ಅವರ ಕಾವ್ಯಾರಂಭದ ದಿನಗಳಲ್ಲಿ ನನ್ನ ಮನಸ್ಸಿಗೆ ಸೇರಿದ ಕೇರಳ ಎಂಬ ಕವಿತೆಯ ಕೆಲವು ಸಾಲುಗಳನ್ನು ಗಮನಿಸಿ.
Advertisement
ಏನೋ ಹೇಳಬೇಕುಏನೆಂಬುದು ಮಬ್ಬು
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಇದು ನಿಜವಾದ ಕವಿಯ ಆತ್ಮಲಕ್ಷಣ. ನನಗೆಲ್ಲವೂ ಗೊತ್ತಿದೆ. ಅದನ್ನು ನಿಮಗೆ ಹೇಗೆ ತಿಳಿಹೇಳಬೇಕೆಂಬುದೂ ಗೊತ್ತಿದೆ ಎಂಬ ಸರ್ವಜ್ಞತ್ವದಲ್ಲಿ ಪೀಠಪ್ರಣಾಳಿಗಳಾಗಿ ನಿಲ್ಲುವ ಕವಿಗಳೇ ನಮ್ಮಲ್ಲಿ ಹೆಚ್ಚು. ಅಂಥವರ ನಡುವೆ ಈ ತಿರುಮಲೇಶ ಬೆರೆತೂ ಬೆರೆಯದೆ ಪ್ರತ್ಯೇಕ ನಿಲ್ಲುವ, ಏಕಾಂಗಿಯೂ ಬಹುತ್ವದ ಆರಾಧಕನೂ ಒಮ್ಮೆಗೇ ಆಗಿರುವ ಬೆರಗು ತರಿಸುವ ಕವಿ.
Related Articles
ದೈವವಿರಲಿಲ್ಲ ಯಾವ ದೇವರೂ ಬರಲಿಲ್ಲ
ಬಂದವನೊಬ್ಬ ಮಾನವ. ಶಿಲೆಯಿಂದ ಶಿಲ್ಪವ
ತೆಗೆಯ ಬಯಸಿದನು, ಬಿಡಿಸ ಬಯಸಿದನು.
Advertisement
ಶಾಪದ ಸೆರೆಯಿಂದ ಆ ಅಂಥ ಛಂದಕಣ್ಣುಗಳೆಲ್ಲಿ ತುಟಿಗಳೆಲ್ಲಿ ತೋಳುಗಳೆಲ್ಲಿ
ಎಲ್ಲಿ ಮರ್ತ್ಯಕ್ಕೆ ಸ್ವರ್ಗವ ತಂದ ನಿಸರ್ಗ
ಎವೆ ಅದುರಿತೆ ಮುಟ್ಟಿದ ಕೈ ಕಂಪಿಸಿತೆ
ಉಳಿಯ ಹೊಡೆತವೊ ಅದು ನಾಡಿ ಮಿಡಿತವೊ
ಯಾರೂ ಇರದಲ್ಲಿ ಉತ್ತರಿಸುವವರಾರಿಲ್ಲ
ಅವರವರ ಭಾವಕ್ಕೆ ತಕ್ಕಂತೆ ರೆಕ್ಕೆ
ತೆರೆಯುವ ಮನಸ್ಸು ಹೂಡುವ ಪ್ರತ್ಯೇಕ ತಪಸ್ಸು
ಅದೋ ಅದೋ! ನೋಡಿ ಸಾವಿರ ಕಣ್ಣು ಒಮ್ಮೆಲೆ ಮೂಡಿ
ಆಹಾ ! ಪ್ರತಿಯೊಂದು ಕಲ್ಪಕ್ಕೂ ಪ್ರತ್ಯೇಕ ಶಿಲ್ಪ
ಇಂದ್ರ, ಗೌತಮರನ್ನು ಬದಿಗಿರಿಸಿ. ಇಲ್ಲಿ ಪುನಶ್ಚೇತನದ ತಪಸ್ಸು ಸಂಭವಿಸಿದ್ದು ಎರಡು ನೆಲೆಗಳಲ್ಲಿ. ಕಲ್ಲಲ್ಲಿ ಕಲ್ಲಾಗಿರುವ ಅಹಲ್ಯೆಯ ಚೈತನ್ಯಾಂಕಾಕ್ಷೆಯ ತೀವ್ರ ಬಯಕೆಯಲ್ಲಿ. ಆಕೆಯ ಬಯಕೆ ಪೂರೈಸುವ, ಆಕೆಗೆ ಮತ್ತೆ ಚೈತನ್ಯ ಕರುಣಿಸುವ ಕವಿಯ ಮಾನವ್ಯದ ತಪಸ್ಸಿನಲ್ಲಿ !
ಇಂಥ ಪುನರ್ಯೋಗದ ಹಲವು ಪ್ರಸಂಗಗಳು ತಿರುಮಲೇಶರ ಕಾವ್ಯದಲ್ಲಿ ಕಥಿತವಾಗಿವೆ. ದ್ವಾಸುಪರ್ಣಾದ ಪ್ರಾಚ್ಯಪ್ರತಿಮೆ ತಿರುಮಲೇಶರಲ್ಲಿ ನಾಯಿ ಹಾಗೂ ನಾಯಿಯಗೊಂಬೆ ಎಂಬ ಪದ್ಯದಲ್ಲಿ ಈವತ್ತಿಗೆ ಬೇಕಾದ ಅರ್ಥ ಆಕಾರ ಸಾಧಿಸುವ ಬೆಡಗು ಕಾಣಬಹುದು. ಅವರ ಸುಪ್ರಸಿದ್ಧ ಮಹಾಪ್ರಸ್ಥಾನ ಸ್ವಂತದ ಸ್ವರ್ಗದ ಅನ್ವೇಷಣೆಗೆ ಹೊರಡುವ ಸಾಧಕನೊಬ್ಬನ ಏಕಾಂಗಿ ಹೋರಾಟದ ಎದೆ ಝಲ್ಲೆನಿಸುವ ಅನುಭವಕ್ಕೆ ನಮ್ಮನ್ನು ಕರೆದೊಯ್ಯುವುದು. ಮುಖಾಮುಖೀಯಲ್ಲಿ ಆಕಸ್ಮಾತ್ ಭೆಟ್ಟಿಯಾಗುವ ಮನುಷ್ಯ ಮತ್ತು ಪ್ರಾಣಿ ಸ್ವಂತದ ಹಕ್ಕು ಮತ್ತು ಅಸ್ಮಿತೆಗಾಗಿ ಹೋರಾಡುವ ಯಾವತ್ತಿನ ಕರ್ಷಣೆಗೆ ಮೈ ತೆರೆಯಲಾಗುವುದು. ಚಿಲಿ ಕವಿ ಪ್ಯಾಬ್ಲೊ ನೆರೂಡನ ಹಾಗೆ ತಿರುಮಲೇಶ ತ್ಯಾಜ್ಯದಿಂದ ಹೊಸ ಹೊಸ ಅರ್ಥಶಿಲ್ಪ ಕೆತ್ತುವ ಕರ್ಮಕುಶಲಿ. ಅವರ ಲಯಗಾರಿಕೆ ಮತ್ತು ಭಾಷಾಹೂರಣ ಬಹು ವಿಸ್ತಾರವಾದದ್ದು. ಎಷ್ಟು ವಿಸ್ತಾರ ಸಾಧ್ಯವೋ ಅಷ್ಟು ವಿಸ್ತಾರವನ್ನು ಆಪೋಹ ಮಾಡುವಂಥದ್ದು. ತಮಾಷೆಯನ್ನು ಲಘುತ್ವವನ್ನು ಬಿಡದೆ ಗಹನಕ್ಕೆ ಕೈಚಾಚುವಂಥದ್ದು. ಆತ್ಮ-ದೇಹಗಳ ಯಾವತ್ತಿನ ದ್ವಂದ್ವವನ್ನು ಹೊಸ ರೂಪಕಕ್ಕೆ ಆಹ್ವಾನಿಸುವ ಯಾಜ್ಞವಲ್ಕ್ಯನೂ ಮೈತ್ರೇಯಿಯೂ ಎಂಬ ಸೊಗಸಾದ ಕವಿತೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಯಾಜ್ಞವಲ್ಕ್ಯನೆಂಬ ಒಬ್ಬ ಋಷಿ ಆತ್ಮವಿದ್ಯೆಯನ್ನು ತನ್ನ ಇಬ್ಬರು ಪತ್ನಿಯರಲ್ಲಿ ಯಾರಿಗೆ ಬೋಧಿಸಬೇಕು ಎಂದು ನಿರ್ಣಯಿಸುವ ರೋಚಕ ಕ್ಷಣದಲ್ಲಿ ಕವಿತೆ ಪ್ರಾರಂಭವಾಗುತ್ತದೆ.
ಯಾಜ್ಞವಲ್ಕ್ಯ ಹೇಳಿದ ಮೈತ್ರೇಯಿಯ ಕರೆದು: ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ
ತಲೆಯೆಂದರೆ ನಿನ್ನದೆ! ಆದ್ದರಿಂದ
ಆತ್ಮವಿದ್ಯೆ ನಿನಗೇ
ಕಲಿಸುವೆ ನಾನು ಪ್ರತ್ಯಕ್ಷ!
ಮುಂದೆ ಯಾಜ್ಞವಲ್ಕ್ಯ ಅನೇಕ ಸಾಮಿತಿಗಳ ಮೂಲಕ ಆತ್ಮವಿದ್ಯೆಯನ್ನು ಮೈತ್ರೇಯಿಗೆ ಬೋಧಿಸುತ್ತಾನೆ. ದೇಹದಿಂದ ಉತ್ಪಾದಿತವಾಗಿಯೂ ಅತೀಂದ್ರಿಯ ಎನ್ನಿಸುವ ಅರಿವಿನ ಸಂಗತಿಯನ್ನು ನಗಾರಿಯ ನಾದ ಸರ್ವವ್ಯಾಪಿಯಾಗುವ, ಕೈಯಿಂದ ಉದ್ಭವಿಸಿಯೂ ಕೈಮೀರುವ ಹೋಲಿಕೆಗಳ ಮೂಲಕ ಪ್ರತಿಪಾದಿಸುವನು. ಹಸಿ ಕಟ್ಟಿಗೆಯಿಂದ ಹುಟ್ಟಿದ ಹೊಗೆ ಹೇಗೋ ಹಾಗೇ ಆತ್ಮದಿಂದ ಎಲ್ಲವೂ ಹುಟ್ಟುವುದನ್ನು ವಿವರಿಸುವನು. ದೋಣಿ ತೂತಾದಾಗ ದೋಣಿಯಿಂದ ನೀರಿಗೆ ಹಾರಿ ದಡ ಸೇರುವುದಕ್ಕೆ ಅಗತ್ಯವಾದ ಈಜಿನಂತೆ ಆತ್ಮಜ್ಞಾನ ಎಂದು ವಿವರಿಸುವನು. ಆತ್ಮವಸ್ತುವನ್ನು ವಿವರಿಸಲು ಯಾಜ್ಞವಲ್ಕ್ಯ ಬಳಸಿದ್ದು ಇಂದ್ರಿಯ ಗ್ರಾಹ್ಯವಾದ ವಸ್ತುಪ್ರಪಂಚವನ್ನೇ.
ಈ ಬೋಧೆಯನ್ನು ಎಷ್ಟು ಚೆನ್ನಾಗಿ ಮೈತ್ರೇಯಿ ಗ್ರಹಿಸಿದಳು ಎಂಬುದು ಕಾವ್ಯದ ಅನುಭಾವಶೃಂಗ. ಮುಗಿಯಿತೇ ಎಂದಳು ಮೈತ್ರೇಯಿ
ಹೂಂ ಎಂದ ಯಾಜ್ಞವಲ್ಕ್ಯ.
ಒಂದು ಮಾತ್ರ ಮರೆತಿರೆಂದು
ಸೀರೆ ರವಿಕೆ ಬಿಚ್ಚಿದಳು
ಲಂಗವೊದ್ದು ಜಾಡಿಸಿದಳು
ನೋಡಿದಿರಾ ಎಂದಳು ಮೈತ್ರೇಯಿ:
ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ… ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬ ಅಡಿಗರ ಮಹಾಕಾವ್ಯವಾಕ್ಕಿಗೆ ತಿರುಮಲೇಶ ಹುಟ್ಟಿಸುವ ಪರ್ಯಾಯದ ಲಾಘವ ಬೆಚ್ಚಿಬೀಳಿಸು ವಂಥದ್ದು ! ದೇಹ-ಆತ್ಮದ ಬಗ್ಗೆ ಚಿಂತಿಸುವ ಯೇಟ್ಸ್‌ನಿಂದ ಹಿಡಿದು, ಕಾಯಜೀವಿಯಾದ ಲಕ್ಷ್ಮಣರಾವ್‌ವರೆಗಿನ ಅನೇಕ ಕವಿತೆಗಳು ಈಗ ನನ್ನ ಕಣ್ಮುಂದೆ ಪೆರೇಡು ನಡಿಸುತ್ತಿವೆ. ಆ ಪೆರೇಡಿನಲ್ಲಿ ತಿರುಮಲೇಶರ ಪದ್ಯಕ್ಕೆ ಆಯಕಟ್ಟಿನ ಸ್ಥಾನಮಾನವಿದೆ. ಪರಾತ್ಪರ ವಸ್ತುವಿಗೆ ಅವರು ಹೂಡುವ ಭಾಷೆ ಮತ್ತು ಪ್ರತಿಮಾ ಸಾಮಗ್ರಿ ನಿಚ್ಚನವೀನ ಅಂತ ಅನ್ನಿಸುತ್ತದೆ. ಭಾಷೆಯ ಮತ್ತು ಕಾವ್ಯದ ಮರ್ಮ ಬಲ್ಲ ಕವಿ- ಭಾಷಾವಿಜ್ಞಾನಿ ತಿರುಮಲೇಶ- ರಾಮಾನುಜರಂತೆಯೇ! ಆದರೆ, ಆ ಹಳೆಯ ಸರೀಕನನ್ನು ಅಗಲಿ ತಿರುಮಲೇಶ ಬಹುದೂರ ನಡೆದುಬಿಟ್ಟಿದ್ದಾರೆ. ಪರಿಷೆಯ ಫಕೀರನಂತೆ ಲಾಘವದಲ್ಲಿ ಆತ್ಮವ ಹಗುರಾಗಿಸಿ ಏಕಾಂಗಿ ಯಾತ್ರೆಯಲ್ಲಿ ತೊಡಗಿರುವ ಈ ಅನೇಕದ ನಡುವಿನ ಏಕಾಕಿಯನ್ನು ನಾನು ಇನ್ನು ಮುಂದೆಯೂ ಬಹು ಎಚ್ಚರದಿಂದ ಓದುತ್ತ ಮನನ ಮಾಡುತ್ತೇನೆ. ತಿರುಮಲೇಶರಿಗೆ ಅನೇಕ ಇರಿಸುಮುರಿಸುಗಳಿವೆ. ತಾಪ-ಪರಿತಾಪಗಳಿವೆ. ಶೀಘ್ರ ಉದ್ವಿಗ್ನತೆ, ಅಷ್ಟೇ ಕ್ಷಿಪ್ರ ತಣಿಯುವಿಕೆ, ಮುದುಡಿಕೊಳ್ಳುವುದು, ಮರುಗಳಿಗೆ ಪ್ರಫುಲ್ಲವಾಗಿ ಅರಳಿಕೊಳ್ಳುವುದು ಅವರ ಸ್ವಭಾವ. ಕರ್ನಾಟಕದ ಹೊರಗಿರುವ ನಾನು ಅಲಕ್ಷಿತ ಎಂಬ ತಪ್ಪು$ಕಲ್ಪನೆ ಕೆಲವೊಮ್ಮೆ ಅವರನ್ನು ಕೆಣಕುವುದುಂಟು. ಒಳಗಿನವರ ಪಡಿಪಾಟಲು ಹೊರಗಿರುವ ಅವರಿಗೆ ತಿಳಿಯದು. ಮರವನ್ನು ಕುರಿತ ಅವರ ಪದ್ಯವೊಂದು ನನಗೆ ಈಗ ನೆನಪಾಗುತ್ತಿದೆ. ಮರವೊಂದು ಇದ್ದಲ್ಲೇ ಇದ್ದೂ ಬಯಲಿನ ಎಲ್ಲ ಹಕ್ಕಿಗಳನ್ನು ತನ್ನ ಮಡಿಲಿಗೆ ಆಹ್ವಾನಿಸುತ್ತದೆ. ತಿರುಮಲೇಶರ ಕಾವ್ಯ ಆ ಮರದ ಹಾಗೆ.
(ಮುಂದಿನ ವಾರ ಅಂಕಣ ಮುಕ್ತಾಯ) ಎಚ್ ಎಸ್ ವೆಂಕಟೇಶಮೂರ್ತಿ