ಬೆಂಗಳೂರು: ರಾಜ್ಯದಲ್ಲಿ ಪಂಚಮಸಾಲಿ ಸಮಸ್ಯೆಯೇ ಬೇರೆ… ಕುರುಬ ಸಮುದಾಯದ ಸಮಸ್ಯೆಯೇ ಬೇರೆ.ಇಲ್ಲಿ ಸಿದ್ದರಾಮಯ್ಯ, ಈಶ್ವರಪ್ಪ ಪ್ರಶ್ನೆಯೇ ಇಲ್ಲ.ಇದು ರಾಜ್ಯದ ಇಡೀ 60 ಲಕ್ಷ ಕುರುಬ ಸಮುದಾಯದವರ ಪ್ರಶ್ನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕುರಿತಾದ ವಿಚಾರ ಈ ಹಿಂದೆ ಎರಡು ಬಾರಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿ ಬಂದಿದೆ. ಈಗ ಕಾನೂನಾತ್ಮಕವಾಗಿ ಕುಲ ಶಾಸ್ತ್ರೀಯ ಅಧ್ಯಯನ ಆಗಬೇಕಿದೆ. ಒಂದೆರಡು ತಿಂಗಳಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ಮುಗಿಯಲಿದೆ. ಬಳಿಕ ಸಂಪುಟದ ಮುಂದೆ ತಂದು ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದ ಅವರು ಎಸ್‌ಟಿ ಮಾನ್ಯತೆ ವಿಚಾರದಲ್ಲಿ ಸಿಎಂ ಈಗ ಬಂದು ಮಾಡುವಂತದ್ದು ಏನೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮೀಸಲಾತಿ ಹೋರಾಟದ ಕುರಿತಾಗಿ ಸಿದ್ದರಾಮಯ್ಯ ಅವರ ನಡವಳಿಕೆಯನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಈ ಹಿಂದೆ ಹೋರಾಟ ಮಾಡಿಕೊಳ್ಳಿ ಎಂದು ಹೇಳಿ, ಈಗ ಕರೆದೇ ಇಲ್ಲ ಅಂತಾರೆ. ನನ್ನನ್ನ ಪಕ್ಕಕ್ಕೆ ಸರಿಸುತ್ತಿದ್ದಾರೆ, ಈ ಹೋರಾಟಕ್ಕೆ ಆರ್‌ಎಸ್‌ಎಸ್ ಹಣ ಕೊಟ್ಟಿದೆ ಎನ್ನುತ್ತಿದ್ದಾರೆ. ಇದು ಕುರುಬ ಅಷ್ಟೇ ಅಲ್ಲ, ಎಲ್ಲಾ ಸಮುದಾಯದವರಿಗೂ ಆಕ್ರೋಶ ಮೂಡಿಸಿದೆ. ಎಷ್ಟು ದಿನ ಇದನ್ನು ಮುಂದುವರೆಸುತ್ತಾರೋ ನೋಡೋಣ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ:ಫೆ. 20ರವರೆಗೆ ಶಾಲಾ-ಕಾಲೇಜು ದಾಖಲಾತಿ ದಿನಾಂಕ ವಿಸ್ತರಣೆಗೆ ಸೂಚನೆ: ಸುರೇಶ್ ಕುಮಾರ್
ಈ ಹೋರಾಟದಲ್ಲಿ ಸಿದ್ದರಾಮಯ್ಯ ಒಬ್ಬರು ಮಾತ್ರ ಈ ಬಂದಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲಾ ಪಕ್ಷದವರೂ ಬಂದಿದ್ದಾರೆ. ಇಡೀ ಸಮಾಜ ಒಂದಾಗಿರುವ ಸಮಯದಲ್ಲಿ ಅವರು ಬರಬೇಕಿತ್ತು. ನಾಳೆ ಬೃಹತ್ ಸಮಾವೇಶ ಇದೆ. ಅವರು ಬರುತ್ತಾರೋ, ಇಲ್ಲವೋ ಎಂದು ಕಾಯುತ್ತಾ ಕುಳಿತುಕೊಳ್ಳುವುದಿಲ್ಲ.ಅವರಿಗೆ ಈ ಕುರಿತಾಗಿ ಗಡುವು ಕೊಡುವ ಅವಶ್ಯಕತೆಯೂ ಇಲ್ಲ ಎಂದು ಈಶ್ವರಪ್ಪ ನುಡಿದಿದ್ದಾರೆ.