Advertisement

ಹಲವು ಪ್ರಥಮಗಳ ಕೆ.ಕೆ. ಪೈ: ನೂರರ ನೆನಪು

02:08 AM Jun 26, 2020 | Hari Prasad |

ಕೆ. ಕೆ. ಪೈಯವರು ಈಗ ಬದುಕಿರುತ್ತಿದ್ದರೆ ಅವರು ಇಂದು ತಮ್ಮ ನೂರನೆಯ ವಯಸ್ಸಿಗೆ ಕಾಲಿಡುತ್ತಿದ್ದರು. ಅವರ ಜನ್ಮದಿನವಾದ ಇಂದು ಅವರ ಜೀವನದ ಪ್ರಮುಖ ಮೈಲುಗಲ್ಲುಗಳ ಕುರಿತಾಗಿ, ಅವರ ಅಸಾಮಾನ್ಯ ಸಾಧನೆಗಳ ಕುರಿತಾಗಿ ಮತ್ತು ಅವರು ನೀಡಿದ ಮಹತ್ತರ ಕೊಡುಗೆಗಳ ಕುರಿತಾಗಿ ತಿಳಿದುಕೊಳ್ಳುವ ಆವಶ್ಯಕತೆಯಿದೆ.

Advertisement

ಕೆ. ಕೆ. ಪೈಯವರನ್ನು ಹಲವಾರು ಮಹತ್ವದ ಹುದ್ದೆಗಳು ಅರಸಿ ಬಂದವು. 1943ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಸೇರಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದರು. 1947ರಲ್ಲಿ ಉಡುಪಿ ನಗರಸಭೆಗೆ ಚುನಾಯಿತರಾದರು, ಮುಂದೆ ನಗರಸಭೆಯ ಅಧ್ಯಕ್ಷರಾದರು.

1949ರಲ್ಲಿ ಸದರ್ನ್ ಇಂಡಿಯಾ ಅಪೆಕ್ಸ್‌ ಬ್ಯಾಂಕಿನ ಆಡಳಿತ ನಿರ್ದೇಶಕರಾದರು. 1970ರ ಮಾ.1ರಂದು ಸಿಂಡಿಕೇಟ್‌ ಬ್ಯಾಂಕಿನ ಕಸ್ಟೋಡಿಯನ್‌ ಆಗಿ ಅಧಿಕಾರ ಸ್ವೀಕರಿಸಿದರು. 1972ರ ಡಿ.1ರಂದು ಸಿಂಡಿಕೇಟ್‌ ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು 1978ರ ಎ.22ರ ವರೆಗೂ ಈ ಹುದ್ದೆಯಲ್ಲಿ ಮುಂದುವರಿದರು.

1997ರಲ್ಲಿ ಮಣಿಪಾಲದ ಎಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ರಿಜಿಸ್ಟ್ರಾರ್‌ರಾಗಿ ಅಧಿಕಾರ ಸ್ವೀಕರಿಸಿ ಕೊನೆಯುಸಿರಿನವರೆಗೂ ಈ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಮಣಿಪಾಲ್‌ ಇಂಡಸ್ಟ್ರೀಸ್‌, ಐಸಿಡಿಎಸ್‌ ಸೇರಿದಂತೆ ಇತರ ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಡಾ| ಟಿ.ಎಂ.ಎ. ಪೈ ಫೌಂಢೇಶನಿನ ಅಧ್ಯಕ್ಷರಾಗಿಯೂ ದೀರ್ಘ‌ಕಾಲ ಸೇವೆ ಸಲ್ಲಿಸಿದರು. 2008ರ ಎಪ್ರಿಲ್‌ನಲ್ಲಿ ದಿಲ್ಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ಗೆ ಹೊಸ ಕ್ಯಾಂಪಸ್‌ ನಿರ್ಮಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

Advertisement

ವಿಶಿಷ್ಟ ವಿಕೇಂದ್ರೀಕರಣ
ಬ್ಯಾಂಕಿನಲ್ಲಿ ಆಡಳಿತ ವಿಕೇಂದ್ರೀಕರಣವನ್ನು ಪ್ರಪ್ರಥಮವಾಗಿ ಮಾಡಿದವರು ಕೆ.ಕೆ. ಪೈ. ಸಿಂಡಿಕೇಟ್‌ ಬ್ಯಾಂಕಿನ ಸಾಂಸ್ಥಿಕ ಒಳ ಸಾಮರ್ಥ್ಯಗಳನ್ನು ಯಥೇಚ್ಛವಾಗಿ ಬಳಸಿಕೊಂಡು ಅಪಾರ ಯಶಸ್ಸು ಗಳಿಸಿದವರು ಕೂಡ ಕೆ.ಕೆ. ಪೈ.
ಕೆ.ಕೆ. ಪೈ ಉಡುಪಿ ನಗರಸಭೆಯ ಅಧ್ಯಕ್ಷರಾಗಿದ್ದಾಗ ನೀಡಿದ ಸೇವೆ ಮತ್ತು ಮಾಡಿದ ಸಾಧನೆಯೂ ಮಹತ್ತರವಾದುದು. ಈಗ ಬದುಕಿರುತ್ತಿದ್ದರೆ ಶತಾಬ್ಧಿಯ ಹೊಸ್ತಿಲಲ್ಲಿರುತ್ತಿದ್ದ ಕೆ.ಕೆ. ಪೈ ಇಂದು ನಮ್ಮೊಂದಿಗಿಲ್ಲವಾದರೂ ಅವರು ನಿಜವಾಗಿಯೂ ಅಮರರು. ಅವರ ಹೆಸರು ನಾಡಿನ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ.

ಲಕ್ಷದ್ವೀಪಕ್ಕೂ ಬ್ಯಾಂಕಿಂಗ್‌ ಕೊಡುಗೆ
ಲಕ್ಷದ್ವೀಪಕ್ಕೆ ಮೊತ್ತಮೊದಲಾಗಿ ಬ್ಯಾಂಕಿನ ಸೌಲಭ್ಯದ ಕೊಡುಗೆ ನೀಡಿದವರು ಕೆ.ಕೆ. ಪೈ. ಆ ತರುವಾಯ ಮಿನಿಕಾಯ್‌, ಅಮೆನಿ, ಅಂಡ್ರೋತ್‌ಗಳಲ್ಲೂ ಶಾಖೆ ತೆರೆದರು. ಅಂಡಮಾನ್‌ – ನಿಕೋಬಾರ್‌ ದ್ವೀಪಗಳಲ್ಲೂ ಶಾಖೆಗಳನ್ನು ತೆರೆದರು. ಮಾರ್ಗದರ್ಶಿ ಬ್ಯಾಂಕ್‌ ಯೋಜನೆಯನ್ನು ದಕ್ಷ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕೆ.ಕೆ. ಪೈ ಸಣ್ಣ ಹಳ್ಳಿಗಳಲ್ಲೂ ಶಾಖೆ ಆರಂಭಿಸಿದರು.

ಪ್ರತ್ಯೇಕ ಪ್ರಾದೇಶಿಕ ಬ್ಯಾಂಕ್‌ಗಳ ಪರಿಕಲ್ಪನೆ ಅವರ ಒಂದು ಮಹತ್ವದ ಪರಿಕಲ್ಪನೆ. ಸಿಂಡಿಕೇಟ್‌ ಬ್ಯಾಂಕ್‌ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿತು. “ಫಾರ್ಮ್ ಕ್ಲಿನಿಕ್ಸ್’ ಅವರ ಹೊಸ ಪರಿಕಲ್ಪನೆಯಾಗಿತ್ತು. ಅದೇ ರೀತಿ ರೈತ ಸೇವಾ ಸಹಕಾರಿ ಸಂಘಗಳ ಸ್ಥಾಪನೆಯೂ ಹೊಸ ಸೃಷ್ಟಿಯಾಗಿತ್ತು.

ಸಾಧನೆ  - ಕೊಡುಗೆಗಳ ಸರಮಾಲೆ
ಸಿಂಡಿಕೇಟ್‌ ಬ್ಯಾಂಕನ್ನು ಅಖಿಲ ಭಾರತ ವ್ಯಾಪ್ತಿಯ ಮತ್ತು ಅಖಿಲ ಭಾರತ ಖ್ಯಾತಿಯ ಬಲಿಷ್ಠ ಮತ್ತು ಲಾಭದಾಯಕ ವಾಣಿಜ್ಯ ಸಂಸ್ಥೆಯನ್ನಾಗಿ ಬೆಳೆಸಿದ ಖ್ಯಾತಿ ಕೆ.ಕೆ. ಪೈಯವರದು. ಬ್ಯಾಂಕಿನ ಶಾಖೆಗಳ ಸಂಖ್ಯೆ 1,000 ಮುಟ್ಟುವಂತೆ ಮತ್ತು ಠೇವಣಿ ಮೊತ್ತ ರೂ. 1,000 ಕೋಟಿಗೇರುವಂತೆ ಮಾಡಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.
1975ರ ಅ.2ರಂದು ದೇಶದ ಪ್ರಪ್ರಥಮ ಗ್ರಾಮೀಣ ಬ್ಯಾಂಕನ್ನು ಸ್ಥಾಪಿಸಿದವರೂ ಕೆ.ಕೆ. ಪೈ. 1976ರ ಆ.17ರಂದು ಸಿಂಡಿಕೇಟ್‌ ಬ್ಯಾಂಕಿನ ಪ್ರಥಮ ಮತ್ತು ಏಕಮಾತ್ರ ವಿದೇಶಿ ಶಾಖೆಯನ್ನು ಲಂಡನ್‌ನಲ್ಲಿ ಸ್ಥಾಪಿಸಿದವರೂ ಕೆ.ಕೆ. ಪೈ.

1975ರಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಸುವರ್ಣ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಿದವರೂ ಕೆ.ಕೆ. ಪೈ. ಆಗಿನ ಕೇಂದ್ರ ಅರ್ಥ ಸಚಿವ ಸಿ. ಸುಬ್ರಹ್ಮಣ್ಯಮ್‌ ಅದನ್ನು ಉದ್ಘಾಟಿಸಿದರು. ಆ ಸಂದರ್ಭದಲ್ಲಿ “ಆರ್ಥಿಕ ಪ್ರಗತಿಗಾಗಿ ಬ್ಯಾಂಕಿಂಗ್‌ ಅಭಿವೃದ್ಧಿ’ ಎಂಬ ವಿಷಯದ ಮೇಲೆ ಒಂದು ಸೆಮಿನಾರನ್ನು ನಡೆಸಲಾಗಿತ್ತು. ಅಂದಿನ ಕೇಂದ್ರ ಕೈಗಾರಿಕಾ ಸಚಿವ ಟಿ.ಎ. ಪೈ ಅದನ್ನು ಉದ್ಘಾಟಿಸಿದರು. ಸುವರ್ಣ ಮಹೋತ್ಸವದ ಕೊಡುಗೆಯಾಗಿ ಕೆ.ಕೆ. ಪೈ ಈಗ ಮಣಿಪಾಲದಲ್ಲಿರುವ ಗೋಲ್ಡನ್‌ ಜುಬಿಲಿ ಹಾಲ್‌ ಕಟ್ಟಿಸಿದರು. ಹಲವಾರು ವಿ.ವಿ.ಗಳಲ್ಲಿ ಗೋಲ್ಡನ್‌ ಜುಬಿಲಿ ಮೆಡಲನ್ನು ಸ್ಥಾಪಿಸಿದರು.

– ಡಾ| ಕೆ.ಕೆ. ಅಮ್ಮಣ್ಣಾಯ

Advertisement

Udayavani is now on Telegram. Click here to join our channel and stay updated with the latest news.

Next