ಮೈಸೂರು: ನ್ಯಾ. ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯು ಸಂವಿಧಾನದ ಮೂಲ ಉದ್ದೇಶಗಳಿಗೆ ವ್ಯತಿರಿಕ್ತವಾಗಿದ್ದು, ವರದಿಯನ್ನು ಕೂಡಲೇ ತಿರಸ್ಕರಿಸಬೇಕೆಂದು ಒತ್ತಾಯಿಸಿ ಬಂಜಾರ ಸದ್ಗುರು ಸೇವಾಲಾಲ್ ಮಹಾರಾಜ್ ಪ್ರತಿಷ್ಠಾನದ ಸದಸ್ಯರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಅಗ್ರಮಾನ್ಯ ಸ್ಥಾನವಿದ್ದು, ಒಳಮೀಸಲಾತಿಯ ಬಗ್ಗೆ ಮೂಲ ಸಂವಿಧಾನದಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲದ ಕಾರಣ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸ ಲಾತಿಗಳ ಅವಶ್ಯಕತೆ ಇಲ್ಲ. ಅಲ್ಲದೆ ತುಳಿತಕ್ಕೊಳಗಾಗಿರುವ ಬಂಜಾರ (ಲಂಬಾಣಿ) ಸಮುದಾಯಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿ ವರದಾನವಾಗಿದೆ.
ಆದರೆ ನ್ಯಾ.ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಈ ಸಮುದಾಯಕ್ಕೆ ಮರಣ ಶಾಸನವಾಗಿದ್ದು, ಆದ್ದರಿಂದ ರಾಜ್ಯ ಸರ್ಕಾರ ಸದಾಶಿವ ಆಯೋಗದ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ರಾಯಚೂರಿನ ಸಿದ್ಧಲಿಂಗ ಸ್ವಾಮೀಜಿ, ಪ್ರತಿಷ್ಠಾನದ ಪದಾಧಿಕಾರಿಗಳಾದ ಚಂದ್ರಶೇಖರ್, ಹೇಮಂತ್‌ಕುಮಾರ್, ಆರ್.ಕೃಷ್ಣ ನಾಯಕ್, ಚಂದ್ರಶೇಖರ್ ನಾಯ್ಕ, ಪ್ರಮಿಳಾ ನಾಯಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.