ನವದೆಹಲಿ:ದೇಶಾದ್ಯಂತ ಸಂಚಲನ ಮೂಡಿಸಿ, ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ಖಾಯಂಗೊಳಿಸಿದೆ. ಏತನ್ಮಧ್ಯೆ ಪ್ರಕರಣದಲ್ಲಿ 3 ವರ್ಷ (ಪುನರ್ ವಸತಿ ಕೇಂದ್ರದಲ್ಲಿ) ಶಿಕ್ಷೆ ಅನುಭವಿಸಿ ದೋಷಿಯಾಗಿದ್ದ ಬಾಲಾಪರಾಧಿ ಮಾತ್ರ ಈಗ ಹೊಸ ಜೀವನ ನಡೆಸುತ್ತಿದ್ದಾನೆ!
ನಿರ್ಭಯಾ ಪ್ರಕರಣದ ಕುರಿತ ಯಾವುದೇ ಬೆಳವಣಿಗೆ ಬಾಲಾಪರಾಧಿಗೆ ಗೊತ್ತಿಲ್ಲ. ಈ ಬಾಲಾಪರಾಧಿ ಪ್ರತಿಷ್ಠಿತ ರೆಸ್ಟೋರೆಂಟ್ ವೊಂದರಲ್ಲಿ ಅಡುಗೆ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದು, ಅಂದು ನಿರ್ಭಯಾ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಪರಾಧಿಗೆ ಈಗ 23ರ ಹರೆಯ.
ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ತಡೆ ಕೋರಿ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಬಳಿಕ ಸುಪ್ರೀಂಕೋರ್ಟ್ ಬಾಲಾಪರಾಧಿಯನ್ನು ಬಿಡುಗಡೆಗೊಳಿಸಿ ಇನ್ಮುಂದೆ ಪೊಲೀಸರ ರಕ್ಷಣೆ ಮುಂದುವರಿಸಲು ಆಗದ ಕಾರಣಕ್ಕೆ ಆತನನ್ನು ಸರ್ಕಾರೇತರ ಸಂಸ್ಥೆ(ಎನ್ ಜಿಒ)ಗೆ ಒಪ್ಪಿಸಿ ರಹಸ್ಯ ಸ್ಥಳಕ್ಕೆ ಕಳುಹಿಸಿತ್ತು.
ಇದೀಗ ನಿರ್ಭಯಾ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಮತ್ತೆ ಬಾಲಾಪರಾಧಿ ಬಗ್ಗೆ ಚಿತ್ತ ಹರಿದಿದೆ. ಆದರೆ ಬಾಲಾಪರಾಧಿ ಈವರೆಗೂ ರಾಷ್ಟ್ರೀಯ ನ್ಯೂಸ್ ಚಾನೆಲ್ ಗಳ ದೃಷ್ಟಿಗೆ ಬಿದ್ದಿಲ್ಲ. ಆತ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತ ಹೊಸ ಜೀವನ ನಡೆಸುತ್ತಿದ್ದಾನೆ ಎಂದು ಮಾಹಿತಿ ನೀಡಿರುವ ಎನ್ ಜಿಒ ಅಧಿಕಾರಿ ಆತನ ಸುರಕ್ಷತೆಯ ದೃಷ್ಟಿಯಿಂದಾಗಿ ಬೇರೆ ಯಾವುದೇ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನಿರ್ಭಯಾ ಪ್ರಕರಣದಲ್ಲಿ ಬಾಲಾಪರಾಧಿ 3 ವರ್ಷ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ ದಕ್ಷಿಣ ಭಾರತದ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 2015 ಡಿಸೆಂಬರ್ 15ರಂದು ಬಿಡುಗಡೆಗೊಂಡ ಬಳಿಕ ಎನ್ ಜಿಒ ಆತನನ್ನು ಕೆಲವು ದಿನಗಳ ಕಾಲ ರಹಸ್ಯವಾಗಿ ಇಟ್ಟುಕೊಂಡಿತ್ತು. ಆ ನಂತರ ಬಾಲಪರಾಧಿಯನ್ನು ದಕ್ಷಿಣ ಭಾರತದತ್ತ ಕಳುಹಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಆದರೆ ಬಹುತೇಕರಿಗೆ ಆತನ ಹಿನ್ನೆಲೆ ಗೊತ್ತಿಲ್ಲ. ಆತ ದೆಹಲಿಯಿಂದ 240 ಕಿಮೀ ದೂರದಲ್ಲಿನ ಗ್ರಾಮದಲ್ಲಿರುವ ಮನೆ ಬಿಟ್ಟು ಕೆಲಸಕ್ಕೆ ಬಂದಾಗ 11 ವರ್ಷದವನಾಗಿದ್ದನಂತೆ. ಅನಾರೋಗ್ಯ ಪೀಡಿತ ತಾಯಿ, ಸಹೋದರರು, ಹಾಸಿಗೆ ಹಿಡಿದಿದ್ದ ತಂದೆ ಸೇರಿದಂತೆ ಕುಟುಂಬದ 6 ಮಂದಿ ಸದಸ್ಯರನ್ನು ಆತನ ಹಿರಿಯ ಅಕ್ಕ ದುಡಿದು ಸಾಕಬೇಕಾದ ಅನಿವಾರ್ಯತೆ ಇತ್ತು. ಈಗಲೂ ಆ ಕುಟುಂಬ ಅದೇ ಹಳ್ಳಿಯಲ್ಲಿ ವಾಸಿಸುತ್ತಿದೆ ಎಂದು ಅಧಿಕಾರಿ ವಿವರಿಸಿದ್ದಾರೆ. ಏತನ್ಮಧ್ಯೆ ಈತನ ಮೇಲೆ ಗುಪ್ತಚರ ಇಲಾಖೆ ಈಗಲೂ ತೀವ್ರ ನಿಗಾ ಇರಿಸಿರುವುದಾಗಿ ವರದಿ ಹೇಳಿದೆ.