“ಕಾಲಾಂತಕ’ ಹೆಸರಿನಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಈ ಚಿತ್ರದಲ್ಲಿ ಪುರಾಣದ ಕಥೆಯಲ್ಲಿರುವಂತೆ ಸನ್ನಿವೇಶಗಳು ಇರುವುದರಿಂದ ಚಿತ್ರಕ್ಕೆ “ಕಾಲಾಂತಕ’ ಎಂದು ಹೆಸರಿಡಲಾಗಿದೆ. ಅಂದಹಾಗೆ, ಈ ರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿ “ಕಾಲಾಂತಕ’ ಯಾರು ಆಗುತ್ತಾರೆ ಅನ್ನೋದು ಸಸ್ಪೆನ್ಸ್. ಅದನ್ನು ಚಿತ್ರದಲ್ಲೇ ನೋಡಬೇಕು ಎನ್ನುತ್ತದೆ ಚಿತ್ರತಂಡ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿರುವ “ಕಾಲಾಂತಕ’ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಕಾಲಾಂತಕ’ನ ಬಗ್ಗೆ ಒಂದಷ್ಟು ಮಾತನಾಡಿತು. ಈ ಹಿಂದೆ “ಜ್ವಲಂತಂ’ ಚಿತ್ರವನ್ನು ನಿರ್ದೇಶಿಸಿದ್ದ ಅಂಬರೀಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಅಂಬರೀಶ್ “ಅಬಚೂರು ಎಂಬ ಕಾಲ್ಪನಿಕ ಊರಿನಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ಆ ಸ್ಥಳದಲ್ಲಿ ನಡೆಯುವಂಥ ಕೆಲವು ಘಟನೆಗಳಿಗೆ ಯಾರು ಸ್ಪೂರ್ತಿಯಾಗಿರುತ್ತಾರೆ. ಮಾದಕ ದ್ರವ್ಯಗಳನ್ನು ಸಾಗಾಣಿಕೆ ಮಾಡುವ ವ್ಯಾಪಾರಿಯೊಬ್ಬ ಊರನ್ನು ಯಾವ ರೀತಿಯಲ್ಲಿ ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾನೆ. ಅವನು ಮಾಡುವ ಕೃತ್ಯಗಳು, ಅಲ್ಲಿ ನಡೆಯುವಂತ ವಸ್ತು ವಿಷಯಗಳ ಆಧಾರದ ಮೇಲೆ ಲೇಖಕಿಯೊಬ್ಬಳು ಕಾದಂಬರಿ ಬರೆಯಲು ಶುರು ಮಾಡುತ್ತಾಳೆ. ಇವರಿಬ್ಬರ ಘರ್ಷಣೆ ಮುಂದೆ ಹೇಗೆ ರೂಪ ಪಡೆದುಕೊಳ್ಳುತ್ತದೆ. ಪೆನ್ನು-ಬರಹ, ಸಿಗರೇಟು-ಗಾಂಜಾ, ಇವರೆಡು ಕತೆಯಲ್ಲಿ ಪ್ರಮುಖವಾಗಿ ಬರುವುದರಿಂದ ಪೋಸ್ಟರ್‌ನಲ್ಲಿ ಇದನ್ನೆ ತೋರಿಸಲಾಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೊಂದು ಮರ್ಡರ್ ಮಿಸ್ಟರಿ ಚಿತ್ರದಲ್ಲಿದೆ. ಚಿತ್ರದಲ್ಲಿ ಕಥೆಯೇ ಹೀರೋ. ಆ ಕಥೆಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದು ಕಥೆಯ ಬಗ್ಗೆ ವಿವರಣೆ ನೀಡಿದರು.
ಈ ಹಿಂದೆ “ರಂಗ್ ಬಿರಂಗಿ’ ಚಿತ್ರ ನಿರ್ಮಿಸಿದ್ದ ಶಾಂತಕುಮಾರ್ “ಕಾಲಾಂತಕ’ ಚಿತ್ರಕ್ಕೆ ಬಂಡವಾಳ ಹಾಕಿ¨ªಾರೆ. ಚಿತ್ರದಲ್ಲಿ ಚಿತ್ರ ನಿರ್ದೇಶಕನಾಗಿ ಕೆ.ಎಸ್ ಶ್ರೀಧರ್, ಫೆಡ್ಲರ್ ಪಾತ್ರದಲ್ಲಿ ಯಶ್‌ವಂತ್ ಶೆಟ್ಟಿ, ಬರಹಗಾರ್ತಿಯಾಗಿ ಅರ್ಚನಾ ಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಕಾರ್ತಿಕ್ ಸಾಮಗ, ಸುಶ್ಮಿತಾ ಜೋಷಿ, ಧರ್ಮೇಂದ್ರ ಅರಸ್, ಪ್ರಕಾಶ್, ಕಡ್ಡಿಪುಡಿ ಚಂದ್ರು, ಶ್ರೀಜಿತ್, ಪುನೀತ್ ಮುಂತಾದವರು ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುವ ಕಲಾವಿದರು “ಕಾಲಾಂತಕ’ ಪ್ರಯೋಗಾತ್ಮಕ ಮತ್ತು ವಿಭಿನ್ನ ಕಥಾ ವಸ್ತು ಹೊಂದಿರುವ ಚಿತ್ರ. ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುತ್ತಾರೆ.
“ಕಾಲಾಂತಕ’ ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಫಿನ್ನಿ ಕುರಿಯನ್ ಸಂಗೀತ ಸಂಯೋಜಿಸಿದ್ದಾರೆ. “ಭಾಸ್ಕರ್ ಮೂವೀ ಲೈನ್ಸ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಸೇರಿದಂತೆ ಸುಮಾರು 40 ದಿನಗಳ ಕಾಲ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸದ್ಯ ಮೊದಲ ಟೀಸರ್‌ನಲ್ಲಿ ಒಂದಷ್ಟು ಗಮನ ಸೆಳೆಯುತ್ತಿರುವ “ಕಾಲಾಂತಕ’ ಫೆಬ್ರವರಿ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.