ ಕಂಠವೇ. ರೂಪಕ್ಕೆ ವ್ಯತಿರಿಕ್ತವಾದ ಗಂಟಲು-ಗೊಗ್ಗರು ಗಂಟಲು. ಈ ಹಿಂದೆ ನಮ್ಮ ಮನೆಗಳಲ್ಲಿ-ತೋಟದಲ್ಲಿ ಇದ್ದ ಗುಬ್ಬಚ್ಚಿಗಳು ಅದೆಷ್ಟು ಮುದ್ದಾಗಿ “ಟುವ್ವಿ, ಟುವ್ವಿ’, ಎಂದು ಉಲಿಯುತ್ತಿದ್ದವು. ಈಗವೆಲ್ಲಾ ಎಲ್ಲಿಗೆ ಹೋದವು? ಎಲ್ಲೆಲ್ಲೂ ನೋಡಬಹುದಿತ್ತು. ಒಂದಾದರೂ ಕಾಣಬೇಡವೇ?

Advertisement

“”ಈ ಹಾಳು ಪಾರಿವಾಳಗಳು ಬಂದು, ನಮ್ಮ ಗುಬ್ಬಚ್ಚಿಗಳನ್ನು ಓಡಿಸಿದವು ಅಮ್ಮಾವ್ರೇ”- ಕೆಲಸದವಳು ಪರಕೆ ಕುಕ್ಕಿದಳು, ಸಿಟ್ಟಿನಿಂದ. “”ಅನ್ಯಾಯ, ಅನ್ಯಾಯ. ಈಗ ಈ ಪಾರಿವಾಳಗಳನ್ನ ಓಡಿಸೋಕ್ಕೆ ಯಾವ ಪಕ್ಷಿಯನ್ನ ತರಬೇಕು, ಹೇಳೇ?”- ಪ್ರಶ್ನಿಸಿದೆ. “”ಹದ್ದು ಬಂದ್ರೆ ಸರಿ, ಪಾರಿವಾಳಗಳು ತಾವಾಗಿ ಓಡಿಹೋಗತೆÌ,ಅಮ್ಮಾವ್ರೆ…”- ತಿಳಿಸಿದಳು. “”ಹದ್ದು!” ನಡುಗಿದೆ. ಹದ್ದು, ಗೂಬೆ, ಇವನ್ನೆಲ್ಲಾ ಅಹ್ವಾನಿಸುವ ಕಾಲ ಬಂತೇ! ಇತ್ತ, ಮನೆ ಮುಂದಿನ ಬಾಲ್ಕನಿಯಲ್ಲಿ ನಿಂತು ಬೇಟೆ ಆಡಿದ್ದೂ ಆಡಿದ್ದೇ, ನಮ್ಮ ಮಾವನವರು. ಅಷ್ಟು ವರ್ಷದಿಂದ ಜೋಪಾನ ಮಾಡಿದ್ದ ಅವರ ಕಾಶಿಯಾತ್ರೆ ಛತ್ರಿ-ಚಪ್ಪಲಿ-ಕೋಲು ಎಲ್ಲಾ ಮುರಿದು ಬಿದ್ದು, ಸುಸ್ತಾಗಿ ಪುರಾಣಪುಸ್ತಕವನ್ನು ಹಿಡಿದರು. ಈ ಮಧ್ಯೆ ಕಾಂಪೌಂಡ್‌ ಗುಡಿಸುವವನಿಗೆ ಹಾಗೂ ಮನೆಕಸ ಗುಡಿಸುವವಳಿಗೆ ಪಾರಿವಾಳದ ಅಲೊಯೆನ್ಸ್‌! ವಿಧಿಯಿಲ್ಲದೆ ಅವರುಗಳ ಹತ್ರಾನೇ ಸಾಲಮಾಡಿ ನಾಲಕ್ಕೂ ಕಡೆ ನೆಟ್‌ ಹಾಕಿಸಿದೆವು;

ಅವುಗಳನ್ನ ಭೇದಿಸಿ ಒಳಬರಲು ಪ್ರಯತ್ನಿಸಿದ ಪಾರಿವಾಳಗಳ ರೆಕ್ಕೆಪುಕ್ಕಗಳ ರಾಶಿ ನಮ್ಮ ಬಾಲ್ಕನಿಯ ಮುಂದೆ! ಜೊತೆಗೆ ಕಾಂಪೌಂಡ್‌ ಮತ್ತೂ ಗಲೀಜು-ಹೊರಗೆ ಕಾಲಿಡೊದಿಕ್ಕೇ ಆಗಲ್ಲ. ಇನ್ನು ಬರುವ ಅತಿಥಿಗಳಿಗೆ? ತಿಥಿಯೇ!

ನುಗ್ಗೆಹಳ್ಳಿ ಪಂಕಜಾ

Advertisement

Udayavani is now on Telegram. Click here to join our channel and stay updated with the latest news.

Next