Advertisement

ಮಾಡಾಳು ಆಸ್ತಿ ವಿವರ ಕೆದಕುತ್ತಿರುವ ಲೋಕಾಯುಕ್ತರು

11:36 PM Mar 04, 2023 | Team Udayavani |

ಬೆಂಗಳೂರು: ಕೆಎಸ್‌ಡಿಎಲ್‌ನ ಟೆಂಡರ್‌ ಅಕ್ರಮ ಬಯಲಿಗೆಳೆದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿರುವ ಲೋಕಾಯುಕ್ತ ಪೊಲೀಸರು ಇದೀಗ ನಿಗೂಢವಾಗಿರುವ ಕೆಎಸ್‌ಡಿಎಲ್‌ನ ಮಾಜಿ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಮತ್ತು ಅವರ ಕುಟುಂಬ ಹೊಂದಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ವಿವರ ಕೆದಕುತ್ತಿದ್ದಾರೆ.

Advertisement

ಮಾಡಾಳು ವಿರೂಪಾಕ್ಷಪ್ಪ ಕಳೆದ ಕೆಲವು ವರ್ಷಗಳಿಂದ ಟೆಂಡರ್‌ನಲ್ಲಿ ಅಕ್ರಮ ಸೇರಿ ಇತರ ಅವ್ಯವಹಾರಗಳಲ್ಲಿ ತೊಡಗಿ ನೂರಾರು ಕೋಟಿ ರೂ. ಆಸ್ತಿ ಮಾಡಿರುವುದು ಮೆಲ್ನೋಟಕ್ಕೆ ಪತ್ತೆಯಾಗಿದೆ. ಇದರ ಬೆನ್ನಲ್ಲೇ ದಾವಣಗೆರೆ, ಶಿವಮೊಗ್ಗ, ವಿಜಯನಗರ, ಚಿತ್ರದುರ್ಗದಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಮಾಡಿಟ್ಟಿರುವ ಕೋಟಿ-ಕೋಟಿ ಮೌಲ್ಯದ ಅಪಾರ ಆಸ್ತಿಯ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇದರ ದಾಖಲೆಗಾಗಿ ಶೋಧ ನಡೆಸುತ್ತಿದ್ದಾರೆ.

ಅಪಾರ ಪ್ರಮಾಣದ ಬೇನಾಮಿ ಆಸ್ತಿ ಹೊಂದಿರುವ ಶಂಕೆ ವ್ಯಕ್ತವಾಗಿದೆ. ಇದರ ಜತೆಗೆ ಶಾಸಕ ವಿರೂಪಾಕ್ಷಪ್ಪ ಅವರ ಸಂಜಯನಗರದ ನಿವಾಸದಲ್ಲಿ ಪತ್ತೆಯಾದ 6.10 ಕೋಟಿ ರೂ., ಪುತ್ರ ಪ್ರಶಾಂತ್‌ ಖಾಸಗಿ ಕಚೇರಿಯಲ್ಲಿ ಸಿಕ್ಕಿದ್ದ 2.2 ಕೋಟಿ ರೂ.ಗೆ ದಾಖಲೆ ಒದಗಿಸುವಂತೆ ಕುಟುಂಬ ಸದಸ್ಯರಿಗೆ ಸೂಚಿಸಿದ್ದಾರೆ.

ಅಕ್ರಮ ಹಣ ಸಿಕ್ಕಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಧ್ಯ ಪ್ರವೇಶಿಸಲಿದ್ದಾರೆ. ಇದೀಗ ಶಾಸಕ ವಿರೂಪಾಕ್ಷಪ್ಪಗೆ ಭಾರೀ ಸಂಕಷ್ಟ ಎದುರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಲೋಕಾಯುಕ್ತ ಪೊಲೀಸರು ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ದಾಖಲೆಗಳು, ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ.

ಕುಟುಂಬ ಸದಸ್ಯರಿಗೂ ನೋಟಿಸ್‌
ಶಾಸಕರ ಕಚೇರಿ, ನಿವಾಸಕ್ಕೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದಾರೆಂದು ತಿಳಿದು ಬಂದಿದೆ. ಪ್ರಶಾಂತ್‌ ಬಂಧನಕ್ಕೂ ಮೊದಲು ಸಹೋದರ ಮಲ್ಲಿಕಾರ್ಜುನ್‌ ಅವರಿಗೆ ಸೇರಿದ 2 ಕಂಪನಿಗಳ ಬ್ಯಾಂಕ್‌ ಖಾತೆಗೆ 94 ಲಕ್ಷ ರೂ. ವರ್ಗಾವಣೆಯಾಗಿರುವ ಸುಳಿವು ಸಿಕ್ಕಿದೆ. ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ್‌ ಸೇರಿ ಕುಟುಂಬದ ಇತರ ಸದಸ್ಯರಿಗೂ ನೋಟಿಸ್‌ ನೀಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಪ್ರಶಾಂತ್‌ ಮಾಡಾಳು ಅವರ 5ಕ್ಕೂ ಅಧಿಕ ಬ್ಯಾಂಕ್‌ ಖಾತೆ ಮಾಹಿತಿ ಕಲೆ ಹಾಕಿದ್ದು, ಈ ಖಾತೆಗಳಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಸಿರುವುದು ತಿಳಿದು ಬಂದಿದೆ. ಲೋಕಾ ದಾಳಿಗೆ ಸ್ವಲ್ಪ ದಿನಗಳ ಹಿಂದೆ ಪ್ರಶಾಂತ್‌ 1 ಬ್ಯಾಂಕ್‌ ಖಾತೆಗೆ 60 ಲಕ್ಷ ರೂ.ಗೂ ಅಧಿಕ ಹಾಗೂ ಮತ್ತೂಂದು ಖಾತೆಗೆ 30 ಲಕ್ಷ ರೂ.ಗೂ ಅಧಿಕ ಹಣ ಜಮೆ ಆಗಿರುವ ಸುಳಿವು ಸಿಕ್ಕಿದೆ. ಈ ಹಣದ ಮೂಲದ ದಾಖಲೆ ಒದಗಿಸುವಂತೆ ಕೇಳಿದ್ದಾರೆಂದು ತಿಳಿದು ಬಂದಿದೆ.

Advertisement

ಕೋಡ್‌ವರ್ಡ್‌ ಹಿಂದೆ ಬಿದ್ದ ತನಿಖಾಧಿಕಾರಿಗಳು
ಪ್ರಶಾಂತ್‌ ಮಾಡಾಳು ಡೈರಿಯಲ್ಲಿದ್ದ ಕೋಡ್‌ವರ್ಡ್‌ ಹಿಂದೆ ಬಿದ್ದಿರುವ ಲೋಕಾಯುಕ್ತ ಪೊಲೀಸರು ಕೋಡ್‌ ವರ್ಡ್‌ ಪರಿಶೀಲಿಸಿ ಯಾರಿಗೆ ಸಂಬಂಧಿಸಿರುವುದು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಡೈರಿ ಪತ್ತೆಯಾದ ಹಿನ್ನೆಲೆ ಹಲವರಿಗೆ ನಡುಕ ಶುರುವಾಗಿದ್ದು, ಪ್ರಶಾಂತ್‌ ಜತೆ ವ್ಯವಹಾರ ಮಾಡಿದವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಪ್ರಶಾಂತ್‌ ಅವರಿಗೆ ಲಂಚದ ಹಣ ಕೊಡಲು ಬಾಕಿ ಉಳಿಸಿಕೊಂಡವರ ಹೆಸರುಗಳು ಡೈರಿಯಲ್ಲಿ ಉಲ್ಲೇಖಿಸಿರುವ ಶಂಕೆ ವ್ಯಕ್ತವಾಗಿದೆ.

ಉನ್ನತಾಧಿಕಾರಿಯಾಗಲು ಹುನ್ನಾರ
ಈ ನಡುವೆ ಪ್ರಶಾಂತ್‌ ಲೋಕಾಯುಕ್ತದಲ್ಲೇ ಉನ್ನತ ಅಧಿಕಾರಿಯಾಗಲು ಹಸರಸಾಹಸ ಮಾಡಿದ್ದ ಎನ್ನಲಾಗಿದೆ. ಪ್ರಶಾಂತ್‌ ಮಾಡಾಳು ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಲ್ಲಿ ಹಣಕಾಸು ಸಲಹೆಗಾರನಾಗಿ ಕೆಲಸ ಮಾಡಿದ್ದ. ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ಸಿಕ್ಕ ಬಳಿಕ ಮತ್ತದೇ ಹುದ್ದೆಗೆ ಯತ್ನ ನಡೆಸಿದ್ದ. ಹಿಂದೆ ಎಸಿಬಿಯಲ್ಲಿದ್ದ ಹಿರಿಯ ಅಧಿಕಾರಿಗಳ ಜತೆಗೂ ಉತ್ತಮ ಭಾಂದವ್ಯ ಹೊಂದಿದ್ದ ಎಂದು ತಿಳಿದು ಬಂದಿದೆ.

ಶಾಸಕರಿಗೆ ತೀವ್ರ ಶೋಧ
ಮಾಡಾಳು ವಿರೂಪಾಕ್ಷಪ್ಪಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲು ಲೋಕಾ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಪುತ್ರ ಪ್ರಶಾಂತ್‌ ಮಾಡಾಳು ಬಂಧನವಾಗುತ್ತಿದ್ದಂತೆ 2 ದಿನಗಳಿಂದ ಮೊಬೈಲ್‌ ಸ್ವಿಚ್‌ಅಫ್ ಮಾಡಿಕೊಂಡು ಮನೆಯವರಿಗೂ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾರೆ. ಇದರ ಬೆನ್ನಲ್ಲೇ ಲೋಕಾಯುಕ್ತದ 4 ತಂಡಗಳು ಬೆಂಗಳೂರು, ದಾವಣಗೆರೆ, ಚೆನ್ನಗಿರಿ ಸೇರಿ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಗುಪ್ತಚರ ಇಲಾಖೆಯೂ ಹುಡುಕಾಟ ನಡೆಸುತ್ತಿದೆ. ಕರ್ತವ್ಯ ಲೋಪ ಎಸಗಿರುವ ಪ್ರಶಾಂತ್‌ರನ್ನು ಅಮಾನತುಗೊಳಿಸುವಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರು ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next