Advertisement

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

03:34 PM May 26, 2024 | Team Udayavani |

ಉಡುಪಿ: ಮಾಜಿ ಶಾಸಕನಾಗಿದ್ದರೂ ಪಕ್ಷದಲ್ಲಿ ಯಾವುದೇ ಹುದ್ದೆ ನೀಡಿರಲಿಲ್ಲ. ಜವಾಬ್ದಾರಿಯಿಂದ ಉಚ್ಚಾಟಿಸಿರಬಹುದು. ಕಾರ್ಯಕರ್ತನಾಗಿಯೇ ಇರುತ್ತೇನೆ. ಪಕ್ಷದಿಂದ ಉಚ್ಚಾಟಿಸಿದವರಿಗೆ ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ. ಚುನಾವಣೆಯಲ್ಲಿ ಗೆದ್ದು ಪಕ್ಷಕ್ಕೆ ಹೋಗುವೆ ಅಥವಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿಯೇ ಇರುವೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್‌ ಹೇಳಿದರು.

Advertisement

ಕರಂಬಳ್ಳಿಯ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟಿಸಿದ ಸುದ್ದಿ ಮಾಧ್ಯಮಗಳ ಮೂಲಕ ತಿಳಿಯಿತು. ಪಕ್ಷದ ನೋಟಿಸ್‌ ಕೂಡ ತಲುಪಿರಲಿಲ್ಲ. ಈಗ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿರಬಹುದು. ಆದರೆ, ಈವರೆಗೂ ಪಕ್ಷದ ಯಾವ ನಾಯಕರಿಗೂ ನಾನು ಬೈದಿಲ್ಲ. ವ್ಯವಸ್ಥೆ ಸರಿಯಾಗಬೇಕು ಎಂದಷ್ಟೆ ಹೇಳಿದ್ದೇನೆ. ಆದರೆ, ಈ ಹಿಂದೆ ಪಕ್ಷಕ್ಕೆ ಮುಜುಗರ ಆಗುವಂತೆ ಬೈದಿದ್ದ ಜಗದೀಶ್‌ ಶೆಟ್ಟರ್‌ ಅವರು ಒಂದೇ ವರ್ಷದಲ್ಲಿ ಬಿಜೆಪಿ ಸೇರಿದರು ಮತ್ತು ಸಂಸದರಾಗಿ ಸ್ಪರ್ಧಿಸಲು ಟಿಕೆಟ್‌ ಕೂಡ ನೀಡಿದ್ದಾರೆ. ಹೀಗಾಗಿ ನಾನು ಬಿಜೆಪಿಗೆ ಹೋಗುತ್ತೇನೆ. ಉಚ್ಚಾಟಿಸಿರುವುದು ನೋವು ತಂದಿದೆ ಎಂದರು.

ರಾಜ್ಯಸಭೆ ಚುನಾವಣೆ ಅಡ್ಡಮತದಾನ ಮಾಡಿದ ಇಬ್ಬರು ಶಾಸಕರ ವಿರುದ್ಧ ಈವರೆಗೂ ಯಾವುದೇ ಕ್ರಮ ಆಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪಕ್ಷದೊಳಗೆ ಇದ್ದು ಕೆಲಸ ಮಾಡಿದವರ ಮೇಲೂ ಕ್ರಮ ಆಗಿಲ್ಲ. ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಆರ್ಥಿಕ ನೆರವು ನೀಡಿದವರ ಮೇಲೂ ಶಿಸ್ತು ಕ್ರಮ ತೆಗೆದುಕೊಂಡಿಲ್ಲ. ಉಡುಪಿಯಲ್ಲಿ 2004ರ ವಿಧಾನಸಭೆ ಚುನಾವಣೆಯಲ್ಲಿ ಯಶ್‌ಪಾಲ್‌ ಸುವರ್ಣ ಅವರು ಪಕ್ಷೇತರ ಅಭ್ಯರ್ಥಿ ಪರವಾಗಿ ನೇತೃತ್ವ ವಹಿಸಿ ಕೆಲಸ ಮಾಡಿದ್ದರು. ಅನಂತರ ಅವರು ಬಿಜೆಪಿಗೆ ಸೇರಿಲ್ಲವೇ? ಈಗ ನನ್ನ ವೈಯಕ್ತಿಕ ಸ್ವಾತಂತ್ರ್ಯದಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಆದರೆ ನಮ್ಮ ಮನೆಗೆ ಬಂದ ಯಾರಿಗೂ ಆತಿಥ್ಯ ನೀಡಿಲ್ಲ ಎಂದಿಲ್ಲ ಎಂದರು.

ಬಿಜೆಪಿಯಲ್ಲಿ ಕರಾವಳಿ ಮಟ್ಟಿಗೆ ಶಿಸ್ತು ಜಾಸ್ತಿ, ಶಿಕ್ಷೆಯೂ ಜಾಸ್ತಿ. ಈ ರೀತಿಯ ಕಠಿನ ಕ್ರಮ ಉಡುಪಿ ಹೊರತುಪಡಿಸಿ ಶಿವಮೊಗ್ಗ, ಕೊಪ್ಪಳ, ಬೆಂಗಳೂರು ಮೊದಲಾದ ಕಡೆಗಳಲ್ಲಿ ತೆಗೆದುಕೊಳ್ಳಲು ಸಾಧ್ಯವೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next