ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ ನ ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿಯೂ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಸತತ ಎರಡು ಸೀಸನ್ ಗಳಲ್ಲಿ ಪ್ಲೇ ಆಫ್ ಹಂತಕ್ಕೇರಿದ ಲಕ್ನೋ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲಲಾಗಿಲ್ಲ. ಹೀಗಾಗಿ ಮುಂದಿನ ಸೀಸನ್ ಗೆ ಮಹತ್ತರ ಬದಲಾವಣೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ.
ಮೊದಲ ಹಂತವಾಗಿ ಫ್ರಾಂಚೈಸಿಯು ಮುಖ್ಯ ಕೋಚ್ ಬದಲಾವಣೆಗೆ ಹೊರಟಿದೆ. ತಂಡದ ಕೋಚ್ ಆಗಿರುವ ಆ್ಯಂಡಿ ಫ್ಲವರ್ ಅವರು ಎರಡು ವರ್ಷದ ಒಪ್ಪಂದ ಹೊಂದಿದ್ದಾರೆ. ಈ ಬಾರಿ ಅವರ ಒಪ್ಪಂದದ ಅವಧಿ ಮುಗಿಯಲಿದೆ. ಹೀಗಾಗಿ ಹೊಸ ಕೋಚ್ ಹುಡುಕಲು ಹೊರಟ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಸೂಪರ್ ಜೈಂಟ್ಸ್, ಆಸ್ಟ್ರೇಲಿಯಾ ಮಾಜಿ ಆಟಗಾರ, ಈ ಹಿಂದೆ ಆಸೀಸ್ ತಂಡದ ಕೋಚ್ ಆಗಿದ್ದ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಎಲ್ಎಸ್ ಜಿ ಮ್ಯಾನೇಜ್ ಮೆಂಟ್ ಅಥವಾ ಲ್ಯಾಂಗರ್ ಸ್ವತಃ ನಡೆಯುತ್ತಿರುವ ಮಾತುಕತೆಗಳನ್ನು ದೃಢೀಕರಿಸದಿದ್ದರೂ, ಐಪಿಎಲ್‌ನ ಮೂಲಗಳು ಆಸ್ಟ್ರೇಲಿಯಾದ ಮಾಜಿ ಕೋಚ್ ಮತ್ತು ಫ್ರಾಂಚೈಸ್ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿವೆ ಎಂದು ಸೂಚಿಸಿವೆ ಎಂದು ವರದಿ ಹೇಳಿದೆ. ಲ್ಯಾಂಗರ್ ಈ ಹಿಂದೆ 2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ್ದಾರೆ. ಅಲ್ಲದೆ ಮೊದಲ ನಾಲ್ಕು ವರ್ಷಗಳಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಮೂರು ಬಿಗ್ ಬ್ಯಾಷ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಕೋಚ್ ಆಗಿ ಸಹಾಯಕರಾಗಿದ್ದಾರೆ.
ಇದನ್ನೂ ಓದಿ:ಪ್ರತಿಭಟನೆ ಕೈ ಬಿಡಿ, ಜೈನ ಸಮಾಜದೊಂದಿಗೆ ನಾವಿದ್ದೇವೆ: ಸಚಿವ ಡಾ.ಜಿ.ಪರಮೇಶ್ವರ ಅಭಯ
ಸದ್ಯ ಜಸ್ಟಿನ್ ಲ್ಯಾಂಗರ್ ಅವರು ಯಾವುದೇ ಜವಾಬ್ದಾರಿ ಹೊಂದಿಲ್ಲ. ಹೀಗಾಗಿ ಫ್ರಾಂಚೈಸಿಯು ಹಲವು ಸುತ್ತಿನ ಮಾತುಕತೆ ನಡೆಸಿದೆ.
ಆದರೆ, ಎಲ್ಎಸ್ ಜಿ ಸಹಾಯಕ ಸಿಬ್ಬಂದಿಯಲ್ಲಿ ಇತರ ಬದಲಾವಣೆಗಳ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಮೋರ್ನೆ ಮೊರ್ಕೆಲ್, ಜಾಂಟಿ ರೋಡ್ಸ್ ಮತ್ತು ವಿಜಯ್ ದಹಿಯಾ ಕ್ರಮವಾಗಿ ಬೌಲಿಂಗ್, ಫೀಲ್ಡಿಂಗ್ ಮತ್ತು ಸಹಾಯಕ ತರಬೇತುದಾರರಾಗಿ ಮುಂದುವರಿಯುವ ನಿರೀಕ್ಷೆಯಿದೆ.