ಬೆಂಗಳೂರು: ಕೆಪಿಸಿಸಿಯಲ್ಲಿ ಅಧಿಕಾರ ಹಂಚಿಕೆ ಮಾಡಿಕೊಂಡು ಕೆಲಸ ಮಾಡುವುದು ಆರೋಗ್ಯಕರ. ಪಕ್ಷದಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದಾರೆ. ಅಧಿಕಾರ ಹಂಚಿಕೆ ಆದರೆ ಒಳ್ಳೆಯದು. ಎಲ್ಲಾ ಹಿರಿಯರಿಗೂ ಅವಕಾಶ ಕೊಡಲು ಸಾಧ್ಯ ಆಗದಿದ್ದರೂ, ಅಧಿಕಾರ ಹಂಚಿಕೆಯಿಂದ ಕೆಲವರಿಗಾದರು ಅವಕಾಶ ಸಿಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷಗಿರಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಆದಷ್ಟು ಬೇಗ ಎಲ್ಲಾ ಗೊಂದಲಗಳನ್ನು ವೇಣುಗೋಪಾಲ್ ಅವರು ಬಗೆಹರಿಸಬೇಕು. ತಡ ಆದಷ್ಟು ಗೊಂದಲಗಳು ಹೆಚ್ಚಾಗುತ್ತವೆ. ಪಕ್ಷದ ಹಿತ ದೃಷ್ಟಿಯಿಂದ ಆದಷ್ಟು ಬೇಗ ಅಧ್ಯಕ್ಷರನ್ನ ನೇಮಕ ಮಾಡ್ಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆಗಾಗಿ ಹೈಕಮಾಂಡ್ ವೀಕ್ಷಕರನ್ನು ಕಳಿಸಿದ್ದರು. ಅವರಿಗೆ ಎಲ್ಲಾ ಕಾಂಗ್ರೆಸ್ ನಾಯಕರು ಅಭಿಪ್ರಾಯ ತಿಳಿಸಿದ್ದಾರೆ. ಅದರ ಆಧಾರದ ಮೇಲೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಯಾರನ್ನು ಆರಿಸುತ್ತದೋ ಅವರನ್ನು ನಾವು ಒಪ್ಪಿಕೊಂಡು ಕೆಲಸ ಮಾಡುತ್ತೇವೆ ಎಂದರು.
ದೆಹಲಿ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸೋನಿಯಾ ಗಾಂಧಿಯವರು ಬ್ಯುಸಿ ಇದ್ದರು. ಬಹುಶಃ ಹಾಗಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಳಂಬ ಆಗಿರಬಹುದು ಎಂದು ವಿಳಂಬದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದರು.
ಕಾರ್ಯಾಧ್ಯಕ್ಷ ಹುದ್ದೆ ಸಾಮಾನ್ಯವಾಗಿ ಒಂದು ಅಥವಾ ಎರಡು ಇರುತ್ತದೆ. ಈಗಲೂ ಒಬ್ಬರು ಕಾರ್ಯಾಧ್ಯಕ್ಷರು ಇದ್ದಾರೆ. ಪಕ್ಷಕ್ಕೆ ಅಧ್ಯಕ್ಷರು ಮುಖ್ಯ, ಅಧ್ಯಕ್ಷರಿಗೆ ಸಹಾಯ ಮಾಡ್ಲಿ ಅಂತಾ ಕಾರ್ಯಾಧ್ಯಕ್ಷರ ನೇಮಕ ಮಾಡುತ್ತದೆ. ಒಂದು ಅಥವಾ ಎರಡು ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕಕ್ಕೆ ನಮ್ಮ ಅಭ್ಯಂತರ ಇಲ್ಲ. ನಾಲ್ಕೈದು ಕಾರ್ಯಾಧ್ಯಕ್ಷರ ನೇಮಕ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರೆ, ಅದು ಅವರ ಅಭಿಪ್ರಾಯ ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.