Advertisement
ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೇ ರೈತರು ಬರದಿಂದ ನಲುಗಿ ಹೋಗಿದ್ದಾರೆ. ನಮ್ಮ ನಾಲೆ ಭಾಗದಲ್ಲಿ ನೀರಿಲ್ಲದೇ ಜಮೀನಿನಲ್ಲಿ ಬೆಳೆ ಇಡಲಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದರೆ ಇತ್ತ ತಮಿಳುನಾಡಿಗೆ ಸರಾಗವಾಗಿ ಕಬಿನಿ ನೀರನ್ನು ಹರಿಸಲಾಗುತ್ತಿದೆ. ಅಧಿಕಾರಿಗಳ ರಾಜ್ಯದ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ಹಿತವನ್ನು ಕಡೆಗಣಿಸಿ ಜಲಾಶಯ ಭರ್ತಿಗೊಳ್ಳುವ ಮುನ್ನವೇ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಜನಪ್ರತಿನಿಧಿಗಳ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸೂಚನೆ ಮೇರೆಗೆ ಜಲಾಶಯದಿಂದ ನೇರವಾಗಿ ನದಿಗೆ ನೀರು ಹೊರ ಬಿಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯದ ನೀರನ್ನೇ ನಂಬಿ ಬೆಳೆ ಬೆಳೆಯುವ ಲಕ್ಷಾಂತರ ರೈತರ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಮುಂದೆ ಇದೇ ಸ್ಥಿತಿ ಮುಂದುವರಿದರೆ ಅಚ್ಚುಕಟ್ಟು ಪ್ರದೇಶದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಈಗ ಮಳೆ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಜಲಾಶಯದಲ್ಲಿ ಈಗ 73 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೊಳ್ಳುವ ಮೊದಲೇ ತಮಿಳುನಾಡಿಗೆ ಇದೇ ರೀತಿ ನೀರು ಹರಿಸಿದರೆ, ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಬೆಳೆಗೆ ನೀರು ಹರಿಸಲು ಕಷ್ಟವಾಗಲಿದೆ.
ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗಳಿಗೆ ನೀರು ಬಿಡಲು ತೀರ್ಮಾನ ತೆಗೆದುಕೊಳ್ಳುವಷ್ಟರಲ್ಲೇ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಮೊದಲೇ ಈ ಭಾಗದ ರೈತರು ಕಳೆದೆರಡು ವರ್ಷಗಳಿಂದ ಅವರಿಸಿದ್ದ ತೀವ್ರ ಬರದಿಂದ ಯಾವುದೇ ಬೆಳೆ ಬೆಳೆಯದೆ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಈ ಬಾರಿಯೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಮುಂದುವರಿದು ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ರೈತರಲ್ಲಿ ಅಸಮಧಾನ ವ್ಯಕ್ತವಾಗಿದೆ.
ನೀರಿದ್ದಾಗ ನಾಲೆಗಳಿಗೆ ನೀರು ಬಿಟ್ಟು ನಮ್ಮ ರಾಜ್ಯದ ರೈತರ ಹಿತ ಕಾಪಾಡಲು ಎಲ್ಲಾ ಸರ್ಕಾರಗಳೂ ಮೀನಮೇಷ ಎಣಿಸುತ್ತಿವೆ. ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸಲಾಗುತ್ತಿದೆ ಎಂದು ರೈತ ಮುಖಂಡ ಚೆಲುವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಬಿ.ನಿಂಗಣ್ಣಕೋಟೆ