ಮೈಸೂರು: ಕಾಡಾನೆ ದಾಳಿಗೆ ತುತ್ತಾಗಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಾಗಿರುವ ಗಿರಿಜನ ವ್ಯಕ್ತಿಯ ಸ್ಥಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಭೀರವಾಗಿದ್ದು, ಆತನ ಅರಣ್ಯರೋದನ ಆಸ್ಪತ್ರೆ ಕೊಠಡಿಗೆ ಸೀಮಿತವಾಗಿದೆ. ಕಳೆದ ಡಿ.20 ರಂದು ವಿರಾಜಪೇಟೆ ತಾಲೂಕಿನ ಚೆನ್ನಯ್ಯಕೋಟೆ ಗ್ರಾಪಂ ವ್ಯಾಪ್ತಿಯ ಚನ್ನಂಗಿ ಗ್ರಾಮದ ಕೆಸುವಿನ ಕೆರೆ ಹಾಡಿಯ 55 ವರ್ಷದ ರಾಮ ಎಂಬವರು ಸಮೀಪದ ರೇಷ್ಮೆ ಹಾಡಿ ಬಳಿ ತೆರಳಿದ್ದಾಗ, ಕಾಡಾನೆ ದಾಳಿಗೆ ತುತ್ತಾಗಿ ಎಡಗಾಲು ತುಂಡಾಗಿತ್ತು.
ಈ ವೇಳೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾದ ಅವರು, 20 ಸಾವಿರಕ್ಕೂ ಹೆಚ್ಚು ಹಣ ನೀಡಿ, ಮೊದಲ ಹಂತದ ಶಸ್ತ್ರ ಚಿಕಿತ್ಸೆ ಪಡೆದಿದ್ದರು. ಆದರೆ, ನಿತ್ಯದ ಖರ್ಚಿಗೆ ಹಣ ಸಿಗದ ಹಿನ್ನೆಲೆ ವಾಪಸ್ ತಮ್ಮ ಹಾಡಿಗೆ ಮರಳಿದ್ದರು. ಮತ್ತೆ ಕಾಲಿನ ನೋವು ಹೆಚ್ಚಾದ ನಂತರ ಕಳೆದ 6 ದಿನಗಳ ಹಿಂದೆ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಆಸ್ಪತ್ರೆ ವೈದ್ಯರು 2ನೇ ಹಂತದ ಶಸ್ತ್ರ ಚಿಕಿತ್ಸೆ ಹಣ ಪಾವತಿಸುವಂತೆ ಬೇಡಿಕೆ ಇಟ್ಟ ಹಿನ್ನೆಲೆ ಹಣ ಪಾವತಿಸಲಾಗದೆ ನೋವಿನಲ್ಲೇ ನರಳುತ್ತಿದ್ದಾರೆ.
ಹಣ ನೀಡದ್ದಕ್ಕೆ ವಾಪಸ್ ವಾರ್ಡಿಗೆ: ಸೋಮವಾರ ವಾರ್ಡ್‌ನಿಂದ ಶಸ್ತ್ರ ಚಿಕಿತ್ಸೆ ಘಟಕಕ್ಕೆ ಕರೆದೊಯ್ದು, 7 ಸಾವಿರ ಹಣ ಪಾವತಿಸುವಂತೆ ಹೇಳಿದ್ದಾರೆ. ಆದರೆ, ಹಣ ಪಾವತಿಸಲು ವಿಳಂಬ ವಾದ ಹಿನ್ನೆಲೆ ಮತ್ತೆ ವಾರ್ಡ್‌ಗೆ ಕಳುಹಿಸುವ ಮೂಲಕ ಅಮಾನುಷವಾಗಿ ನಡೆದುಕೊಂಡಿದ್ದಾರೆ. ನಿತ್ಯ ನೋವಿನಿಂದ ಪರಿತಪಿಸುತ್ತಿದ್ದರೂ, ಯಾವುದೇ ಇಂಜೆಕ್ಷನ್, ಔಷಧ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ಗಾಯಾಳುವಿನ ಮಗ ಅಣ್ಣಪ್ಪ ನೋವಿನಿಂದ ಹೇಳುತ್ತಾರೆ.
ಇದನ್ನೂ ಓದಿ :ಕರ ವಸೂಲಿಗಾರ ಹಾಗೂ ಗುಮಾಸ್ತರಿಗೆ ಭಡ್ತಿ ನೀಡಲು ಕ್ರಮ: ಕೆ.ಎಸ್. ಈಶ್ವರಪ್ಪ
ಉಚಿತ ಚಿಕಿತ್ಸೆ ಇದ್ದರೂ ಸಿಗುತ್ತಿಲ್ಲ: ಗಿರಿಜನರಿಗೆ ಹಾಗೂ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂಬ ನಿಯಮವಿದ್ದರೂ ಮೊದಲ ಹಂತದ ಶಸ್ತ್ರ ಚಿಕಿತ್ಸೆಗೆ 30 ಸಾವಿರಕ್ಕೂ ಹೆಚ್ಚು ಹಣವನ್ನು ಆಸ್ಪತ್ರೆ ಅಧಿಕಾರಿಗಳು ಪಡೆದಿದ್ದಾರೆ. ಅಲ್ಲದೇ, ಉಚಿತ ಚಿಕಿತ್ಸೆ ನೀಡುವಂತೆ ಗಾಯಾಳುವಿನ ಸಂಬಂಧಿಕರು, ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಪತ್ರ ನೀಡಿದ್ದರೂ ಆಸ್ಪತ್ರೆ ಆಡಳಿತ ಮಂಡಳಿ ಗಣನೆಗೆ ತೆಗೆದುಕೊಳ್ಳದೆ ಹಣ ಸುಲಿಗೆಗೆ ಇಳಿದಿದೆ ಎಂದು ಸಂಬಂಧಿಕರು ದೂರುತ್ತಿದ್ದಾರೆ.