ಕಲಬುರಗಿ: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಿರುವ ನ್ಯಾ| ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಇಡುವ ಮೂಲಕ ಟೀಕಾಕಾರರ ಬಂಡವಾಳ ಬಯಲು ಮಾಡಬೇಕೆಂದು ಮಾಜಿ ಸಚಿವ ಕೆ.ಬಿ. ಶಾಣಪ್ಪ ಒತ್ತಾಯಿಸಿದರು.
ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆದರ್ಶ ಕಲ್ಯಾಣ ಟ್ರಸ್ಟ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮಾದಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾ| ಎ.ಜೆ. ಸದಾಶಿವ ಆಯೋಗದ ವರದಿವು ಅವೈಜ್ಞಾನಿಕ ಮತ್ತು ಸಂವಿಧಾನ ಬಾಹಿರ ಎಂದು ಕೆಲವರು ಟೀಕಿಸಿ ವರದಿ ಜಾರಿಗೆ ವಿರೋಧಿಸುತ್ತಿದ್ದಾರೆ. ಅಂತಹವರ ಬಂಡವಾಳ ಬಯಲಿಗೆ ಎಳೆಯಲು ವರದಿಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕಿದೆ. ನ್ಯಾ| ಸದಾಶಿವ ಆಯೋಗದ ವರದಿ ಜಾರಿ ಬರುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ನಾಡೋಜ ಭೀಮಣ್ಣ ಬೋನಾಳ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ಎಲ್ಲರೂ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಬೇಕೆಂಬ ದಿಸೆಯಲ್ಲಿ ನ್ಯಾ| ಸದಾಶಿವ ಆಯೋಗ ರಚಿಸಲಾಗಿತ್ತು. ಆದರೆ, ವರದಿ ಬಗ್ಗೆ ಅಪಪ್ರಚಾರ ಮಾಡಿ ವಿರೋಧ ವಕ್ತಪಡಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ದೃಢ ನಿರ್ಧಾರದಿಂದ ವರದಿ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿದರು.
ಮುಖ್ಯ ಭಾಷಣಕಾರಾಗಿ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ| ನಿಜಲಿಂಗಪ್ಪ ಮಟ್ಟಿಹಾಳ, ರಾಜ್ಯ ಸರ್ಕಾರದಲ್ಲಿ ಮಾದಿಗ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಯೋಚಿಸಬೇಕು ಎಂದರು. ಜಾತಿ ತಾರತಮ್ಯ ಸಮಾಜದಿಂದ ಇನ್ನೂ ತೊಲಗಿಲ್ಲ. ನಮ್ಮಲ್ಲಿ ಪ್ರತಿಭೆಗಳಿದ್ದರೂ ಗುರುತಿಸುವವರು ಯಾರೂ ಇಲ್ಲ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಸನ್ಮಾನಿಸುತ್ತಿರುವುದು ಶ್ರೇಷ್ಠವಾದದ್ದು ಎಂದರು.
ಭೀಮಣ್ಣ ಬೋನಾಳ, ಎಂ.ಲಕ್ಷ್ಮೀನಾರಾಯಣ, ಡಾ| ಉಮೇಶ, ಎಸ್.ಎಚ್. ದುಗ್ಗಪ್ಪ ಹಾಗೂ ಮಾದಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು, ಸೇವಾ ನಿವೃತ್ತಿ ಹೊಂದಿದವರು, ಸೇವಾ ಬಡ್ತಿ ಪಡೆದವರು ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.
ಲೋಕಸೇವಾ ಆಯೋಗದ ಸದಸ್ಯ ಎಸ್. ಎಚ್. ದುಗ್ಗಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ, ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ. ವೆಂಕಪ್ಪ, ಕೃಷಿ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ| ಬಾಬುರಾವ ಮುಡಬಿ, ನರರೋಗ ತಜ್ಞ ಡಾ| ಉಮೇಶ ಟಿ., ಮಾದಿಗ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಮಂತ ಕಟ್ಟಿಮನಿ, ಸುಭಾಷ ಜಿ. ವಾಲಿ, ಎಚ್.ಆರ್. ತೆಗನೂರ, ಚಂದ್ರೀಕಾ ಪರಮೇಶ್ವರ, ಭೀಮಣ್ಣ ಬಿಲ್ಲವ, ಶಾಮ ನಾಟಿಕಾರ ಇದ್ದರು.