Advertisement

ಮರೆಯಾಗಲಿದೆ ಜ್ಯೋತಿ ಥಿಯೇಟರ್‌; ಸುಸಜ್ಜಿತ ಕಾಂಪ್ಲೆಕ್ಸ್‌ನ ಥಿಯೇಟರ್‌ ನಿರೀಕ್ಷೆ

05:45 PM Dec 15, 2021 | Team Udayavani |

ಅಂಬೇಡ್ಕರ್‌ ಸರ್ಕಲ್‌: ನಗರದ ಜ್ಯೋತಿ ಸಿನೆಮಾ ಮಂದಿರ ಆಧುನೀಕ ಶೈಲಿಗೆ ಬದಲುಗೊಳ್ಳಲು ಸಿದ್ಧವಾಗುತ್ತಿದೆ. ಪ್ರೇಕ್ಷಕರಿಗೆ ಹೊಸ ಸೌಲಭ್ಯಗಳನ್ನು ನೀಡುವ ಇರಾದೆಯಿಂದ ಈಗಿನ ಸಿನೆಮಾ ಮಂದಿರದಲ್ಲಿ ಬೃಹತ್‌/ಬಹುಪರದೆ ಥಿಯೇಟರ್‌ ಸಹಿತ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆದಿದೆ.

Advertisement

ಜ್ಯೋತಿ ಟಾಕೀಸ್‌ ಕಟ್ಟಡವನ್ನು ಕೆಡವಿ ಸಮತಟ್ಟು ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಈ ಸಂಬಂಧ ಟಾಕೀಸ್‌ ಪೀಠೊಪಕರಣ, ಜನರೇಟರ್‌, ಸೌಂಡ್‌ ಸಿಸ್ಟಮ್‌, ಸಾಧನಗಳ ನಿರ್ವಹಣೆಗೆ ಗುತ್ತಿಗೆದಾರರನ್ನು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ, ಈಗಿನ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ವಾಣಿಜ್ಯ ಕಟ್ಟಡವನ್ನು ಕಟ್ಟಿ ಅದರಲ್ಲಿಯೇ ಥಿಯೇಟರ್‌ ಮಾಡುವುದು ಸಂಬಂಧಪಟ್ಟವರ ಲೆಕ್ಕಾಚಾರ ಎಂಬುದು ಸದ್ಯದ ಮಾಹಿತಿ.

ತುಳು ಭಾಷಾ ಸಿನೆಮಾಗಳ ಪಾಲಿಗೆ ಈ ಸಿನೆಮಾ ಮಂದಿರ ಬಹುಮುಖ್ಯ ಥಿಯೇಟರ್‌ ಆಗಿತ್ತು. ಆದರೆ, ಕೊರೊನಾ ಸಮಯದಲ್ಲಿ ಇಲ್ಲಿ ಯಾವುದೇ ಸಿನೆಮಾ ಪ್ರದರ್ಶನ ನಡೆದಿರಲಿಲ್ಲ.

1950ರಲ್ಲಿ ಆರಂಭ
1945ರಲ್ಲಿ 10 ಜನರು ಸೇರಿ ಸದಸ್ಯರಾಗಿ ದ.ಕ. ಜಿಲ್ಲೆಯ ತಾಲೂಕುಗಳಲ್ಲಿ ಚಿತ್ರಮಂದಿರ ನಡೆಸಲು “ದಿ ಕರ್ನಾಟಕ ಥಿಯೇಟರ್ ಲಿಮಿಟೆಡ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರಾರಂಭದಲ್ಲಿ ಈ ಸಂಸ್ಥೆಯ ಮೂಲಕ ಕಾಸರಗೋಡು, ಕುಂದಾಪುರ ಮುಂತಾದ ಕಡೆ ಚಲನಚಿತ್ರ ಪ್ರದರ್ಶನದ ವ್ಯವಹಾರ ನಡೆಸಿದರು. ಆನಂತರ ಕ್ರಮೇಣ ಬಲ್ಮಠ ಎಂಬ ಪ್ರದೇಶದಲ್ಲಿ ಕಟ್ಟಡವೊಂದನ್ನು ನಿರ್ಮಿಸಿ 1950ರಲ್ಲಿ ಎ. 22ರಂದು “ಜ್ಯೋತಿ ಟಾಕೀಸ್‌’ ಎಂಬ ಚಿತ್ರಮಂದಿರವನ್ನು ಪ್ರಾರಂಭಿಸಿದರು.

ಇದನ್ನೂ ಓದಿ:ಕಂಚುಗೋಡು: ಕತ್ತಲೆಯಲ್ಲೇ ಕಾಲ ಕಳೆಯುತ್ತಿರುವ ಕುಟುಂಬ

Advertisement

ಇಲ್ಲಿ ಮೊದಲಿಗೆ “ಮಂಜೂರ್‌’ ಎಂಬ ಹಿಂದಿ ಚಿತ್ರ ಪ್ರದರ್ಶನವಾಗಿತ್ತು. 1955ರಲ್ಲಿ ಹಿಂದಿ ಚಿತ್ರತಾರೆ ವೈಜಯಂತಿಮಾಲಾ ಅವರ ನೃತ್ಯ ಕಾರ್ಯಕ್ರಮ 100 ರೂ. ಪ್ರವೇಶ ಧನದೊಂದಿಗೆ ಕಾರ್ಯಕ್ರಮ ನಡೆದಿತ್ತು. ಸುಮಾರು 1988ರವರೆಗೆ ರವಿವಾರ ಬಿಟ್ಟು ಬೆಳಗ್ಗೆ ಹಾಗೂ ಇತರ ದಿನಗಳಲ್ಲಿ ಮದುವೆ ಸಮಾರಂಭಗಳು ಅತೀ ಹೆಚ್ಚು ಇಲ್ಲಿ ನಡೆದಿದೆ.

ಡಾ| ರಾಜ್‌ಕುಮಾರ್‌ ಅವರ ಪ್ರಥಮ ಚಿತ್ರ “ಬೇಡರ ಕಣ್ಣಪ್ಪ’ ದಂತೆ, 1971ರಲ್ಲಿ ತುಳುವಿನ ಪ್ರಥಮ ಸಿನೆಮಾ “ಎನ್ನ ತಂಗಡಿ’ ರಿಲೀಸ್‌ ಆಗಿದ್ದು ಕೂಡ ಇದೇ ಚಿತ್ರಮಂದಿರ ದಲ್ಲಿ ಎಂಬುದು ವಿಶೇಷ. ಸುಮಾರು 886 ಪ್ರೇಕ್ಷಕರ ಆಸನವಿರುವ ಈ ಚಿತ್ರಮಂದಿರವು ತುಳು ಸಿನೆಮಾಗಳ ಮೂಲಕ ಪ್ರಖ್ಯಾತಿ ಪಡೆದಿದೆ. ಈವರೆಗೆ ಬಂದ ಹೆಚ್ಚಿನ ತುಳು ಸಿನೆ ಮಾವು ಇದೇ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ ಎಂದು ನೆನಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next