ನಟಿ ಕಾಜಲ್ ಕುಂದರ್ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಪೆಪೆ’. ಟ್ರೇಲರ್ ಮೂಲಕ ಸದ್ದು ಮಾಡಿರುವ ವಿನಯ್ ರಾಜ್ ಕುಮಾರ್ ಅವರ “ಪೆಪೆ’ ಚಿತ್ರ ನಾಳೆ ತೆರೆಕಾಣುತ್ತಿದೆ.
ರೆಗ್ಯುಲರ್ ಶೈಲಿ ಬಿಟ್ಟು ಕಲ್ಟ್ ಸಿನಿಮಾವಾಗಿ ತಯಾರಾಗಿರುವ ಈ ಸಿನಿಮಾದಲ್ಲಿ ನಾಯಕಿಯಾಗಿರುವ ಕಾಜಲ್ ಕುಂದರ್‌ಗೆ ತಮ್ಮ ಪಾತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲವಿದೆ. ಅದಕ್ಕೆ ಕಾರಣ ಅವರ ಪಾತ್ರ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಕಾಜಲ್‌ಗೆ “ಪೆಪೆ’ ಸಿನಿಮಾದಲ್ಲಿ ಭಿನ್ನವಾದ ಪಾತ್ರವೇ ಸಿಕ್ಕಿದೆಯಂತೆ. ಚಿತ್ರದಲ್ಲಿ ಸಿಂಧೂ ಎಂಬ ಶಿಕ್ಷಕಿಯ ಪಾತ್ರ. ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ನೇರಾನೇರ ಹೇಳುವಂತಹ ಪಾತ್ರ. ಅದೇ ಕಾರಣದಿಂದ ಈ ಪಾತ್ರದ ಮೇಲೆ ಕಾಜಲ್ ಸ್ವಲ್ಪ ಹೆಚ್ಚೇ ನಿರೀಕ್ಷೆ ಇಟ್ಟಿದ್ದಾರೆ.
ಇನ್ನು ಕಾಜಲ್ ಅವರ ಪಾತ್ರದಲ್ಲಿ ಹಲವು ಭಾವನೆಗಳನ್ನು ವ್ಯಕ್ತಪಡಿಸುವ ಸವಾಲು ಇತ್ತಂತೆ. ಅದೇ ಕಾರಣದಿಂದ ಈ ಪಾತ್ರಕ್ಕಾಗಿ ಒಂದಷ್ಟು ರಿಹರ್ಸಲ್ ಕೂಡಾ ಮಾಡಿದ್ದಾರಂತೆ. ಇದೊಂದು ಗ್ರಾಮೀಣ ಸೊಗಡಿನ ಪಾತ್ರವಾದ್ದರಿಂದ ಇಡೀ ಸಿನಿಮಾ ಒಂದು ಹೊಸ ಅನುಭವ ನೀಡಿತು’ ಎನ್ನುತ್ತಾರೆ ಕಾಜಲ್.
ಅಂದಹಾಗೆ, ಮೊದಲು ಮರಾಠಿಯ “ಶುಭಸ್ಯ ಶೀಘ್ರಂ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಾಜಲ್ ಕುಂದರ್, ಅದಾದ ನಂತರ ಹಿಂದಿ ಸಿನಿಮಾ ಒಂದರಲ್ಲಿ ಅಭಿನಯಿಸಿದ್ದರು. ಬಳಿಕ ಕನ್ನಡದತ್ತ ಮುಖ ಮಾಡಿದ್ದ ಕಾಜಲ್ ಎರಡು ತುಳು ಸಿನಿಮಾಗಳಲ್ಲೂ ಅಭಿನಯಿಸಿದ್ದರು.
ಅದಾದ ನಂತರ ಕನ್ನಡದಲ್ಲಿ “ಮಾಯಾ ಕನ್ನಡಿ’, “ಬಾಂಡ್ ರವಿ’ ಸಿನಿಮಾಗಳಲ್ಲಿ ಕಾಜಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ “ಕೆಟಿಎಮ್’ ಸಿನಿಮಾದಲ್ಲೂ ನಟಿಸಿದ್ದರು.