Advertisement

ಐಸಿಎಲ್ ಕಾರ್ಖಾನೆ ವಿದ್ಯುತ್‌ ಕಡಿತಕ್ಕೆ ಸಂಚು

03:28 PM Jul 18, 2019 | Naveen |

ಕೆ.ಆರ್‌.ಪೇಟೆ: ತಾಲೂಕಿನ ಮಾಕವಳ್ಳಿ ಸಮೀಪದ ಕೋರಮಂಡಲ್ ಸಕ್ಕರೆ ಕಾರ್ಖಾನೆ 8ರಿಂದ 10 ಲಕ್ಷ ಟನ್‌ ಕಬ್ಬು ಅರೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಇದೀಗ ಸೆಸ್ಕ್ನಿಂದಲೇ ಕಾರ್ಖಾನೆಗೆ ವಿದ್ಯುತ್‌ ಕಡಿತಗೊಳಿಸುವ ಹಾಗೂ ಕಾರ್ಖಾನೆಯಿಂದ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ ಖರೀದಿಸಲ್ಲ ಎಂಬ ಅಪಸ್ವರ ಕೇಳಿ ಬರುತ್ತಿದೆ.

Advertisement

ತಾಲೂಕಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕೋರಮಂಡಲ್ ಸಕ್ಕರೆ ಕಾರ್ಖಾನೆ ರೈತರು, ವರ್ತಕರು, ಕೂಲಿ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರಿಗೆ ಆಸರೆಯಾಗಿದೆ. ಪ್ರತಿವರ್ಷ ಕಾರ್ಖಾನೆ ಆರಂಭಕ್ಕೆ ರೈತರು ಹೋರಾಡಬೇಕಿತ್ತು. ಆದರೆ, ಪ್ರಸಕ್ತ ವರ್ಷ ಯಾವುದೇ ಹೋರಾಟಗಳ ಸಮಸ್ಯೆಯಿಲ್ಲದೆ, ಕಾರ್ಖಾನೆ ವಾರದ ಹಿಂದೆಯೇ ಆರಂಭವಾಗಿದೆ. ರೈತರು ಕಬ್ಬು ಸರಬರಾಜು ಮಾಡುತ್ತಿದ್ದರು. ಆದರೆ ಇದೀಗ ಸೆಸ್ಕ್ ಅಧಿಕಾರಿಗಳೇ ಕಾರ್ಖಾನೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಜತೆಗೆ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್‌ ಖರೀದಿಗೂ ನಿರಾಕರಿಸುತ್ತಿದ್ದಾರೆನ್ನಲಾಗಿದೆ. ಅಕಸ್ಮಾತ್‌ ಸೆಸ್ಕ್ ವಿದ್ಯುತ್‌ ಖರೀದಿಸದಿದ್ದರೆ ಕಾರ್ಖಾನೆಗೆ ಸರಾಸರಿ 30 ಕೋಟಿ ರೂ. ನಷ್ಟ ಸಂಭವಿಸುವ ಸಾಧ್ಯತೆಗಳಿವೆ.

ಕಾರ್ಖಾನೆಗೆ ವಿದ್ಯುತ್‌ ಉತ್ಪಾದನೆಯಿಂದಲೇ 30 ಕೋಟಿ ರೂ. ಬರುತ್ತಿತ್ತು. ಈಗಾಗಲೇ ಕಾರ್ಖಾನೆ ನಷ್ಟದಲ್ಲಿ ನಡೆಯುತ್ತಿದೆ. ಹೇಗೋ ಸುಧಾರಿಸಿಕೊಂಡು ಕಬ್ಬು ಅರೆಯಲು ರೈತರಿಗೆ ಸೂಚನೆ ನೀಡಿದ್ದೆವು. ಆದರೆ, ಸೆಸ್ಕ್ ಅಧಿಕಾರಿಗಳು ಕಾರ್ಖಾನೆಗೆ ವಿದ್ಯುತ್‌ ಕೊಡಲ್ಲ ಮತ್ತು ಖರೀದಿಸಲ್ಲ ಎಂದು ಹೇಳುತ್ತಿರುವುದರಿಂದ ಕಾರ್ಖಾನೆ ಆಡಳಿತ ಮಂಡಳಿ ಸಮಸ್ಯೆಗೆ ಸಿಲುಕುವಂತಾಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಪಟ್ಟ ಸಚಿವರು ಮಧ್ಯಪ್ರವೇಶಿಸಿ ಸೆಸ್ಕ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯುತ್‌ ಖರೀದಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರೂ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದಾರೆ ಕಾರ್ಖಾನೆ ಆಡಳಿತ ಮಂಡಳಿ.

ನಷ್ಟ ಸಂಭವಿಸಲು ಕಾರಣವೇನು? ಸಕ್ಕರೆ ಕಾರ್ಖಾನೆಗಳು ಲಾಭದತ್ತ ಹೆಜ್ಜೆ ಹಾಕಲು ಸಕ್ಕರೆ ಜೊತೆಗೆ ಕಾರ್ಖಾನೆಯಲ್ಲಿ ಉಪ ಉತ್ಪನ್ನಗಳ ತಯಾರಿಕೆ ಅನಿವಾರ್ಯ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆಯೇ ಮಂಡ್ಯ ಮತ್ತು ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್‌ ಉತ್ಪನ್ನ ಹಾಗೂ ಅಬಕಾರಿ ಘಟಕ ತೆರೆಯಲಾಗಿದೆ. ಮಂಡ್ಯ ಸರ್ಕಾರಿ ಕಾರ್ಖಾನೆ ನಷ್ಟ ಅನುಭವಿಸುತ್ತಿದೆ.

ಹಾಗೆಯೇ ಕೆ.ಆರ್‌.ಪೇಟೆ ಕಾರ್ಖಾನೆಯ ಅಬಕಾರಿ ಘಟಕ ತೆರೆಯಲು ಕೆಲ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಇಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೇವಲ ವಿದ್ಯುತ್‌ ಘಟಕ ಮಾತ್ರ ಆರಂಭಿಸಲಾಗಿದೆ. ಘಟಕದಿಂದ ವಾರ್ಷಿಕ 4 ಕೋಟಿ ಯೂನಿಟ್ ವಿದ್ಯುತ್‌ ಉತ್ಪಾದಿಸಿ, ಒಂದು ಯೂನಿಟ್‌ಗೆ 6ರಿಂದ 7 ರೂ.ಗಳವರೆಗೆ ಸೆಸ್ಕ್ ಖರೀಸುತ್ತಿತ್ತು. ಇದರಿಂದಲೇ ವರ್ಷಕ್ಕೆ 25 ಕೋಟಿಗಳಿಗೂ ಹೆಚ್ಚು ಹಣ ಸಿಗುತ್ತಿದೆ. ಈಗ ಕರ್ನಾಟಕ ವಿದ್ಯುತ್‌ ಕಾರ್ಪೊರೇಷನ್‌ ಅಧಿಕಾರಿಗಳು ಏಕಾಏಕಿ ಕಾರ್ಖಾನೆಯಿಂದ ಉತ್ಪಾದಿಸುವ ವಿದ್ಯುತ್‌ ನಿರಾಕರಿಸುತ್ತಿದೆ. ಜೊತೆಗೆ ಕಾರ್ಖಾನೆಗೆ ಸರಬರಾಜು ಮಾಡುವ ವಿದ್ಯುತ್‌ಗೂ ಯೂನಿಟ್‌ಗೆ 10.60 ರೂ. ನೀಡಬೇಕು. ಮುಂಗಡವಾಗಿ 8 ಕೋಟಿ ಠೇವಣಿ ಇಡುವಂತೆ ಸೂಚಿಸಿದೆ.

Advertisement

ಮೊದಲು ಇಲಾಖೆಯಿಂದ ಸರಬರಾಜಾಗುವ ವಿದ್ಯುತ್‌ಗೆ ಹಣ ಪಡೆಯುವ ಬದಲು ಕಾರ್ಖಾನೆಯಿಂದ ಅಷ್ಟೇ ಪ್ರಮಾಣದ ವಿದ್ಯುತ್‌ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಕಾರ್ಖಾನೆಯಿಂದ ವಿದ್ಯುತ್‌ ಪಡೆಯದೇ ಸರಬರಾಜುಗುವ ವಿದ್ಯುತ್‌ಗೂ ಹಣ ಪಡೆದುಕೊಂಡರೆ ವಾರ್ಷಿಕ 30 ಕೋಟಿ ರೂ. ನಷ್ಟವಾಗುವುದಂತೂ ಸತ್ಯ. ಇದರಿಂದ ಕಾರ್ಖಾನೆಗಷ್ಟೇ ಅಲ್ಲದೆ ರೈತರಿಗೂ ತೊಂದರೆಯಾಗುತ್ತದೆ.

ಮಣ್ಣಿನ ಮಗನ ಮೌನ: ರೈತ ಕಂಗಾಲು: ನಮ್ಮದು ರೈತ ಪರ ಸರ್ಕಾರ ನಾವು ರೈತರಿಗಾಗಿ ದುಡಿಯುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆ ಆರಂಭಿಸಿ, ರೈತರಿಗೆ ನೆರವಾಗುವ ಬದಲು ಕುರ್ಚಿ ಉಳಿಸಿಕೊಳ್ಳುವಲ್ಲಿಯೇ ಮಗ್ನರಾಗಿದ್ದರೆ, ಕ್ಷೇತ್ರದ ಶಾಸಕರು ಮುಂಬೈ ಸೇರಿದ್ದಾರೆ. ರೈತ ಸಾಲಮಾಡಿ ಬೆಳೆದಿರುವ ಕಬ್ಬು ಒಂದು ಕಡೆ ಒಣಗುತ್ತಿದೆ. ಮತ್ತೂಂದು ಕಡೆ ಆರಂಭಿಸಿರುವ ಕಾರ್ಖಾನೆಗೆ‌ ಅಧಿಕಾರಿಗಳಿಂದಲೇ ವಿದ್ಯುತ್‌ ಸಮಸ್ಯೆ ಉಂಟಾಗಿದೆ. ಸಮಸ್ಯೆಗಳು ಬಗೆಹರಿಸುವುದು ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಶಾಸಕರು, ಸಚಿವರ ವಿರುದ್ಧ ರೈತರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಒಣಗುತ್ತಿರುವ ಟನ್‌ ಕಬ್ಬು: ತಾಲೂಕಿನಲ್ಲಿ ಸುಮಾರು 14 ಸಾವಿರ ರೈತರು 10 ಲಕ್ಷ ಟನ್‌ ಕಬ್ಬು ಬೆಳೆದಿದ್ದಾರೆ. ಇದರಲ್ಲಿ ಶೇ.40ರಷ್ಟು ಕಬ್ಬು ಕೊಳವೆ ಬಾವಿಗಳ ನೀರಿನಲ್ಲಿ ಬೆಳೆಯಲಾಗಿದೆ. ಮೂರು ವರ್ಷಗಳಿಂದ ತಾಲೂಕಿನಲ್ಲಿ ಸಮರ್ಪಕ ಮಳೆ ಇಲ್ಲದೆ, ಈ ವರ್ಷದ ಮುಂಗಾರು ಮಳೆಯೂ ಕೈ ಕೊಟ್ಟಿದೆ.

ತಾಲೂಕು ಒಂದರಲ್ಲಿಯೇ 1,200ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿಹೋಗಿವೆ. ಬೆಳೆದಿರುವ ಕಬ್ಬಿಗೆ ನೀರಿಲ್ಲದೇ ಒಣಗುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಅಲ್ಪಸ್ವಲ್ಪ ಉಳಿಸಿಕೊಂ ಡಿರುವ ಕಬ್ಬು ಕಾರ್ಖಾನೆಗೆ ಸರಬರಾಜು ಮಾಡಲು ಇದೀಗ ಸೆಸ್ಕ್ ನಿಂದಲೇ ತೊಡಕಾಗಿದೆ ಎಂಬುದು ರೈತರ ಅಸಮಾಧಾನ.

Advertisement

Udayavani is now on Telegram. Click here to join our channel and stay updated with the latest news.

Next