Advertisement

ಕಬಿನಿ ಬೃಂದಾವನ ಆದರೆ ಕೋಟೆ ನಂದಾವನ

08:42 PM Mar 01, 2020 | Lakshmi GovindaRaj |

ಎಚ್‌.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಬಳಿ ಆಕರ್ಷಕ ಬೃಂದಾವನ ನಿರ್ಮಾಣ ಆಗಬೇಕಿದೆ. ಕೆಆರ್‌ಎಸ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇಲ್ಲೂ ಸುಸಜ್ಜಿತ ಉದ್ಯಾನ ನಿರ್ಮಿಸಬೇಕಾಗಿದೆ. ಕಳೆದ 10 ವರ್ಷಗಳಿಂದ ಕೇವಲ ಭರವಸೆಯಲ್ಲೇ ಕಾಲ ಕಳೆಯಲಾಗುತ್ತಿದೆ. ಕಬಿನಿ ಭರ್ತಿಯಾದಾಗ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿಗಳು, ಸಚಿವರು ಉದ್ಯಾನ ನಿರ್ಮಿಸುವ ಮಾತುಗಳನ್ನಾಡುತ್ತಾರೆ. ಈ ಮಾತುಗಳು ಆ ದಿನಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಕಿಂಚಿತ್ತು ಕ್ರಮ ವಹಿಸುವುದಿಲ್ಲ.

Advertisement

ಅತ್ಯಾಕರ್ಷಕ ಉದ್ಯಾನ ನಿರ್ಮಿಸಲು ಕಬಿನಿ ಡ್ಯಾಂ ಹಿಂಭಾಗ 60 ಎಕರೆ ಭೂಮಿ ಕೂಡ ಇದೆ. ರಾಜ್ಯ ಬಜೆಟ್‌ನಲ್ಲಿ ಇದಕ್ಕಾಗಿ ಹಣ‌ ಮೀಸಲಿಟ್ಟು, ಉದ್ಯಾನ ನಿರ್ಮಿಸಿದರೆ ಪ್ರವಾಸೋದ್ಯಮ ಉತ್ತೇಜನ ಜತೆಗೆ ಸಹಸ್ರಾರು ಉದ್ಯೋಗ ಲಭಿಸಲಿದೆ. ಜತೆಗೆ ತಾಲೂಕಿನಲ್ಲಿರುವ 4 ಡ್ಯಾಂಗಳ ನೀರು ಸಮರ್ಪಕವಾಗಿ ಅನುಕೂಲ ಆಗುವಂತೆ ಯೋಜನೆ ರೂಪಿಸಬೇಕಿದೆ. ನೀರಾವರಿ ಯೋಜನೆ ಹಾಗೂ ಕಬಿನಿಯಲ್ಲಿ ಬೃಂದಾವನ ಆದರೆ ಎಚ್‌.ಡಿ. ಕೋಟೆ ಆಗಲಿದೆ ನಂದಾವನ….

ಎಚ್‌.ಡಿ.ಕೋಟೆ: ಕಬಿನಿ ಜಲಾಶಯ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಡ್ಯಾಂ ಎಂದೇ ಖ್ಯಾತಿ ಪಡೆದಿದೆ. ಅಲ್ಲದೇ ರಾಜ್ಯ ಹಾಗೂ ತಮಿಳುನಾಡಿಗೆ ನೀರಿನ ಸಂಕಷ್ಟ ಎದುರಾದಾಗ ಕಬಿನಿ ನೀರು ನೆನಪಿಗೆ ಬರುತ್ತದೆ. ಆದರೆ, ಈ ಡ್ಯಾಂನಿಂದ ತಾಲೂಕಿನ ರೈತರಿಗೆ ಅಷ್ಟಾಗಿ ಉಪಯೋಗವಿಲ್ಲ. ನೆರೆ ರಾಜ್ಯ, ನೆರೆ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗಿದೆ. ಆದರೂ ಈ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸಿಲ್ಲ. ಕಬಿನಿಯಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಂದಾವನ ನಿರ್ಮಿಸುವ ಯೋಜನೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ತಾಲೂಕಿನ ಶಾಸಕರು, ಲೋಕಸಭಾ ಕ್ಷೇತ್ರದ ಸಂಸದರು ಸರ್ಕಾರದ ಮೇಲೆ ಒತ್ತಡ ತಂದು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣೆಗೆ ಆಗಮಿಸಿದ್ದಾಗ ಜಲಾಶಯದ ಆಸುಪಾಸಿನಲ್ಲಿ ಗಿಡಗಂಟಿಗಳಿಂದ ಆವೃತ್ತವಾಗಿ ಪಾಳುಬಿದ್ದಿರುವ ಜಲಾಶಯಕ್ಕೆ ಸೇರಿದ 60 ಎಕರೆ ಜಾಗದಲ್ಲಿ ಕೆಆರ್‌ಎಸ್‌ ಮಾದರಿಯಲ್ಲಿ ಬೃಂದಾವನವನ್ನಾಗಿಸಿ ಪ್ರವಾಸಿ ತಾಣ ಮಾಡುವ ಭರವಸೆ ನೀಡಿದ್ದರು.

ಅವರ ಅವಧಿ ಪೂರೈಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರದಲ್ಲೂ ಈ ಯೋಜನೆಯ ಪ್ರಸ್ತಾವನೆಯೇ ಬರಲಿಲ್ಲ. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯ ಬಜೆಟ್‌ನಲ್ಲಿ ಕಬಿನಿಯಲ್ಲಿ ಬೃಂದಾವನ ನಿರ್ಮಾಣಕ್ಕೆ ಅನುದಾನ ಮೀಸಲಿಡಲು ಕ್ಷೇತ್ರ ಶಾಸಕರಾಗಿರುವ ಅನಿಲ್‌ ಚಿಕ್ಕಮಾದು, ಸಂಸದ ಶ್ರೀನಿವಾಸ್‌ ಪ್ರಸಾದ್‌ ಹಾಗೂ ಜಿಲ್ಲೆ ಉಸ್ತುವಾರಿ ಸಚಿವರಾಗಿರುವ ವಿ.ಸೋಮಣ್ಣ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಇದನ್ನು ಶಾಸಕರು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕಿದೆ.

Advertisement

ಹಿಂದೆ ಶಾಸಕರಾಗಿದ್ದ ದಿ.ಚಿಕ್ಕಮಾದು ಅವಧಿಯಲ್ಲಿ ಕಬಿನಿ ಜಲಾಶಯ ಬಳಿ ಬೃಂದಾವನ ನಿರ್ಮಿಸಲು ಐಡೆಕ್‌ ಎಂಬ ಕಂಪನಿ ಟೆಂಡರ್‌ ಪಡೆದಿತ್ತು. ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಟೆಂಡರ್‌, ಕಾಮಗಾರಿ ಭರವಸೆ ಏನಾಯ್ತು ಎಂಬುದು ಯಾರಿಗೂ ತಿಳಿದಿಲ್ಲ. ಮಳೆಗಾಲದಲ್ಲಿ ಕಬಿನಿ ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಆ ಸಂದರ್ಭದಲ್ಲಿ ಬೃಂದಾವನ ನಿರ್ಮಿಸಲು ಮಾತಗಳನ್ನು ಆಡುತ್ತಾರೆ. ಆದರೆ ಕಿಂಚಿತ್ತು ಯಾವುದೇ ಕ್ರಮವನ್ನು ವಹಿಸುವುದಿಲ್ಲ.

ಕಬಿನಿ ಬೃಂದಾವನದಿಂದ ಪ್ರಯೋಜನ ಏನು?: ಕಬಿನಿ ಜಲಾಶಯದ ಹಿಂಭಾಗದಲ್ಲಿ 60 ಎಕರೆಗೂ ಅಧಿಕ ಭೂಮಿ ಇದೆ. ಅನುಪಯುಕ್ತ ಗಿಡ ಗಂಟಿಗಳು ಬೆಳೆದಿದ್ದು, ಪಾಳು ಬಿದ್ದಿದೆ. ಬೃಹತ್‌ ವಿಸ್ತೀರ್ಣದ ಈ ಜಾಗವು ಕೆಆರ್‌ಎಸ್‌ ಮಾದರಿಯಲ್ಲಿ ಬೃಂದಾವನ ನಿರ್ಮಿಸಲು ಯೋಗ್ಯವಾಗಿದೆ. ಸುಸಜ್ಜಿತ ಉದ್ಯಾನ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ಸಿಗಲಿದೆ. ಅಲ್ಲದೇ ಇಲ್ಲಿ ವ್ಯಾಪಾರ, ವಹಿವಾಟು ಹೆಚ್ಚಾಗಿ ಆರ್ಥಿಕತೆ ನೆರವಾಗುವುದರ ಜೊತೆಗೆ ಸ್ಥಳೀಯವಾಗಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಸಹಸ್ರಾರು ಉದ್ಯೋಗ ಲಭಿಸಲಿದೆ. ಎಚ್‌.ಡಿ.ಕೋಟೆ ಶೇ.70 ಭಾಗ ಕಾಡಿನಿಂದ ಕೂಡಿದೆ. ಅಚ್ಚ ಹಸಿರನ್ನು ಹೊಂದಿಕೊಂಡಿರುವ ಸುಂದರ ನಿಸರ್ಗ ತಾಣವಾಗಿದೆ. ಅಲ್ಲದೇ ತಾಲೂಕು ಮೈಸೂರು ಜಿಲ್ಲೆಗೆ ಸೇರಿದ್ದು, ಇಲ್ಲಿನ ಪ್ರೇಕಣೀಯ ಸ್ಥಳಗಳಿಗೆ ಬರುವ ಪ್ರವಾಸಿಗರು ಕಬಿನಿಗೂ ಬರುತ್ತಾರೆ. ಕೆಆರ್‌ಎಸ್‌ ಬೃಂದಾವನದಂತೆ ಇದು ಕೂಡ ಪ್ರಖ್ಯಾತಿ ಬರಲಿದೆ.

ಸಚಿವರು, ಸಂಸದರು, ಶಾಸಕರ ಗಮನಕ್ಕೆ: ಕಬಿನಿ ಜಲಾಶಯ ಬಳಿ ಬೃಂದಾವನ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಗ್ರಹಣ ಬಡಿದಂತಾಗಿದೆ. ಕಳೆದ ವರ್ಷಗಳಿಂದ ಕೇವಲ ಪ್ರಸ್ತಾವನೆ, ಭರವಸೆಯಲ್ಲೇ ಕಾಲ ಕಳೆಯಲಾಗುತ್ತಿದೆ. ಯಾರೊಬ್ಬರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಲ್ಲಿ ಉದ್ಯಾನ ನಿರ್ಮಾಣಕ್ಕೆ ಭೂಮಿ ಸಮಸ್ಯೆ ಇಲ್ಲ. ಬೃಂದಾವನಕ್ಕೆ ಹೇಳಿ ಮಾಡಿಸಿದಂತೆ ಜಲಾಶಯದ ಹಿಂಭಾಗ ಬರೋಬ್ಬರಿ 60 ಎಕರೆ ಭೂಮಿ ಇದೆ. ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದೆ. ಈ ಜಾಗವನ್ನು ಉದ್ದೇಶಿತ ಯೋಜನೆ ಬಳಸಿಕೊಳ್ಳಲು ಬಹುಶಃ ಯಾವುದೇ ಅಡ್ಡಿ ಆತಂಕಗಳು ಇಲ್ಲ.

ಕ್ಷೇತ್ರದ ಶಾಸಕರಾಗಿರುವ ಅನಿಲ್‌ ಚಿಕ್ಕಮಾದು, ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಹಾಗೂ ಈ ಭಾಗದ ಲೋಕಸಭಾ ಸದಸ್ಯರಾದ ವಿ.ಶ್ರೀನಿವಾಸ್‌ ಪ್ರಸಾದ್‌ ಸರ್ಕಾರದ ಮೇಲೆ ಒತ್ತಡ ತಂದು ಈ ಬಾರಿಯ ಬಜೆಟ್‌ನಲ್ಲಿ ಬೃಂದಾವನಕ್ಕಾಗಿ ಅನುದಾನ ಮೀಸಲಿಡಬೇಕಾಗಿದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ತಜ್ಞರ ಸಭೆ ಕರೆದು ರೂಪುರೇಷೆಯನ್ನು ತಯಾರಿಸಬೇಕಾಗಿದೆ. ಈ ವರ್ಷವೇ ಕಬಿನಿ ಡ್ಯಾಂ ಬಳಿ ಕೆಆರ್‌ಎಸ್‌ ಮಾದರಿಯಲ್ಲಿ ಅತ್ಯಾಧುನಿಕ, ಅತ್ಯಾಕರ್ಷಕ ಬೃಂದಾವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ 4 ಜಲಾಶಯಗಳಿವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಎಚ್‌.ಡಿ.ಕೋಟೆ ಪಟ್ಟಣದ ಜನತೆಗೆ ಕೃಷಿಗಿರಲಿ, ಕುಡಿಯವ ನೀರು ಕಲ್ಪಿಸದೇ ಇರುವುದು ವಿಪರ್ಯಾಸ. ಇಂದಿಗೂ ಪಟ್ಟಣದ ನಿವಾಸಿಗರೂ ಶುದ್ಧ ಕುಡಿಯುವ ನೀರಿಲ್ಲದೇ ಬೋರ್‌ವೆಲ್‌ಗ‌ಳ ನೀರು ಕುಡಿಯಬೇಕಾದ ಅನಿವಾರ್ಯತೆ ಇರುವುದು ನಾಚಿಕೆ ಗೇಡಿನ ಸಂಗತಿ.
-ಬಿ.ಉಮಾದೇವಿ, ಗೃಹಿಣಿ

ಕಬಿನಿ ಜಲಾಶಯ ತಾಲೂಕಿನಲ್ಲಿದೆಯಾದರೂ ಜಲಾಶಯದಿಂದ ಕೇವಲ 7 ಸಾವಿರ ಎಕರೆ ಕೃಷಿಗಷ್ಟೇ ಉಪಯುಕ್ತವಾಗಿದೆ. ಇನ್ನು ನೆರೆಯ ಚಾಮರಾಜನಗರ ಜಿಲ್ಲೆಯ 51 ಕೆರೆಕಟ್ಟೆಗಳು ಕಬಿನಿ ಜಲಾಶಯದ ನೀರಿನಿಂದ ಭರ್ತಿಯಾಗಿವೆಯಾದರೂ ತಾಲೂಕಿನ ಕೆರೆಕಟ್ಟೆಗಳು ಭರ್ತಿಯಾಗದೇ ಅಂತರ್ಜಲ ಕುಸಿದು ನೀರಿಗಾಗಿ ಜನ ಜಾನುವಾರುಗಳು ಪರಿತಪಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಾಲೂಕಿನ ಶಾಸಕರು ಇತ್ತ ಗಮನ ಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.
-ರವಿಕುಮರ್‌ ಜಕ್ಕಳ್ಳಿ, ರೈತ

ತಾಲೂಕಿನಲ್ಲಿರುವ 4 ಜಲಾಶಯಗಳ ಪೈಕಿ ತಾಲೂಕಿನ ಜನತೆಗೆ ಉಪಯುಕ್ತವಾಗಿರುವ ತಾರಕ ಜಲಾಶಯದ ಭರ್ತಿಗೆ ಅಧಿಕಾರಿಗಳಷ್ಟೇ ಅಲ್ಲದೇ ಜನಪ್ರತಿನಿಧಿಗಳು ತಾತ್ಸರ ಮನೋಭಾವನೆ ತಾಳಿದ್ದಾರೆ. ಕಬಿನಿ ಜಲಾಶಯದಿಂದ ಕೇವಲ 4 ಕಿ.ಮೀ. ಕಬಿನಿ ಪಾತ್ರದ ಅಂತರದಲ್ಲಿರುವ ಶಿರಮಳ್ಳಿ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು ವಿಷಾದನೀಯ.
-ಹೊನ್ನೇಗೌಡ, ವರ್ತಕರು

ತಾಲೂಕಿನ ಅವೈಜ್ಞಾನಿಕ ಜಲಾಶಯಗಳ ನಿರ್ಮಾಣ, ಆಧುನಿಕ ತಂತ್ರಜ್ಞಾನದ ಅರಿವಿನ ಕೊರತೆಯಿಂದ ತಾಲೂಕಿನ ಜನ ಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. 4 ಜಲಾಶಯಗಳಿದ್ದರೂ ಅಂತರ್ಜಲದ ಮಟ್ಟ ಕಾಪಾಡಿಕೊಳ್ಳುವ ನೈತಿಕ ಹೊಣೆ ಇಲ್ಲ. ಈ ಹಿಂದೆ 60-70ಅಡಿಗೆ ಸಾಕಷ್ಟು ನೀರು ದೊರೆಯುತ್ತಿತ್ತು. ಇದೀಗ ತಾಲೂಕಿನಲ್ಲಿ 700ರಿಂದ 1ಸಾವಿರ ಅಡಿಗಳ ಕೊಳವೆ ಬಾವಿ ಕೊರೆಸಿದರೂ ಸಮರ್ಪಕ ನೀರಿಲ್ಲ. ಇದು ಹೀಗೆಯೇ ಮುಂದುವರಿದರೆ ನೆಲಜಲ ಸಂಪತ್ತಿನಿಂದ ಕೂಡಿರುವ ತಾಲೂಕು ಭರದ ಛಾಯೆ ಎದುರಿಸಬೇಕಾಗುತ್ತದೆ.
-ರಘುನಾಥನ್‌, ರೈತ

ಇಂದು ಜಲಾಶಯಗಳಿಗೆ ಹೊಂದಿಕೊಂಡಂತಿರುವ ಗ್ರಾಮಸ್ಥರೇ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಈಗಲೇ ಸರ್ಕಾರ ಮತ್ತು ಸಮುದಾಯ ಎಚ್ಚೆತ್ತುಕೊಂಡು ಜಲ ಸಂರಕ್ಷಣೆಗೆ ಮುಂದಾಗದೇ ಇದ್ದರೆ ಈಗ ಹಿಂದುಳಿದ ತಾಲೂಕು ಅನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಎಚ್‌.ಡಿ.ಕೋಟೆ ಬರ ಘೋಷಿತ ತಾಲೂಕು ಅನಿಸಿಕೊಳ್ಳುವುದರಲ್ಲಿ ಸಂಶಯ ಇಲ್ಲ. ಈ ಸತ್ಯ ಅರಿತು ಸರ್ಕಾರ ನೀರು ಮತ್ತು ಅಂತರ್ಜಲ ಸಂರಕ್ಷಣೆಗೆ ಮುಂದಾಗಬೇಕಿದೆ.
-ಶೀಲಾ, ಸಮಾಜ ಸೇವಕಿ

ನನ್ನ ಶಾಸಕ ಅವಧಿಯಲ್ಲಿಯೇ ತಾಲೂಕಿನ ಕಬಿನಿ ಜಲಾಶಯದಲ್ಲಿರುವ ಖಾಲಿ ಜಾಗ ಬೃಂದಾನವನ್ನಾಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ದಾಖಲೆಗಳ ಜೊತೆ ಎಲ್ಲಾ ತಯಾರಿ ನಡೆಸಿದ್ದೆ. ಅಷ್ಟರಲ್ಲಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪರಾಭವಗೊಂಡು ಸುಮ್ಮನಾದೆ. ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಖಾಲಿ ಬಿದ್ದಿರುವ ಜಲಾಶಯದ ಜಾಗವನ್ನು ಕೂಡಲೇ ಬೃಂದಾವನವನ್ನಾಗಿಸಿ ಪ್ರವಾಸಿ ತಾಣವನ್ನಾಗಿಸಬೇಕಿದೆ.
-ಚಿಕ್ಕಣ್ಣ, ಮಾಜಿ ಶಾಸಕ

ತಾಲೂಕಿನ ಅಭಿವೃದ್ಧಿಯ ಸತ್ಕಾರ್ಯವಿದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯಂತೆ ಈ ಕಾರ್ಯಕ್ಕೆ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಕಬಿನಿ ಜಲಾಶಯದಲ್ಲಿ ಪಾಳುಬಿದ್ದಿರುವ ಜಾಗ ಬೃಂದಾವನವನ್ನಾಗಿಸಲು ಮುಂದಾಗಬೇಕು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೊತೆ ಈಗಾಗಲೇ ಈ ವಿಚಾರವಾಗಿ ನಮ್ಮ ಪಕ್ಷದ ತಾಲೂಕು ಮತ್ತು ಜಿಲ್ಲಾ ಕಾರ್ಯಕರ್ತರು ಚರ್ಚಿಸಿದ್ದೇವೆ. ಮುಖ್ಯಮಂತ್ರಿಗಳ ಆದೇಶದಂತೆ ಬೃಂದಾವನ ನಿರ್ಮಾಣಕ್ಕೆ 5 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ತಾಲೂಕಿನ ಜನರ ಜೊತೆ ಅಧಿಕಾರಿಗಳು ಕೈಜೋಡಿಸಿ ಅಭಿವೃದ್ಧಿಗೆ ಶ್ರಮಿಸಬೇಕು.
-ಸಿ.ಕೆ.ಗಿರೀಶ್‌, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ

ಜಲಾಶಯ ಬಳಿಯ ಖಾಲಿ ಜಾಗ ಬೃಂದಾವನವನ್ನಾಗಿಸಲು ಈಗಾಗಲೇ ಸರ್ಕಾರದ ಆದೇಶದಂತೆ ಹಲವಾರು ಪ್ರಕ್ರಿಯೆಗಳು ನಡೆದಿವೆ. ಅವುಗಳನ್ನು ಹೇಳಿಕೊಳ್ಳುವುದು ಕಷ್ಟಕರವಾಗುತ್ತದೆ. ಖುದ್ದು ಕಚೇರಿಯಲ್ಲಿ ದಾಖಲಾತಿಗಳ ಸಮೇತ ಪರಿಶೀಲಿಸಿ ಮಾಹಿತಿ ನೀಡದರೆ ಮಾತ್ರ ಬೃಂದಾವನದ ಪರಿವರ್ತನೆ ಕಾರ್ಯ ಯಾವ ಹಂತದಲ್ಲಿದೆ ಅನ್ನುವುದು ತಿಳಿಯಲಿದೆ.
-ಸುಜಾತ, ಕಬಿನಿ ಕಾರ್ಯಪಾಲಕ ಅಭಿಯಂತರರು

ಎಚ್‌.ಡಿ.ಕೋಟೆ ಎಂದೊಡನೆ ರಾಜ್ಯದ ಜನತೆಗೆ ಗೋಚರಿಸುವುದು ಕಬಿನಿ ಜಲಾಶಯ. ಈ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಸಾವಿರಾರು ಮಂದಿ ನೆಲೆಕಳೆದುಕೊಂಡು ನೆರೆಯ ಜಿಲ್ಲೆ ತಾಲೂಕುಗಳ ಕೃಷಿ ಮತ್ತು ಕುಡಿಯುವ ನೀರಿಗೆ ಸಹಕಾರಿಯಾಗಿದ್ದಾರೆ. ಜಲಾಶಯದಿಂದ ತಾಲೂಕಿನ ಜನ ಜಾನವಾರುಗಳಷ್ಟೇ ಅಲ್ಲದೆ ಕೃಷಿಗೂ ಉಪಯೋಗವಿಲ್ಲ. ಕೊನೆಯ ಪಕ್ಷ ತಾಲೂಕಿನ ಅಭಿವೃದ್ಧಿ ಮತ್ತು ತಾಲೂಕಿನ ಜನತೆಯ ಉದ್ಯೋಗದ ಸಲುವಾಗಿಯಾದರೂ ಸರ್ಕಾರ ಚಿಂತಿಸಿ ಕಬಿನಿ ಜಲಾಶಯದ ಪಾಳುಬಿದ್ದಿರುವ ಜಾಗವನ್ನು ಬೃಂದಾವನವನ್ನಾಗಿಸಿ ದೋಣಿ ವಿಹಾರಕ್ಕೆ ಅನುವು ಮಾಡಿಕೊಡುವ ಮೂಲಕ ಪ್ರವಾಸಿ ತಾಣವನ್ನಾಗಿಸಬೇಕಿದೆ.
-ಉಮೇಶ್‌ ಬಿ.ನೂರಲಕುಪ್ಪೆ, ಜೀವಿಕ ಜಿಲ್ಲಾ ಕಲಾ ಸಂಚಾಲಕ

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next