Advertisement
ಹಾಗೆ ನೋಡಿದರೆ ಈ ಟೀಕೆ ಎಂಬುದು ಯಾರನ್ನೂ ಬಿಟ್ಟಿಲ್ಲ. ನೈತಿಕ ರಾಜಕೀಯಕ್ಕೆ ಉದಾಹರಣೆಯಾಗಿ ನಿಲ್ಲುವ ದಿ| ಮಾಧವ ರಾವ್ ಸಿಂಧಿಯಾರಿಗೂ ಟೀಕೆ, ಅಪಮಾನ ಎದುರಾಗಿತ್ತು. ವಿಮಾನವೊಂದು ಅಪಘಾತಕ್ಕೀಡಾಗಿದ್ದಾಗ ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಆಗಲೇ ದೇಶದ ಗಮನ ಸೆಳೆದಿದ್ದ ಈ ನಾಯಕನಿಗೂ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿತ್ತು. ಆಗ ಮಾಧವ ರಾವ್ ಸಿಂಧಿಯಾ ಅವರು ಕೆಲವು ಸಮಾನ ಮನಸ್ಕ ಗೆಳೆಯರು ಮತ್ತು ಬೆಂಬಲಿಗರ ಸಹಕಾರದಿಂದ ಮಧ್ಯಪ್ರದೇಶ ವಿಕಾಸ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಈಗಿನ ದಿನಮಾನಕ್ಕೆ ಹೋಲಿಸಿದರೆ ಆಗ ಹೊಸ ಪಕ್ಷಕ್ಕೆ ಅವಕಾಶವಿತ್ತು. ಆದರೆ ಅವರು ಹೇಳುವಂಥ ಸಾಧನೆಯನ್ನೇನೂ ಹೊಸ ಪಕ್ಷದ ಮೂಲಕ ಮಾಡಲು ಸಾಧ್ಯವಾಗಲೇ ಇಲ್ಲ.
Related Articles
Advertisement
ಹಾಗೆಂದು ಇದೇನೂ ದಿಢೀರ್ ನಿರ್ಧಾರವಾಗಿರಲಿಲ್ಲ. ತನ್ನ ಅರ್ಹತೆಗೆ ತಕ್ಕ ಸ್ಥಾನಮಾನ ನೀಡಿ ಎಂದು ಪಕ್ಷದ ಹೈಕಮಾಂಡ್ ಅನ್ನು ಕೇಳಿಕೊಂಡಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಲೂ ಅರ್ಹರಾಗಿದ್ದಂಥ ಅವರಿಗೆ ಒಂದು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನೂ ನೀಡಲಿಲ್ಲ. ಆ ರಾಜ್ಯದ ಅಧ್ಯಕ್ಷ ಸ್ಥಾನವನ್ನೂ ನೀಡಲಿಲ್ಲ. ಮಧ್ಯಪ್ರದೇಶದಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವೇ ಈ ನಾಯಕ ಎಂಬುದನ್ನು ಪಕ್ಷದ ರಾಷ್ಟ್ರೀಯ ನಾಯಕರು ಮರೆತಂತಿದೆ. ರಾಹುಲ್ ಗಾಂಧಿ ಪರೋಕ್ಷವಾಗಿ ಹೇಳುವಂತೆ, ಸಿಂಧಿಯಾ ಅವರು ತಾಳ್ಮೆಯಿಂದ ತನ್ನ ಕಾಲಕ್ಕಾಗಿ ಕಾಯಬೇಕಿತ್ತು. ಆದರೆ ಇಲ್ಲಿಯವರೆಗೆ ಸಿಂಧಿಯಾ ಮಾಡಿದ್ದು ಅದನ್ನೇ. ಇನ್ನೂ ಎಷ್ಟು ಕಾಯಬೇಕಿತ್ತೋ?
ಸಿಂಧಿಯಾರಂಥ ನಾಯಕರಿಗೆ ಕಾಂಗ್ರೆಸ್ ಸೂಕ್ತ ಅವಕಾಶ ಮತ್ತು ಜವಾಬ್ದಾರಿ ನೀಡುತ್ತಿದ್ದರೆ ಆ ಪಕ್ಷದ ಸ್ಥಿತಿ ಈ ರೀತಿ ಆಗುತ್ತಿರಲಿಲ್ಲ. ಆದರೆ ಗಾಂಧಿ ಕುಟುಂಬ ನಿಷ್ಠ ಕಾಂಗ್ರೆಸ್ ನಾಯಕರ ಆಂತರ್ಯದಲ್ಲಿ ಏನಿದೆಯೋ ಗೊತ್ತಿಲ್ಲ.
ಇಂಥ ನಾಯಕರು ಕಾಂಗ್ರೆಸ್‌ಗೆ ಬೇಡವೋ? ಈ ಹಿಂದೆ ಶರದ್ ಪವಾರ್ ಕೂಡ ಇದೇ ರೀತಿಯಲ್ಲಿ ಪಕ್ಷ ತೊರೆದು ಎನ್‌ಸಿಪಿ ಕಟ್ಟಿದವರು. ಅವರು ಆಗ ಸೋನಿಯಾ ಗಾಂಧಿಯ ವಿದೇಶಿ ಮೂಲವನ್ನು ವಿರೋಧಿಸಿ ಪಕ್ಷ ತೊರೆದವರು. ಈಗ ಪರೋಕ್ಷವಾಗಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ರಾಹುಲ್ ಗಾಂಧಿಯ ನಡೆಯನ್ನು ವಿರೋಧಿಸಿಯೇ ಇಂಥದ್ದೊಂದು ನಿರ್ಧಾರ ಕೈಗೊಂಡಂತಿದೆ.
ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯ ನಾಯಕತ್ವ ಸಂಚಕಾರವಾಗಬಹುದಾದಂಥ ಸಮರ್ಥರಿಗೆ ಅವಕಾಶ ಇಲ್ಲ ಎಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. ಪರೋಕ್ಷವಾಗಿ ರಾಹುಲ್ ನಿಷ್ಠರು ಸಿಂಧಿಯಾರಂಥ ನಾಯಕರು ಪಕ್ಷದಿಂದ ಹೊರ ಹೋಗುವುದೇ ಒಳಿತು ಎಂದು ಬಯಸುತ್ತಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ.ಸಿಂಧಿಯಾ ಹೊಸ ಪಕ್ಷ ರಚಿಸದೆ ಇನ್ನೊಂದು ಪ್ರಮುಖ ಪಕ್ಷ ಸೇರಿರುವುದು ಅವರ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ. ಅವರಂಥವರು ಬಿಜೆಪಿಯಲ್ಲಿ ಉತ್ತಮ ಅವಕಾಶ ಪಡೆದುಕೊಳ್ಳಲು ಸಾಧ್ಯ. ಅಂಥವರ ಸೇವೆ ದೇಶಕ್ಕೆ ಸಲ್ಲಬೇಕಾಗಿದೆ. ಸಿಂಧಿಯಾರ ದೂರಗಾಮಿ ಚಿಂತನೆ, ಬೌದ್ಧಿಕ ಶ್ರೀಮಂತಿಕೆಯ ಲಾಭ ಬಿಜೆಪಿ ಮೂಲಕ ದೇಶಕ್ಕೆ ಸಿಗಲು ಈಗ ಸೂಕ್ತ ವೇದಿಕೆ ಸಿಕ್ಕಂತಾಗಿದೆ. ಅವಕಾಶವಾದ ಯಾವುದು?
ಕಾಂಗ್ರೆಸ್ ನಾಯಕರು ಈಗ ಸಿಂಧಿಯಾ ಮೇಲೆ ಆರೋಪಿಸುವ ಅವಕಾಶವಾದ ರಾಜಕಾರಣ ಎಂಬುದು ತುಂಬಾ ದುರ್ಬಲ ಟೀಕೆ. ಸಿಂಧಿಯಾ ಇನ್ನೂ ಕಾಂಗ್ರೆಸ್‌ನಲ್ಲಿ ಮುಂದುವರಿದರೆ ಅದೊಂದು ಮೂರ್ಖ ನಡೆಯಾಗುತ್ತದೆಯೇ ಹೊರತು ಅವಕಾಶದ ರಾಕಾರಣ ಎನ್ನುವಂತಿಲ್ಲ. ಸಿಂಧಿಯಾ ಹೊಂದಿರುವ ಬುದ್ಧಿಮತ್ತೆ, ಜ್ಞಾನ, ಅವರಲ್ಲಿರುವ ನಾಯಕತ್ವದ ಶಕ್ತಿ, ಚಿಂತನೆ ಮುಂತಾ¨ವುಗಳನ್ನು ಗಮನಿಸಿದರೆ ಕಾಂಗ್ರೆಸ್ ಅವರಿಗೆ ಈವರೆಗೆ ಕೊಟ್ಟ ಅವಕಾಶ ಏನೇನೂ ಅಲ್ಲ. ಹಾಗಿದ್ದರೂ ಇಲ್ಲಿಯವರೆಗೆ ಪಕ್ಷ ನಿಷ್ಠೆ ತೋರಿಸಿದ್ದರು. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೇರಿಸಿದ್ದರೂ ಸಿಂಧಿಯಾಗೆ ಸಿಕ್ಕಿದ್ದು ಕೇವಲ ಭರವಸೆಗಳು ಮಾತ್ರ. ಇವರನ್ನು ಪಕ್ಷಕ್ಕಾಗಿ ಬಳಸಿಕೊಂಡು ಲಾಭ ಪಡೆದುಕೊಂಡಿರುವ ಕಾಂಗ್ರೆಸ್ ಮಾಡಿದ್ದು ಅವಕಾಶವಾದವಲ್ಲವೇ? ರಾಹುಲ್ ಆಪ್ತರಾಗಿದ್ದ ಸಿಂಧಿಯಾ ಯಾವತ್ತೂ ಪಕ್ಷ ತೊರೆಯರು ಎಂಬ ವಿಶ್ವಾಸದಿಂದಲೇ ಅವರಿಗೆ ಸೂಕ್ತ ಸ್ಥಾನಮಾನ ನೀಡದೆ ಅವರಿಂದ ಸಿಗುವ ಎಲ್ಲ ಲಾಭವನ್ನು ಪಡೆದುಕೊಂಡದ್ದನ್ನು ಯಾವ ಶಬ್ದದಿಂದ ಗುರುತಿಸಬೇಕು? ಅಷ್ಟಕ್ಕೂ ಸಿಂಧಿಯಾಗೆ ಕಾಂಗ್ರೆಸ್ ಏನು ಮಹಾ ಸ್ಥಾನಮಾನ ಕೊಟ್ಟಿದೆ. ಎಲ್ಲವನ್ನೂ ಅನುಭವಿಸಿ ಸಿಂಧಿಯಾ ಪಕ್ಷ ತೊರೆದಿದ್ದರೆ ಅವಕಾಶ ರಾಜಕೀಯದ ಆರೋಪದಲ್ಲಿ ಕಿಂಚಿತ್ತಾದರೂ ಹುರುಳಿರುತ್ತಿತ್ತು. ಸಿಂಧಿಯಾ ಸಬಲರಾಗುತ್ತಾರೆ ಎಂಬ ಭೀತಿಯಿಂದಲೇ ಅವರ ಬೆಂಬಲಿಗರಿಗೂ ಸೂಕ್ತ ಅವಕಾಶ ನೀಡದ ಆರೋಪ ಕಾಂಗ್ರೆಸ್ ಮೇಲಿಲ್ಲವೇ? ಬಿಜೆಪಿಯಲ್ಲಿ ಬೆಳಗುವ ಸಾಧ್ಯತೆ
ಬಿಜೆಪಿಯಲ್ಲಿ ಕುಟುಂಬ ರಾಜಕೀಯವಿಲ್ಲ. ಸದ್ಯ ಅಲ್ಲಿ ಅರ್ಹತೆ ಮತ್ತು ಯುವಕರಿಗೆ ಆದ್ಯತೆ. ಇವೆರಡೂ ಜ್ಯೋತಿರಾದಿತ್ಯ ಸಿಂಧಿಯಾರಲ್ಲಿ ಇರುವ ಕಾರಣ ಅವರು ಬಿಜೆಪಿಯಲ್ಲಿ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಸಾಧ್ಯತೆಗಳೂ ಇವೆ. ಅವರು ಈಗ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರ ಸಂಪುಟ ಸೇರುವ ನಿರೀಕ್ಷೆಯಿದೆ. ಮುಂದೆ ಬಿಜೆಪಿಯಲ್ಲಿ ಅತಿ ಪ್ರಮುಖ ನಾಯಕರಲ್ಲಿ ಓರ್ವರಾಗಲಿದ್ದಾರೆ. ಅವರು ಪ್ರತ್ಯೇಕ ಪಕ್ಷ ಕಟ್ಟಿದ್ದರೆ ಕೆಲವು ವರ್ಷಗಳನ್ನು ವ್ಯರ್ಥ ಮಾಡಿಕೊಳ್ಳಬೇಕಿತ್ತು ಹಾಗೂ ರಾಜಕೀಯದಲ್ಲಿ ಬೇಡಿಕೆಯನ್ನೂ ಕಳಕೊಳ್ಳಬೇಕಿತ್ತು. ಆದರೆ ಬಿಜೆಪಿ ಸೇರುವ ಮೂಲಕ ಸಕಾಲದಲ್ಲಿ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದಾರೆ. – ಪುತ್ತಿಗೆ ಪದ್ಮನಾಭ ರೈ