Advertisement

ಶತಮಾನ ಕಂಡ ಶಾಲೆಯಲ್ಲಿ 155 ವಿದ್ಯಾರ್ಥಿಗಳ ವಿದ್ಯಾಭ್ಯಾಸ

09:18 PM Nov 10, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಕಾರ್ಕಳ: 1918ರಲ್ಲಿ ಏಲಾ°ಡುಗುತ್ತು ಶಿವಪ್ಪ ಹೆಗ್ಡೆ ಅವರು ಕಾರ್ಕಳ ಪುರಸಭಾ ವ್ಯಾಪ್ತಿಯ ಕಾಬೆಟ್ಟು ಎಂಬಲ್ಲಿ ವಿದ್ಯಾದೇಗುಲವೊಂದನ್ನು ಕಟ್ಟಿದರು. ಶತಮಾನ ಕಂಡ ಶಾಲೆಗಳಲ್ಲಿ ಒಂದಾಗಿರುವ ಕಾಬೆಟ್ಟು ಸರಕಾರಿ ಹಿ.ಪ್ರಾ. ಶಾಲೆ ಕಾರ್ಕಳ ಮುಖ್ಯರಸ್ತೆಯ ಪಕ್ಕದಲ್ಲೇ ಇದೆ. 1972ರಲ್ಲಿ ದಿ| ಗೋವಿಂದ ರಾವ್‌ ಅವರು ಮುಖ್ಯ ಶಿಕ್ಷಕರಾಗಿ ನಿಯುಕ್ತಿಗೊಂಡಿದ್ದರು. ಪ್ರಸ್ತುತ ಕಾಬೆಟ್ಟು ಶಾಲೆಯಲ್ಲಿ 155 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕಿ ಆಶಾಲತಾ ಸೇರಿದಂತೆ ಒಟ್ಟು 6 ಮಂದಿ ಸಹಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ವಿವಿಧ ಚಟುವಟಿಕೆ
ಪಾಠದೊಂದಿಗೆ ಹಲವಾರು ಪಠ್ಯೇತರ ಚಟುವಟಿಕೆ ಗಳಿಗೂ ಆದ್ಯತೆ ನೀಡಲಾಗಿದೆ. ಖ್ಯಾತ ಯೋಗಪಟು ನರೇಂದ್ರ ಕಾಮತ್‌ ಅವರಿಂದ ಯೋಗ ಶಿಕ್ಷಣ, ಮಕ್ಕಳಿಗೆ ಗುಬ್ಬಚ್ಚಿ ನ್ಪೋಕನ್‌ ಇಂಗ್ಲಿಷ್‌ ತರಬೇತಿ, ಕಂಪ್ಯೂಟರ್‌ ಶಿಕ್ಷಣ, ನಲಿ-ಕಲಿ ತರಗತಿ ವ್ಯವಸ್ಥೆಗಳು ಶಾಲೆಯಲ್ಲಿವೆ.

ಸಂಭ್ರಮದ ಶತಮಾನೋತ್ಸವ
2019ರ ಸೆ. ತಿಂಗಳಿನಲ್ಲಿ ಶಾಲಾ ಶತಮಾನೋತ್ಸವ ಜರಗಿತ್ತು. ಇದರ ಅಂಗವಾಗಿ ಶಾಲಾ ಮುಂಭಾಗ ಅಸೆಂಬ್ಲಿ ಸಭಾಂಗಣ, ಸಮಗ್ರ ಕಟ್ಟಡ ನವೀಕರಣ, ವಿದ್ಯುದೀಕರಣ, ಅತ್ಯಾಧುನಿಕ ಶೌಚಾಲಯ ನಿರ್ಮಾಣ, ಸ್ಮಾರ್ಟ್‌ ಲರ್ನಿಂಗ್‌ ತರಬೇತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯಕರವಾದ ಊಟದ ವ್ಯವಸ್ಥೆ, ಮಳೆ ನೀರಿನ ಕೊಯ್ಲು (ಇಂಗು ಗುಂಡಿ) ತರಕಾರಿ ತೋಟ, ಆಟದ ಮೈದಾನ ವಿಸ್ತರಣೆ ಹೀಗೆ ಸುಮಾರು 45 ಲ.ರೂ.ನ ವಿವಿಧ ಕಾಮಗಾರಿಗಳನ್ನು ನಡೆಸಲಾಗಿತ್ತು. ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ನವೀನ್‌ಚಂದ್ರ ಶೆಟ್ಟಿ ಕಾರ್ಯನಿರ್ವಹಿಸಿದ್ದರು.

ಸಾಧಕ ಹಳೆವಿದ್ಯಾರ್ಥಿಗಳು
ಕಾರ್ಕಳದಲ್ಲಿ ಗೋಡಂಬಿ ಉದ್ಯಮ ಆರಂಭಿಸಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿರುವ ಬೋಳ ಪ್ರಭಾಕರ ಕಾಮತ್‌, ಬೋಳ ರಮಾನಾಥ ಕಾಮತ್‌, ಭಾರತೀಯ ಸೈನ್ಯದಲ್ಲಿ ಉನ್ನತ ಅಧಿಕಾರಿಯಾಗಿರುವ ಪ್ರಫ‌ುಲ್ಲಾ ಮಿನೇಜಸ್‌, ಕೆಇಎಂಎಸ್‌ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿರುವ ಇಮಿ¤ರಾಜ್‌ ಅಹಮ್ಮದ್‌, ನಿಟ್ಟೆ ವಿದ್ಯಾಸಂಸ್ಥೆಯ ಸದಸ್ಯರಾದ ಅರವಿಂದ ಹೆಗ್ಡೆ, ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್‌ ಚಿಪ್ಳೂಣ್‌ಕರ್‌ ಸೇರಿದಂತೆ ಹಲವು ಗಣ್ಯರು ಈ ಶಾಲೆಯ ಹಳೆ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದವರಿದ್ದಾರೆ.

Advertisement

ಶಾಲೆಗೆ ಭೇಟಿ ನೀಡಿದ ಗಣ್ಯರು
ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಾ| ಎಂ. ವೀರಪ್ಪ ಮೊಯ್ಲಿಯವರ ಮತದಾನ ಕೇಂದ್ರ ಇದೇ ಶಾಲೆಯಾಗಿತ್ತು. ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಎನ್‌. ವಿನಯ ಹೆಗ್ಡೆ, ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಸಂಸದೆ ಶೋಭಾ ಕರಂದ್ಲಾಜೆ ಈ ಶಾಲೆಗೆ ಭೇಟಿ ನೀಡಿದ್ದಾರೆ.

ಅಮರ್‌ ಜವಾನ್‌ ಸ್ಮಾರಕ
ಎಳವೆಯಲ್ಲೇ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಗಾಗಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಮರ್‌ ಜವಾನ್‌ ಸ್ಮಾರಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೆ.ಎಸ್‌. ಹರೀಶ್‌ ಶೆಣೈ ತಿಳಿಸಿದರು.

ದಾನಿಗಳ ಸಹಕಾರದೊಂದಿಗೆ ಶಾಲೆ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ಮುಂದಿನ ದಿನಗಳಲ್ಲಿ ಶಾಲೆ ಉತ್ತಮ ಫ‌ಲಿತಾಂಶ ದಾಖಲಿಸುವ ನಿಟ್ಟಿನಲ್ಲಿ ಶಿಕ್ಷಕರ ತಂಡ ಕಾರ್ಯಪೃವೃತ್ತವಾಗಿದೆ.
-ಆಶಾಲತಾ , ಮುಖ್ಯ ಶಿಕ್ಷಕಿ

60 ವರ್ಷಗಳ ಹಿಂದೆ ನಾನು ಕಾಬೆಟ್ಟು ಶಾಲೆಯ ವಿದ್ಯಾರ್ಥಿ ಯಾಗಿದ್ದೆ. ಸರಕಾರಿ ಶಾಲೆಯೊಂದು ಇದೀಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ. ಮುಂದಿನ ದಿನಗಳಲ್ಲಿ ಹೈಸ್ಕೂಲ್‌ ಆರಂಭವಾಗಬೇಕೆನ್ನುವ ಕನಸು ನಮ್ಮದು.
-ಕೆ.ಎಸ್‌. ಮಹಮ್ಮದ್‌ ಮಸೂದ್‌, ವಿಧಾನ ಪರಿಷತ್‌, ಮಾಜಿ ಮುಖ್ಯ ಸಚೇತಕರು.

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next