Advertisement

ವಿಮ್ಸ್‌ ಪ್ರಕರಣಕ್ಕೆ ವೈದ್ಯರು ಕಾರಣರಲ್ಲ: ಸಚಿವ ಡಾ|ಸುಧಾಕರ್‌

11:01 PM Sep 18, 2022 | Team Udayavani |

ಬಳ್ಳಾರಿ: ವಿಮ್ಸ್‌ ನಲ್ಲಿ ಸೆ.14ರಂದು ಇಬ್ಬರು ಒಳ ರೋಗಿಗಳು ಸಾವಿಗೀಡಾದ ಘಟನೆಗೆ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ಸ್ಪಷ್ಟಪಡಿಸಿದರು.

Advertisement

ಘಟನೆ ಕುರಿತು ವಿಮ್ಸ್‌ ಆಸ್ಪತ್ರೆಯಲ್ಲಿ ರವಿವಾರ ವೈದ್ಯಾ ಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.14ರ ಘಟನೆಗೆ ವಿದ್ಯುತ್‌ ಕಡಿತ ಅಥವಾ ವೆಂಟಿಲೇಟರ್‌ ಸಮಸ್ಯೆ ಕಾರಣವಲ್ಲ. ಆಗ ವರದಿಯಾದಂತೆ ಅಲ್ಲಿ ಮೂವರು ಮೃತಪಟ್ಟಿಲ್ಲ. ಅಸುನೀಗಿದ ಇಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಯುಸಿರೆಳೆದಿದ್ದಾರೆ ಎಂದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನೀಡಿರುವ ವರದಿಗಳಲ್ಲಿ ಹೇಳಲಾಗಿದೆ ಎಂದರು.

ಮೃತರ ಪೈಕಿ ಓರ್ವ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ 2 ವರ್ಷಗಳಿಂದ ಡಯಾಲಿಸಿಸ್‌ ಮಾಡುತ್ತಿದ್ದರು. ಮೆದುಳಿನಿಂದ ರಕ್ತಸ್ರಾವ ಆಗುತ್ತಿದ್ದ ಅವರ ಆರೋಗ್ಯ ಸ್ಥಿತಿ ಕುರಿತು ಕುಟುಂಬಸ್ಥರಿಗೆ ವಿಮ್ಸ್‌ ವೈದ್ಯರು ಆಪ್ತ ಸಂದರ್ಶನದ ಮೂಲಕ ಸಂಪೂರ್ಣ ಮಾಹಿತಿ ನೀಡಿದ್ದರು. ಅವರು ಸೆ.14ರಂದು ಬೆಳಗ್ಗೆ 9.35ಕ್ಕೆ ಮೃತರಾದ ಕುರಿತು ಆಸ್ಪತ್ರೆ ದಾಖಲೆಗಳು ತಿಳಿಸಿವೆ ಎಂದರು.

ಸಾವಿಗೀಡಾದ ಮತ್ತೋರ್ವ ಮಹಿಳೆ ವಿಷಪೂರಿತ ಹಾವು ಕಡಿತಕ್ಕೆ ಒಳಗಾಗಿದ್ದರು. ಅವರು ಆಸ್ಪತ್ರೆಗೆ ಬಂದಾಗ ಅವರ ರಕ್ತದೊತ್ತಡ 90/50 ಇತ್ತು. ಬಾಯಿ, ಮೂಗಲ್ಲಿ ರಕ್ತಸ್ರಾವ ಆಗುತ್ತಿತ್ತು. ದೃಷ್ಟಿ ಕ್ಷೀಣಿಸಿತ್ತು. ಸೆ.13ರಂದು ದಾಖಲಾಗಿದ್ದ ಅವರಿಗೆ ನಮ್ಮ ವೈದ್ಯರ ತಂಡ ಹಾಗೂ ಸಿಬಂದಿ ಸೂಕ್ತ ಚಿಕಿತ್ಸೆ ಕೊಟ್ಟಿದ್ದಾರೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.

ಘಟನೆ ಕುರಿತು ತನಿಖೆ ನಡೆಸಲು ನೇಮಿಸಿದ್ದ ಡಾ|ಸ್ಮಿತಾ ನೇತೃತ್ವದ ತಂಡಕ್ಕೆ ವಿದ್ಯುತ್‌ ಕುರಿತಾದ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮಾಹಿತಿ ನೀಡಲು ಓರ್ವ ವಿದ್ಯುತ್‌ ಎಂಜಿನಿಯರ್‌ನ ನೆರವು ಕೇಳಿದ್ದಾರೆ. ಸೋಮವಾರ ಅವರಿಗೆ ಕೆಪಿಟಿಸಿಎಲ್‌ ಅಧಿಕಾರಿಯೊಬ್ಬರ ನೆರವು ನೀಡಲಾಗುವುದು ಎಂದರು.

Advertisement

ಸುಳ್ಳು ಹೇಳಿ ರಾಜಕಾರಣ ಮಾಡಿಲ್ಲ: ಶ್ರೀರಾಮುಲು
ಬಳ್ಳಾರಿ: ನಾನು ಈ ನೆಲವನ್ನು ನಂಬಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆಯೇ ಹೊರತು ಸುಳ್ಳು ಹೇಳಿ ಅಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಂತೆ ಪಕ್ಷದಿಂದ ಪಕ್ಷಕ್ಕೆ ಬಂದು ಸುಳ್ಳು ಹೇಳಿದ್ದರೆ ಇನ್ನೂ ದೊಡ್ಡ ರಾಜಕಾರಣಿ ಆಗುತ್ತಿದ್ದೆ. ವಿಮ್ಸ್‌ ಪ್ರಕರಣಕ್ಕೆ ಸಂಬಂ ಧಿಸಿ ಎಲ್ಲ ಎಚ್‌ಒಡಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದು, ಆಸ್ಪತ್ರೆ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದರು.

ವೈದ್ಯಕೀಯ ವಿಷಯದಲ್ಲಿ ನಾನು ತಜ್ಞನಲ್ಲ. ನಾನು ಏನು ಹೇಳಿದರೂ ರಾಜಕಾರಣ ಆಗುತ್ತದೆ. ಪ್ರಕರಣದ ಬಗ್ಗೆ ತನಿಖೆಗಾಗಿ ರಚಿಸಿರುವ ಸಮಿತಿಯವರು ಸೂಕ್ತವಾಗಿ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ವಿಮ್ಸ್‌ಗೆ ಈಗಾಗಲೇ 500 ಕೆವಿ ಸಾಮರ್ಥ್ಯದ 2 ಜನರೇಟರ್‌ ನೀಡಲಾಗಿದೆ. ಜತೆಗೆ ಒಂದು ಬಾಡಿಗೆ ಜನರೇಟರ್‌ ಕೂಡ ನೀಡಲಾಗಿದೆ. ಕೆಎಂಆರ್‌ಇಸಿ ಅನುದಾನದಡಿ ಇನ್ನೆರಡು ಜನರೇಟರ್‌ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next