Advertisement

ಕಬಕ: ಶುದ್ಧ ನೀರು ಘಟಕಕ್ಕೆಉದ್ಘಾಟನೆ ಭಾಗ್ಯ ಕಲ್ಪಿಸಿ

04:24 PM Jan 26, 2018 | Team Udayavani |

ಕಬಕ : ಇಲ್ಲಿನ ಜಂಕ್ಷನ್‌ ಶಾಲಾ ರಸ್ತೆಯ ಪಕ್ಕ ವರ್ಷಗಳ ಹಿಂದೆ ನಿರ್ಮಾಣಗೊಂಡ ಸಾರ್ವಜನಿಕ ಶುದ್ಧ ನೀರಿನ ಘಟಕ ಉದ್ಘಾಟನೆಗೊಳ್ಳದೆ ಹಾಳಾಗುತಿದೆ.

Advertisement

ಗುತ್ತಿಗೆದಾರರು ಕಾಮಗಾರಿ ಮುಗಿಸಿ ಬೀಗ ಜಡಿದು ಹೋಗಿದ್ದಾರೆ. ಆಮೇಲೆ ಇದರತ್ತ ಯಾರೂ ಸುಳಿದಂತಿಲ್ಲ. ಕಾಮಗಾರಿ ಪೂರ್ಣಗೊಂಡಿದ್ದರೂ ಅದನ್ನು ಉದ್ಘಾಟಿಸಿ, ಗ್ರಾಮಸ್ಥರ ಸೇವೆಗೆ ಒದಗಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸುಮ್ಮನಿದ್ದಾರೆ. ಇದಕ್ಕೇನು ಕಾರಣ ಎಂಬ ಜಿಜ್ಞಾಸೆ ಗ್ರಾಮಸ್ಥರಲ್ಲಿ ಮೂಡಿದೆ.

ಸಾರ್ವಜನಿಕ ಹಣ ಪೋಲು
ಇದು ಒಂದು ಘಟಕದ ಕಥೆಯಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿರ್ಮಿಸಿದ ಶುದ್ಧ ನೀರು ಘಟಕಗಳ ಪರಿಸ್ಥಿತಿಯೂ ಇದೇ ಆಗಿದೆ. ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುರ ಜಂಕ್ಷನ್‌ ಸೇರಿ ಎರಡು ಘಟಕ ನಿರ್ಮಾಣ ಮಾಡಲಾಗಿದೆ. ಹತ್ತಿರದ ಇಡ್ಕಿದು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿತ್ತೂರು ಶಾಲೆ ಹತ್ತಿರ, ಸೂರ್ಯ, ಉರಿಮಜಲಿನಲ್ಲೂ ಘಟಕಗಳನ್ನು ಸ್ಥಾಪಿಸಲಾಗಿದೆ. ಎಲ್ಲಿಯೂ ಇದರ ಉಪಯೋಗ ಜನರಿಗೆ ಸಿಕ್ಕಿಲ್ಲ. ಒಂದು ಘಟಕಕ್ಕೆ ಸುಮಾರು 5 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚ ತಗಲುತ್ತದೆ. ಸಾರ್ವಜನಿಕ ಹಣ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೇಗೆ ಪೋಲಾಗುತ್ತದೆ ಎಂಬುದಕ್ಕೆ ಇದೇ ನಿದರ್ಶನ. ಗ್ರಾ.ಪಂ. ಗಳಲ್ಲಿ ವಿಚಾರಿಸಿದರೂ ಈ ಘಟಕದ ಬಗ್ಗೆ ಮಾಹಿತಿ ಇಲ್ಲ. ನಿರ್ಮಿಸಿ ಹೋಗಿದ್ದಾರೆ. ನೀರಿನ ಸಂಪರ್ಕ ನೀಡಲಾಗಿದೆ. ಬೇರಾವ ಮಾಹಿತಿಯೂ ನಮಗಿಲ್ಲ ಎನ್ನುತ್ತಾರೆ.

1 ರೂ.ಗೆ 10 ಲೀ ನೀರು
ಒಂದು ರೂ. ನಾಣ್ಯ ಹಾಕಿದರೆ 10 ಲೀ. ಶುದ್ಧ ನೀರು ಕೊಡುತ್ತವೆ. ದಿನದ 24 ಗಂಟೆಯೂ ಸೇವೆ ನೀಡುತ್ತವೆ. ಗ್ರಾಮೀಣ ಜನರಿಗೆ ಕಡಿಮೆ ದರದಲ್ಲಿ ಶುದ್ಧ ನೀರು ಒದಗಿಸುವ ಉದ್ದೇಶ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉದಾಸೀನದಿಂದ ಈಡೇರಿಲ್ಲ. ಗುತ್ತಿಗೆದಾರರು ತಮಗೆ ತೋಚಿದ ರೀತಿಯಲ್ಲಿ ಕೆಲಸ ಮುಗಿಸಿ ಹೋಗಿದ್ದಾರೆ. ಆದರೆ, ಇದರ ನಿರ್ವಹಣೆಯ ಜವಾಬ್ದಾರಿ ಇನ್ನೂ ಸ್ಥಳೀಯಾಡಳಿತಗಳಿಗೆ ಬಂದಿಲ್ಲ. ಕಬಕ ಜಂಕ್ಷನ್‌ ಘಟಕದ ನೀರಿನ ಟ್ಯಾಂಕಿಗೂ ಹಾನಿಯಾಗಿದೆ. ಇಡ್ಕಿದು ಸೂರ್ಯ ಘಟಕದಲ್ಲಿ ಅಶುದ್ಧ ನೀರು ಬರುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಕುರಿತು ಪರಿಶೀಲಿಸಿ, ಯೋಜನೆಯ ಫ‌ಲ ಗ್ರಾಮೀಣ ಜನರಿಗೆ ಸಿಗುವಂತೆ ಮಾಡಬೇಕಿದೆ.

ಮಾಹಿತಿ ಇಲ್ಲ
ನಮ್ಮ ಗ್ರಾಮದಲ್ಲಿ ಮೂರು ಕಡೆ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಇದರ ನಿರ್ವಹಣೆ ಯಾರು ಮಾಡುತ್ತಾರೆ ಎಂಬ ಮಾಹಿತಿ ಇಲ್ಲ. ಉದ್ಘಾಟನೆಯೂ ಆಗಿಲ್ಲ. ಅದರ ಕಾಯಿನ್‌ ಸಂಗ್ರಹಿಸುವ ಬಗ್ಗೆಯೂ ಗೊತ್ತಿಲ್ಲ. 
ಗೋಕುಲ್‌ದಾಸ್‌ ಭಕ್ತ, ಇಡ್ಕಿದು
   ಗ್ರಾ.ಪಂ. ಪಿಡಿಒ

Advertisement

ಹಲವು ತೊಂದರೆ
ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಹಲವು ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಉದ್ಘಾಟನೆ ಮಾಡಿಲ್ಲ. ಅದಕ್ಕಾಗಿ ಒಂದು ಸಮಿತಿ ರಚಿಸಲಾಗಿದೆ. ಅದು ಜಿಲ್ಲೆಯಾದ್ಯಂತ ತೆರಳಿ ಘಟಕಗಳ ಪರಿಶೀಲನೆ ನಡೆಸಲಿದೆ. ಶೀಘ್ರವಾಗಿ ಜನರಿಗೆ ಇದರ ಪ್ರಯೋಜನ ಸಿಗುವಂತೆ ಮಾಡಲಾಗುವುದು.
ಶಯನಾ ಜಯಾನಂದ,
   ಜಿ.ಪಂ. ಸದಸ್ಯೆ

ಉಮ್ಮರ್‌ ಜಿ. ಕಬಕ

Advertisement

Udayavani is now on Telegram. Click here to join our channel and stay updated with the latest news.

Next