ಶಿವಮೊಗ್ಗ: ಅಕ್ರಮದ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪ್ರಶ್ನೆ ಬರುವುದಿಲ್ಲ. ಅಕ್ರಮ ಮಾಡಿದವರು ಎಂತವರೇ ಆದರೂ ನಮ್ಮ ಸರ್ಕಾರ ಬಿಡುವುದಿಲ್ಲ. ಪಿಎಸ್ ಐ ನೇಮಕಾತಿ ಅಕ್ರಮ ಮಾಡಿರುವವರನ್ನು ಸಿಎಂ ಬೊಮ್ಮಾಯಿ ಜೈಲಿಗೆ ಕಳಿಹಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದೆಲ್ಲಾ ಹೇಳುತ್ತಿದ್ದಾರೆ. ಇಲ್ಲಿ ಯಾವ ಪಕ್ಷ ಎನ್ನುವುದು ಬರುವುದಿಲ್ಲ. ಅಕ್ರಮ ಅಕ್ರಮವೇ. ಅಕ್ರಮ ಮಾಡಿದವರನ್ನು ಸರ್ಕಾರ ಬಿಡದೆ, ಖಂಡಿತ ಸರಿಯಾದ ಶಿಕ್ಷೆ ಕೊಡುತ್ತದೆ. ಯಾರು ಬೇಕಾದರೂ ಆಗಿರಬಹುದು ಎಂದರು.
ಇದನ್ನೂ ಓದಿ:ಸಕ್ಕರೆ ಕಾರ್ಖಾನೆಯಲ್ಲಿ 1 ರೂ. ಅವ್ಯವಹಾರ ಸಾಬೀತಾದರೂ ರಾಜಕೀಯ ನಿವೃತ್ತಿ: ಯಶವಂತರಾಯಗೌಡ
ಸಂತೋಷ್ ಪಾಟೀಲ್ ಆತ್ಮಹತ್ಯೆಯ ದಾಖಲಾತಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂತೋಷ ಪ್ರಕರಣದಲ್ಲಿ ನನ್ನ ಒಂದೇ ಒಂದು ಪರ್ಸೆಂಟ್ ತಪ್ಪಿದ್ದರೆ ನನಗೆ ಶಿಕ್ಷೆಯಾಗಲಿ. ನನ್ನ ಮನೆ ದೇವರು ಚೌಡೇಶ್ವರಿ ಶಿಕ್ಷೆ ಕೊಡಲಿ. ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನಾನು ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ. ತನಿಖೆ ನಡೆಯುತ್ತಿದ್ದು, ಜಾಸ್ತಿ ಏನು ಮಾತನಾಡುವುದಿಲ್ಲ ಎಂದರು.
ಅಧಿಕಾರಿಗಳು ಎಲ್ಲಾ ರೀತಿಯಲ್ಲೂ ತನಿಖೆ ನಡೆಸುತ್ತಾರೆ. ಸತ್ಯಾಂಶ ಹೊರಗೆ ಬರುತ್ತದೆ. ದಾಖಲಾತಿಗಳ ಬಗ್ಗೆ ಗ್ರಾಮೀಣಾಭಿವೃದ್ದಿಯ ಇಲಾಖೆಯ ಅಧಿಕಾರಿಗಳು ಸ್ಷಷ್ಟವಾಗಿ ಹೇಳಿದ್ದಾರೆ. ನಾನೂ ನಿರ್ದೋಷಿಯಾಗಿ ಹೊರಬರುತ್ತೇನೆ ಎಂದು ಈಶ್ವರಪ್ಪ ಹೇಳಿದರು.