Advertisement

ಅಧಿಕಾರಿಗಳು ತಮ್ಮ ಪ್ರತಿಭೆಯನ್ನು ರಾಜ್ಯದ ಅಭಿವೃದ್ಧಿಗೆ ಧಾರೆ ಎರೆಯಬೇಕು: ಈಶ್ವರಪ್ಪ

09:52 AM Sep 09, 2019 | keerthan |

ಬೆಳಗಾವಿ: ಯಾವುದೇ ಯೋಜನೆಗಳನ್ನು ರೂಪಿಸುವುದು ಹಾಗೂ ಅನುಷ್ಠಾನದ ಕುರಿತು ಜನಪ್ರತಿನಿಧಿಗಳಿಗೆ ಸಲಹೆ ನೀಡುವವರು ಅಧಿಕಾರಿಗಳು ಆದ್ದರಿಂದ ತಮ್ಮ ಪ್ರತಿಭೆಯನ್ನು ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಒಳಿತಿಗೆ ಧಾರೆ ಎರೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಕರೆ ನೀಡಿದರು.

Advertisement

ಸುವರ್ಣ ವಿಧಾನಸೌಧದಲ್ಲಿ ಭಾನುವಾರ ನಡೆದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ರಾಜ್ಯಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದ ರೈತರ ಪ್ರತ್ಯೇಕ ಬಜೆಟ್, ಭಾಗ್ಯಲಕ್ಷ್ಮೀ ಅಂತಹ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಅಂತಹ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಯೋಜನೆ ರೂಪಿಸಿ, ಹಣ ವೆಚ್ಚ ಮಾಡಿದರೂ ಇದುವರೆಗೆ ಎಲ್ಲ ಗ್ರಾಮಗಳಿಗೆ ನೀರು ತಲುಪಿಸುವುದು ನಮ್ಮಿಂದ ಇದುವರೆಗೆ ಸಾಧ್ಯವಾಗಿಲ್ಲ ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಮ್ಮ ಮನೆ ಹೆಣ್ಣುಮಕ್ಕಳು ಬೀದಿಬದಿ ಶೌಚಕ್ಕೆ ಹೋಗುವ ಪರಿಸ್ಥಿತಿ ಬಂದರೆ ನಮಗೆ ಹೇಗೆ ಅನಿಸುತ್ತದೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೆ ನೂರಕ್ಕೆ ನೂರರಷ್ಟು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನಿರ್ಮಾಣವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು

Advertisement

ಗ್ರಾಮೀಣಾಭಿವೃದ್ಧಿ ಪುಣ್ಯದ ಕೆಲಸವಾಗಿದೆ. ಇಂತಹ ಅವಕಾಶ ನನಗೆ ಸಿಕ್ಕಿದೆ. ಗ್ರಾಮೀಣ ಜನರ ಅಭಿವೃದ್ಧಿಗೆ ಒತ್ತು ನೀಡಬೇಕಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಶ್ರಮಿಸೋಣ ಎಂದು ಸಚಿವ ಈಶ್ವರಪ್ಪ ಹೇಳಿದರು.

ರಾಜ್ಯದಲ್ಲಿ ಸಾಕಷ್ಟು ಉತ್ತಮ ಕೆಲಸವಾಗಿದೆ. ಕೇಂದ್ರ ಸರ್ಕಾರದ ಮೆಚ್ಚುಗೆಗೂ ಪಾತ್ರವಾಗಿದೆ. ಅಧಿಕಾರಿಗಳಲ್ಲಿ ಎಲ್ಲರೂ ಭ್ರಷ್ಟರು ಅಥವಾ ಸೋಮಾರಿಗಳಿಲ್ಲ. ಆದರೆ ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಸರ್ಕಾರ ಅಥವಾ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂದರು.

ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಲ್ಲಿವೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಇನ್ನೂ ಏನಾದರೂ ಹೊಸ ಯೋಜನೆಗಳ ಕಲ್ಪನೆ ಇದ್ದರೆ ಅವುಗಳ ಬಗ್ಗೆಯೂ ಸರ್ಕಾರದ ಗಮನಕ್ಕೆ ತರಲು ಅಧಿಕಾರಿಗಳಿಗೆ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್, ಸ್ವಚ್ಛ ಭಾರತ ಮಿಷನ್, ತೆರಿಗೆ ಸಂಗ್ರಹ ಹಾಗೂ ಇಲಾಖೆಯ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಉಪಸ್ಥಿತರಿದ್ದರು.
ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.`

Advertisement

Udayavani is now on Telegram. Click here to join our channel and stay updated with the latest news.

Next