ಶಿವಮೊಗ್ಗ: ಪಕ್ಷ ಸರಿ ಮಾಡಲು ನಾನು ಸ್ಪರ್ಧಿಸುತ್ತಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಳೆದ ಬಾರಿಯೇ ಗಟ್ಟಿ ನಿರ್ಧಾರ ಮಾಡಿ ಸ್ಪರ್ಧಿಸಿದ್ದರೆ ಎಂಎಲ್‌ಎ ಆಗುತ್ತಿದ್ದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಗೆ ಬಂದಿದೆ. ಕಾರ್ಯಕರ್ತರಿಗೆ ಅವಮಾನ ಆಗಲು ಬಿಡುವುದಿಲ್ಲ. ಭಗವಂತ ಲೋಕಸಭೆಗೆ ಸ್ಪರ್ಧಿಸುವಂತೆ ಮಾಡಿದ್ದಾನೆ. ಅಭಿಮಾನಿಗಳ ನಂಬಿಕೆಗೆ ಚ್ಯುತಿ ತರುವುದಿಲ್ಲ. ಮೋದಿ ಹೇಳುತ್ತಿರುವಂತೆ ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದರು.
ಯಾರಿಗೂ ಕೇಳದೆ ಶೋಭಾರನ್ನು ನಿಲ್ಲಿಸುತ್ತೇವೆ, ಗೆಲ್ಲಿಸಬೇಕು ಎಂದು ಬಿಎಸ್‌ವೈ ಹೇಳಿದ್ದರು. ನಾನು ಇಡೀ ರಾಜ್ಯದ ಕಾರ್ಯಕರ್ತರ ನೋವಿನ ಧ್ವನಿಯಾಗಿ ಸ್ಪರ್ಧಿಸುತ್ತಿದ್ದೇನೆ. ಲಿಂಗಾಯತ ಯತ್ನಾಳ್ ಬೇಡ, ಒಕ್ಕಲಿಗರ ಸಿ.ಟಿ.ರವಿ ಬೇಡ, ಕುರುಬ ಸಮಾಜದ ನಾನೂ ಬೇಡ. ಬಿಎಸ್‌ವೈಗೆ ಅವರ ಮಗ ಮಾತ್ರ ಬೇಕು ಎಂದರು.
ಈಗಾಗಲೇ ಮಠಾಧೀಶರು ಆಶೀರ್ವಾದ ಮಾಡಿದ್ದಾರೆ. ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಮಾರುತಿಗೆ ಪೂಜೆ ಮಾಡಿದಾಗ ಪ್ರಸಾದ ಸಿಕ್ಕಿದೆ ಎಂದು ಹೇಳಿದರು.
ಅಪ್ಪ, ಮಕ್ಕಳು ಎಷ್ಟು ದುಡ್ಡು ಸುರಿದರೋ ಗೊತ್ತಿಲ್ಲ. ವಿಜಯೇಂದ್ರ ಕೇವಲ 11 ಸಾವಿರ ಬಹುಮತದಲ್ಲಿ ಗೆದ್ದರು. ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಚರ್ಚೆ ಆಗುತ್ತಿದೆ. ಇದನ್ನೇ ನಾನು ಬಯಸಿದ್ದೆ. ಲೋಕಸಭಾ ಚುನಾವಣೆ ಬಳಿಕ ವಿಜಯೇಂದ್ರ ಬದಲಾಗಿ ಒಳ್ಳೆಯ ರಾಜ್ಯಾಧ್ಯಕ್ಷರು ಬರುತ್ತಾರೆ.
– ಕೆ.ಎಸ್.ಈಶ್ವರಪ್ಪ