ಬೆಂಗಳೂರು: ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಳ್ಳಾರಿ ಟಸ್ಕರ್ಸ್ ಮತ್ತು ಶಿವಮೊಗ್ಗ ಲಯನ್ಸ್ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಒಂಟಿ ಸಲಗದಂತೆ ಹೋರಾಡಿದ ಬಳ್ಳಾರಿ ಟಸ್ಕರ್ಸ್ ನ ಕೃಷ್ಣಪ್ಪ ಗೌತಮ್ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದರು.
ಬ್ಯಾಟಿಂಗ್ ವೇಳೆ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ ಗೌತಮ್ ಕೆಪಿಎಲ್ ಇತಿಹಾಸದ ಅತೀ ವೇಗದ ಶತಕದ ದಾಖಲೆ ಬರೆದರು. ತನ್ನ ಅಜೇಯ ಇನ್ನಿಂಗ್ಸ್ ನಲ್ಲಿ 134 ರನ್ ಬಾರಿಸಿದ ಕೆ. ಗೌತಮ್ 134 ರನ್ ಚಚ್ಚಿ ಬಿಸಾಕಿದರು. ಇದೂ ಕೂಡಾ ಕೆಪಿಎಲ್ ದಾಖಲೆಯೇ.
ಶಿವಮೊಗ್ಗ ಲಯನ್ಸ್ ಬೌಲರ್ಸ್ ಗಳನ್ನು ಬೆವರಿಳಿಸಿದ ಕೃಷ್ಣಪ್ಪ ಕೇವಲ ಬೌಂಡರಿ ಸಿಕ್ಸರ್ ಗಳಿಂದಲೇ ತನ್ನ ಇನ್ನಿಂಗ್ಸ್ ಕಟ್ಟಿದ್ದರು. ಬರೋಬ್ಬರಿ 13 ಸಿಕ್ಸರ್ ಬಾರಿಸಿದ ಗೌತಮ್ ಇದುವರೆಗೆ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಯಾರೂ ಮಾಡದ ದಾಖಲೆ ಬರೆದರು. ಇದರೊಂದಿಗೆ ತನ್ನ 134 ರನ್ ಗಳ ಇನ್ನಿಂಗ್ಸ್ ನಲ್ಲಿ ಕೇವಲ ಬೌಂಡರಿ ಸಿಕ್ಸರ್ ಗಳಿಂದಲೇ 106 ರನ್ ಬಾರಿಸಿ ಕೆಪಿಎಲ್ ನಲ್ಲಿ ಮತ್ತೊಂದು ದಾಖಲೆಯಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾರೆ.
ಬೌಲಿಂಗ್ ನಲ್ಲೂ ಮಿಂಚಿದ ಕೃಷ್ಣಪ್ಪ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶೋ ಮ್ಯಾನ್ ಆಗಿ ಮೂಡಿಬಂದರು. ತನ್ನ ನಾಲ್ಕು ಓವರ್ ಕೋಟಾದಲ್ಲಿ ಬರೋಬ್ಬರಿ ಎಂಟು ವಿಕೆಟ್ ಪಡೆದು ಮಿಂಚಿದ ಗೌತಮ್ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಸಾರ್ವಕಾಲಿಕ ವಿಶ್ವದಾಖಲೆ ಬರೆದರು. ಇದೇ ತಿಂಗಳ ಆರಂಭದಲ್ಲಿ ಇಂಗ್ಲೀಶ್ ಕೌಂಟಿಯಲ್ಲಿ ಏಳು ವಿಕೆಟ್ ಪಡೆದಿದ್ದ ಕಾಲಿನ್ ಆಕರ್ಮನ್ ದಾಖಲೆಯನ್ನು ಕನ್ನಡಿಗ ಕೃಷ್ಣಪ್ಪ ಗೌತಮ್ ತಿಂಗಳೊಳಗೆ ಪುಡಿಗಟ್ಟಿದರು.
ಒಟ್ಟಿನಲ್ಲಿ ಗೌತಮ್ ಪ್ರಚಂಡ ಆಟಕ್ಕೆ ತಲೆಬಾಗಿದ ಶಿವಮೊಗ್ಗ ಲಯನ್ಸ್ 70 ರನ್ ಗಳ ಅಂತರದಿಂದ ಸೋತು ಶರಣಾಯಿತು.