Advertisement

ಕುರುಕ್ಷೇತ್ರಕ್ಕೆ ಕಲ್ಯಾಣ್‌ ಪದ್ಯ ಕಾಣಿಕೆ

09:34 PM Aug 08, 2019 | mahesh |

“ರಾಮಾಯಣ’, “ಮಹಾಭಾರತ’, “ಪಂಪಾಭಾರತ’, “ಗದಾಯುದ್ದ’ ಹೀಗೆ ಯಾವುದೇ ಪುರಾಣ ಕೃತಿಗಳನ್ನ ತೆಗೆದುಕೊಂಡರೆ ಅಲ್ಲಿ ಗದ್ಯದ ಜೊತೆಗೆ ಪದ್ಯ ಕೂಡ ಹಾಸು ಹೊಕ್ಕಾಗಿರುತ್ತದೆ. ಕಥೆ, ಪಾತ್ರ, ಸನ್ನಿವೇಶಗಳ ವರ್ಣನೆಯಲ್ಲಿ ಗದ್ಯ-ಪದ್ಯ ಎರಡೂ ಜೊತೆಯಾಗಿ ಕೃತಿಯ ಅಂದವನ್ನು ಹೆಚ್ಚಿಸುತ್ತವೆ. ಹಾಗಾಗಿಯೇ ಈ ಕೃತಿಗಳು ಚಲನಚಿತ್ರರೂಪಕ್ಕೆ ಬಂದಾಗಲೂ ಆದಷ್ಟು ಗದ್ಯ-ಪದ್ಯ ಎರಡನ್ನೂ ಇಟ್ಟುಕೊಂಡೇ ತೆರೆಮೇಲೆ ಬರುತ್ತವೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಇಂಥದ್ದೊಂದು ಶೈಲಿಯನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬರುತ್ತಿದ್ದು, ಈ ವಾರ ಬಿಡುಗಡೆಯಾಗುತ್ತಿರುವ ಅಂಥದ್ದೇ ಒಂದು ಪೌರಾಣಿಕ ಕೃತಿ “ಕುರುಕ್ಷೇತ್ರ’ದಲ್ಲೂ ಅದು ಮುಂದುವರೆದಿದೆ.

Advertisement

ಅಂದಹಾಗೆ, ಈ ಬಾರಿ “ಕುರುಕ್ಷೇತ್ರ’ ಚಿತ್ರದಲ್ಲಿ ಬರುವ ಸನ್ನಿವೇಶಗಳಿಗೆ ಪದ್ಯದ ಸಾಲುಗಳನ್ನು ಪೋಣಿಸಿದವರು ಪ್ರೇಮಕವಿ ಕೆ. ಕಲ್ಯಾಣ್‌. ಹೌದು, “ಕುರುಕ್ಷೇತ್ರ’ ಚಿತ್ರದಲ್ಲಿ ಆರು ಹಾಡುಗಳಿದ್ದು ಈ ಹಾಡುಗಳ ಜೊತೆಗೆ ಚಿತ್ರದಲ್ಲಿ ಬರೋಬ್ಬರಿ ಹದಿನಾರು ಪದ್ಯಗಳಿವೆ. ಈ ಎಲ್ಲಾ ಪದ್ಯಗಳನ್ನು ಚಿತ್ರದ ದೃಶ್ಯಗಳಿಗೆ, ಸನ್ನಿವೇಶಕ್ಕೆ ತಕ್ಕಂತೆ ರಚಿಸಿದ್ದಾರೆ ಕೆ. ಕಲ್ಯಾಣ್‌. ಆರಂಭದಲ್ಲಿ “ಕುರುಕ್ಷೇತ್ರ’ ಚಿತ್ರದಲ್ಲಿ ಪದ್ಯಗಳನ್ನು ಸೇರಿಸುವ ಯೋಚನೆ ಚಿತ್ರತಂಡಕ್ಕಿರಲಿಲ್ಲ. “ಕುರುಕ್ಷೇತ್ರ’ದ ಡಬ್ಬಿಂಗ್‌ ಮತ್ತಿತರ ಕೆಲಸಗಳು ಮುಗಿದ ನಂತರ ಚಿತ್ರದಲ್ಲಿ ಬರುವ ಪ್ರಮುಖ ದೃಶ್ಯಗಳು, ಸನ್ನಿವೇಶಗಳಲ್ಲಿ ಪದ್ಯಗಳನ್ನು ಬಳಸಿಕೊಂಡರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ ಎನ್ನುವ ಕಾರಣಕ್ಕೆ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಚಿತ್ರದಲ್ಲಿ ಪದ್ಯ­ಗಳನ್ನು ಸೇರಿಸುವ ನಿರ್ಧಾರಕ್ಕೆ ಬಂದರು. ಆಗ “ಕುರು­ಕ್ಷೇತ್ರ’ಕ್ಕೆ ಪದ್ಯ­ಗಳನ್ನು ರಚಿಸುವ ಹೊಣೆಯನ್ನು ಹೊತ್ತು­ಕೊಂಡವರು ಸಂಗೀತ ನಿರ್ದೇಶಕ ಕಂ ಚಿತ್ರ ಸಾಹಿತಿ ಕೆ. ಕಲ್ಯಾಣ್‌.

ಈ ಬಗ್ಗೆ ಮಾತನಾಡುವ ಕಲ್ಯಾಣ್‌, “”ಕುರುಕ್ಷೇತ್ರ’ ಚಿತ್ರದ ಆರಂಭದಿಂದ ಕೊನೆಯ ದೃಶ್ಯದವರೆಗೂ ಪದ್ಯಗಳು ಹಾಸುಹೊಕ್ಕಾಗಿ ಬಂದಿವೆ. ಕರ್ಣನ ಪರಿಚಯ, ಕರ್ಣನ ಪಟ್ಟಾಭಿಷೇಕ, ಶಕುನಿಯ ಕುಟಿಲ ತಂತ್ರ, ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಸೆಣಸಾಟ, ಅಭಿಮನ್ಯುವಿನ ಮರಣ, ಶ್ರೀಕೃಷ್ಣ ಸಂಧಾನ, ಶ್ರೀಕೃಷ್ಣ ಸಂಧಾನದ ವಿಫ‌ಲತೆ, ಭೀಷ್ಮನ ಶರಶಯೆಯ ಪರಿಸ್ಥಿತಿ, ಕರ್ಣನ ಮರಣ, ದುರ್ಯೋಧನ – ಭೀಮನ ಗದಾಯುದ್ಧ, ದ್ರೋಣಾಚಾರ್ಯರ ಪ್ರಹಸನ, ಶಕುನಿಯ ಶಪಥ, ಕರ್ಣ-ದುರ್ಯೋಧನರ ಅಜರಾಮರ ಗೆಳೆತನ, ಪಾಂಡವರ ವನವಾಸ ಹೀಗೆ ಚಿತ್ರದಲ್ಲಿ ಬರುವ ಹತ್ತಾರು ರೋಚಕ ಸನ್ನಿವೇಶಗಳನ್ನು ಪದ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿವೆ’ ಎನ್ನುತ್ತಾರೆ.

ಇಲ್ಲಿಯವರೆಗೆ ಪ್ರೇಮಗೀತೆ, ಭಕ್ತಿಗೀತೆ, ಶೋಕಗೀತೆ, ಟಪ್ಪಾಂಗುಚ್ಚಿ ಹೀಗೆ ಹತ್ತು ಹಲವು ಥರದ ಮೂರುವರೆ ಸಾವಿರಕ್ಕೂ ಅಧಿಕ ಹಾಡುಗಳನ್ನು ಬರೆದು ಸೈ ಎನಿಸಿಕೊಂಡಿರುವ ಕೆ. ಕಲ್ಯಾಣ್‌ ಅವರಿಗೆ “ಕುರುಕ್ಷೇತ್ರ’ದ ಪದ್ಯ ರಚನೆ ಹೊಸ ಅನುಭವವಂತೆ.

“ಇಲ್ಲಿಯವರೆಗೆ ಬೇರೆ ಬೇರೆ ಥರದ ಹಾಡುಗಳನ್ನು ಬರೆದಿದ್ದರೂ ಪೌರಾಣಿಕ ಚಿತ್ರವಾಗಿ “ಕುರುಕ್ಷೇತ್ರ’ ನನಗೆ ಮೊದಲ ಚಿತ್ರ. ಏಕೆಂದರೆ, ಗೊತ್ತಿರುವ ಕಥೆ, ಸಂಗತಿಗಳನ್ನೇ ಇನ್ನಷ್ಟು ರೋಚಕವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಹೇಳಬೇಕಿತ್ತು. ಅಲ್ಲದೆ ಚಿತ್ರದ ಪ್ರತಿಯೊಂದು ಪಾತ್ರಗಳು ಕೂಡ ಪ್ರಮುಖವಾಗಿದ್ದರಿಂದ, ಎಲ್ಲವನ್ನೂ ಅದರದರ ಮಹತ್ವಕ್ಕೆ ತಕ್ಕಂತೆ ಬಿಂಬಿಸಬೇಕಿತ್ತು. ಚಿತ್ರಕ್ಕಾಗಿ ಮೊದಲು ಸುಮಾರು 20ಕ್ಕೂ ಹೆಚ್ಚು ಬೇರೆ ಬೇರೆ ಶೈಲಿಯ ಪದ್ಯಗಳನ್ನು ರಚಿಸಲಾಗಿತ್ತು. ಅಂತಿಮವಾಗಿ ನಿರ್ದೇಶಕರು ನಿರ್ಮಾಪಕ ಮುನಿರತ್ನ-ನಾಗಣ್ಣ ನಿರ್ಧಾರದಂತೆ ಚಿತ್ರದಲ್ಲಿ ಪ್ರಮುಖ ಸನ್ನಿವೇಶಗಳಿಗೆ ತಕ್ಕಂತೆ 16 ಪದ್ಯಗಳನ್ನು ಬಳಸಿಕೊಳ್ಳಲಾಯಿತು. ಇದು ನನಗೂ ಕೂಡ ಹೊಸ ಅನುಭವ. ಸಂಗೀತದ ಜೊತೆ ಜೊತೆಗೆ ಚಿತ್ರದಲ್ಲಿ ನೋಡುಗರು ಪದ್ಯಗಳ ಸಾಹಿತ್ಯವನ್ನೂ ಆಸ್ವಾಧಿಸುತ್ತಾರೆ’ ಎನ್ನುತ್ತಾರೆ ಕೆ. ಕಲ್ಯಾಣ್‌.

Advertisement

ಒಟ್ಟಾರೆ ಬಹುನಿರೀಕ್ಷಿತ “ಕುರುಕ್ಷೇತ್ರ’ ಇಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದ್ದು, ಕೆ. ಕಲ್ಯಾಣ್‌ ಪದ್ಯದ ಸಾಲುಗಳು ಇಡೀ ಚಿತ್ರಕ್ಕೆ ಹೊಸ ಮೆರುಗನ್ನು ನೀಡಿದ್ದು, ಚಿತ್ರದಲ್ಲಿ ಎಲ್ಲವೂ ಎಷ್ಟರ ಮಟ್ಟಿಗೆ ಕೂಡಿ ಬಂದಿದೆ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

ಜಿ.ಎಸ್‌. ಕೆ. ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next