Advertisement

ವಿಷದ ಬಾಟಲಿಯಿಂದ ನ್ಯಾಯ ಸಿಕ್ಕಿತು!

11:43 AM Mar 16, 2018 | Team Udayavani |

ಬೆಂಗಳೂರು: ತಾನು ಮಾಡದ ತಪ್ಪಿಗೆ ಹತ್ತಾರು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ನಿವೃತ್ತ ಪಾಲಿಕೆ ನೌಕರರೊಬ್ಬರು ತಮಗೆ ದಯಾಮರಣ ನೀಡುವಂತೆ ಮೇಯರ್‌ಗೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ವಿಷದ ಬಾಟಲಿ ಸಮೇತ ಬಿಬಿಎಂಪಿಗೆ ಆಗಮಿಸಿ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದರು. 

Advertisement

ರೂಗಿಯವರಿಗೆ ಬೆದರಿದ ಪಾಲಿಕೆಯ ಆಡಳಿತ ವಿಭಾಗದ ಅಧಿಕಾರಿಗಳು ಕೂಡಲೇ ರೂಗಿ ಅವರ ಕಡತ ತರಿಸಿಕೊಂಡು ವಿಲೇವಾರಿಗೆ ಆಯುಕ್ತರಿಗೆ ಕಳುಹಿಸಿದರು. ಚಿಕ್ಕಪೇಟೆಯ ಸಹಾಯಕ ಕಂದಾಯ ಕಚೇರಿಯಲ್ಲಿ ಕಂದಾಯ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್‌.ಜಿ.ರೂಗಿ ಅವರು ವಿದ್ಯುತ್‌ ಉಪಕರಣಗಳ ಖರೀದಿಯಲ್ಲಿ ಪಾಲಿಕೆಗೆ ವಂಚಿಸಿದ್ದಾರೆ ಎಂದು ಆರೋಪಿಸಿ 1991ರಲ್ಲಿ ಅಮಾನತುಗೊಳಿಸಲಾಗಿತ್ತು. ಆದರೆ, 1994ರಲ್ಲಿ ಇಲಾಖಾ ವಿಚಾರಣೆ ಹಾಗೂ 2017ರಲ್ಲಿ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ. 

ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಮುಂದಾಗಿರಲಿಲ್ಲ. ಹಲವಾರು ಸಾರಿ ಪಾಲಿಕೆ ಕಚೇರಿಗೆ ಅಲೆದು ಬೇಸತ್ತಿದ್ದ ಅವರು, ಗುರುವಾರ ವಿಷದ ಬಾಟಲಿಯೊಂದಿಗೆ ಪಾಲಿಕೆಗೆ ಆಗಮಿಸಿದ್ದರು. ತಮಗೆ ಬರಬೇಕಾದ ಬಡ್ತಿ ಹಾಗೂ ಪಿಂಚಣಿ ಸೌಲಭ್ಯಗಳನ್ನು ಶೀಘ್ರ ನೀಡದಿದ್ದರೆ ಪಾಲಿಕೆಯ ಆವರಣದಲ್ಲಿಯೇ ವಿಷ ಸೇವಿಸುವುದಾಗಿ ಬೆದರಿಕೆ ಹಾಕಿದರು. 

ಇದರಿಂದ ಬೆಚ್ಚಿದ ಅಧಿಕಾರಿಗಳು ಕಡತವನ್ನು ತರಿಸಿಕೊಂಡು ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಅನುಮತಿ ನೀಡುವಂತೆ ಆಯುಕ್ತರಿಗೆ ಕಡತ ರವಾನಿಸಿದರು. ನಂತರ ಮಾತನಾಡಿದ ರೂಗಿ ಅವರು, ಇಲಾಖಾ ವಿಚಾರಣೆಯಲ್ಲಿ ತಪ್ಪು ಮಾಡಿಲ್ಲ ಎಂದು ಸಾಬೀತಾದರೂ, ನನಗೆ ಬರಬೇಕಾದ ಸೌಲಭ್ಯಗಳನ್ನು ನೀಡಲಿಲ್ಲ.

ಇದೀಗ ನ್ಯಾಯಾಲಯ ಆದೇಶದ ನಂತರವೂ ಬಡ್ತಿ ಹಾಗೂ ಪಿಂಚಣಿ ಸೌಲಭ್ಯ ನೀಡಲು ವಿಳಂಬ ಮಾಡುತ್ತಿದ್ದಾರೆ. ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಹಣದ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ವಿಷ ಸೇವಿಸಲು ಸಿದ್ಧನಾಗಿ ಪಾಲಿಕೆಗೆ ಬಂದಿದ್ದೆ, ಇದೀಗ ಆಡಳಿತ ವಿಭಾಗದ ಉಪ ಆಯುಕ್ತರು ಕಡತವನ್ನು ಆಯುಕ್ತರ ಸಹಿಗೆ ಕಳುಹಿಸಿದ್ದಾರೆ ಎಂದು ನಿಟ್ಟುಸಿರು ಬಿಟ್ಟರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next