Advertisement

ದತ್ತು ಪಡೆಯುವಾಸೆಗೆ ನ್ಯಾಯದ ಆಸರೆ

04:08 PM Jun 28, 2018 | Team Udayavani |

ಬೆಂಗಳೂರು: ಅನಾಥ ಹೆಣ್ಣು ಮಗು ಕೋಟ್ಯಧೀಶ ದಂಪತಿ ಮಡಿಲು ಸೇರಲು ಹೈಕೋರ್ಟ್‌ ನೆರವಾದ ಅಪರೂಪದ ಪ್ರಕರಣವಿದು. ಒಂಬತ್ತು ತಿಂಗಳ ಮಗುವನ್ನು ದತ್ತುಪಡೆಯಲು ಕಾತರರಾಗಿದ್ದ ದಂಪತಿಯನ್ನು ಪೌರತ್ವದ ಗೊಂದಲ ಇಕ್ಕಟ್ಟಿಗೆ ಸಿಲುಕಿಸಿತ್ತು. ಅಮೆರಿಕ ಪೌರತ್ವ ಹೊಂದಿರುವುದು ಹಾಗೂ ಸಾಗರೋತ್ತರ ಭಾರತೀಯ ಪೌರತ್ವ ಮರುಪರಿಶೀಲನೆ ಆಗಬೇಕಿರುವ ಕಾರಣ ಮಗು ದತ್ತು ಪಡೆಯಲು ಅರ್ಹರಲ್ಲ ಎಂಬ ಕಾರಣ ನೀಡಿ ದಂಪತಿ
ಮನವಿಯನ್ನು ತಿರಸ್ಕರಿಸಿದ್ದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಆದೇಶವನ್ನು ವಜಾಗೊಳಿಸಿ ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ.

Advertisement

ಜತೆಗೆ ದೇಶದ ಪ್ರಜೆಗಳು ಮಗು ದತ್ತು ಸ್ವೀಕರಿಸುವ ಮಾರ್ಗಸೂಚಿಗಳ ಅಧ್ಯಾಯ ಮೂರರಲ್ಲಿನ ನಿಯಮ (21) 1ರ ಅನ್ವಯ ದತ್ತು ಪಡೆಯುವ ದಂಪತಿ ಪೈಕಿ ಒಬ್ಬರು ಭಾರತೀಯರಾಗಿದ್ದರೂ ಆ ಕುಟುಂಬವನ್ನು ಭಾರತೀಯ
ಕುಟುಂಬ ಎಂದೇ ಪರಿಗಣಿಸಬೇಕಾಗುತ್ತದೆ ಎಂಬ ಅಂಶವನ್ನು ನ್ಯಾಯ ಪೀಠ ಎತ್ತಿಹಿಡಿದಿದೆ. ಅಲ್ಲದೆ, ಅರ್ಜಿದಾರ ದಂಪತಿ ಭಾರತೀಯ ಪೌರತ್ವದ ನಿಯಮಗಳ ಅಡಿಯಲ್ಲೇ ಸಲ್ಲಿಸಿದ್ದ ದತ್ತು ಪಡೆಯುವ ಮನವಿಯನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ದಂಪತಿಯ ಮನವಿಯ ಕುರಿತು ಮುಂದಿನ 15ದಿನಗಳಲ್ಲಿ ಕ್ರಮ ವಹಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಆದೇಶಿಸಿದೆ.

ಏನಿದು ಪ್ರಕರಣ?: ಐಐಟಿ ಪದವೀಧರಾಗಿರುವ ಪ್ರವೀಣ್‌, ಉದ್ಯೋಗ ನಿಮಿತ್ತ 2000ರಲ್ಲಿ ಅಮೆರಿಕಗೆ ತೆರಳಿದ್ದರು. ಈ ಮಧ್ಯೆ ಭಾರತೀಯ ಮೂಲದ ಅಮೆರಿಕ ಪೌರತ್ವ ಹೊಂದಿರುವ ಡಾ. ಸ್ವಾತಿ (ದಂಪತಿ ಹೆಸರು ಬದಲಿಸಲಾಗಿದೆ)
ಎಂಬುವವರನ್ನು 2006ರಲ್ಲಿ ವಿವಾಹವಾಗಿದ್ದರು. ಬಳಿಕ ಭಾರತದಲ್ಲೇ ತಮ್ಮ ಮುಂದಿನ ಜೀವನ ಕಳೆಯುವ ಉದ್ದೇಶದಿಂದ ದಂಪತಿ 2016ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. 

ಅದೇ ವರ್ಷ ಹೆಣ್ಣು ಮಗುವೊಂದನ್ನು ದತ್ತು ಸ್ವೀಕರಿಸಲು ನಿರ್ಧರಿಸಿ, 2016ರ ಜುಲೈ 19ರಂದು ಸೆಂಟ್ರಲ್‌ ಅಡಾಪ್ಶನ್‌ ರಿಸೋರ್ಸ್‌ ಇನ್ಫಾರ್ಮೇಶನ್‌ ಆಂಡ್‌ ಗೈಡ್‌ಲೈನ್ಸ್‌ ಸಿಸ್ಟಮ್‌ನಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯೂ ಪರಿಗಣಿತವಾಗಿತ್ತು. ಆದರೆ, 2016ರ ಡಿಸೆಂಬರ್‌ನಲ್ಲಿ ಪ್ರವೀಣ್‌ ಅವರಿಗೆ ಅಮೆರಿಕ ಪೌರತ್ವ ದೊರೆತಿತ್ತು. ಅವರು
ಸಾಗರೋತ್ತರ ಭಾರತೀಯ ನಾಗರಿಕತ್ವದ ಕಾರ್ಡ್‌ ಕೂಡ ಪಡೆದುಕೊಂಡಿದ್ದರು. ಹೀಗಾಗಿ 2017ರ ಏ.27ರಂದು 2ನೇ ಬಾರಿಗೆ ದತ್ತು ಅರ್ಜಿ ಸಲ್ಲಿಸಿದ್ದರು.

ಈ ಬೆಳವಣಿಗಳ ನಡುವೆಯೇ ದಂಪತಿಯ ಮನವಿ ಮೇರೆಗೆ ಖಾಸಗಿ ಏಜನ್ಸಿಯೊಂದು ಪ್ರವೀಣ್‌ ಅವರ ಕುಟುಂಬದ ಹಿನ್ನೆಲೆ ವಿವರಗಳನ್ನು ದತ್ತು ಪ್ರಾಧಿಕಾರಕ್ಕೆ ನೀಡಿತ್ತು. ಇದನ್ನು ದತ್ತು ಪ್ರಾಧಿಕಾರ ಕೂಡ ಪರಿಗಣಿಸಿತ್ತು. ಹೀಗಾಗಿ ದಂಪತಿ, ಬಿಹಾರದ ಪಾಟ್ನಾದ ಪ್ರಯಾಸ್‌ ಭಾರತಿ ಟ್ರಸ್ಟ್‌ನಲ್ಲಿ ಇರುವ ಹೆಣ್ಣುಮಗು ದತ್ತು ಪಡೆಯಲು ನಿರ್ಧರಿಸಿದರು. ಕಾನೂನು ಪ್ರಕ್ರಿಯೆಗಳು ಮುಗಿದು ಮಗುವನ್ನು ಕುಟುಂಬಕ್ಕೆ ಸೇರಿಸಿ ಕೊಳ್ಳುವ ಉತ್ಸಾಹದಿಂದಿದ್ದರು.

Advertisement

ಆದರೆ, 2017ರ ಮಾ.15ರಂದು ಪ್ರಾಧಿಕಾರ ದಂಪತಿ ಸಲ್ಲಿಸಿದ್ದ ಎರಡನೇ ಮನವಿಯ ಆಧಾರದ ಮೇಲೆ ತಾವು ಅಮೆರಿಕ ಪ್ರಜೆಗಳಾಗಿರುವುದ ರಿಂದ ಹಾಗೂ ಸಾಗರೋತ್ತರ ಪೌರತ್ವ ಮರುಪರಿಶೀಲನೆ ಆಗಬೇಕಿರುವ ಕಾರಣ ದತ್ತು ಪಡೆಯಲು ಅವಕಾಶವಿಲ್ಲ ಎಂದು ತಿಳಿಸಿತ್ತು. ಹೀಗಾಗಿ ದಂಪತಿ ಹೈಕೋರ್ಟ್‌ ಮೊರೆಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next