Advertisement
ನ್ಯಾ| ಕರ್ಣನ್ ಅವರ ವರ್ತನೆ ಭಾರತೀಯ ನ್ಯಾಯಾಂಗ ಕಾಪಾಡಿ ಕೊಂಡು ಬಂದಿರುವ ಘನತೆ, ವಿಶ್ವಾಸಾರ್ಹತೆಗಳಿಗೆ ಧಕ್ಕೆ ಉಂಟು ಮಾಡುವಂಥದ್ದು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸೂಕ್ತವಾಗಿ ಸರಿಪಡಿಸಿಕೊಂಡು ಮುಂದುವರಿಯಬೇಕಾಗಿದೆ.
Related Articles
Advertisement
ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ, ನ್ಯಾ| ಕರ್ಣನ್ ವರ್ತನೆಯನ್ನು ಖಾರವಾಗಿ ಖಂಡಿಸಿರುವುದು ಸರಿಯಾಗಿಯೇ ಇದೆ. ನ್ಯಾ| ಕರ್ಣನ್ ಹುಚ್ಚಾಟಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಲ್ಲಿ ಒಬ್ಬ ಕುಟಿಲ ರಾಜಕಾರಣಿಯ ಸ್ವಭಾವವನ್ನು ಕಾಣಬಹುದು. ಸಹ ನ್ಯಾಯಾಧೀಶರ ವಿರುದ್ಧ ಗಂಭೀರವಾದ ಆರೋಪವನ್ನು ಮಾಡುತ್ತಾರೆ. ಆದರೆ ಅದನ್ನು ಪುಷ್ಟೀಕರಿಸುವ ಯಾವುದೇ ದಾಖಲೆ ಅಥವಾ ಪುರಾವೆಗಳನ್ನು ಬಹಿರಂಗಪಡಿಸುವುದಿಲ್ಲ. ಇನ್ನೊಂದು ಹೊಸ ಆರೋಪ ಸೃಷ್ಟಿಯಾಗುವ ತನಕ ಈ ಆರೋಪ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ.
ನ್ಯಾ| ಕರ್ಣನ್ ಹುಚ್ಚಾಟಗಳ ಮೂಲ ಅವರ ನೇಮಕಾತಿಯಲ್ಲೇ ಇದೆ. ನ್ಯಾ| ಕರ್ಣನ್ ಅವರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲು ಶಿಫಾರಸು ಮಾಡಿದ್ದು ನ್ಯಾ| ಎ.ಕೆ. ಗಂಗೂಲಿ. ವಕೀಲರಾಗಿ ಮಹತ್ವದ ಯಾವ ಪ್ರಕರಣಗಳಲ್ಲೂ ವಾದಿಸದ, ಹೇಳಿಕೊಳ್ಳುವಂತಹ ಸಾಧನೆಯಾಗಲಿ, ನ್ಯಾಯಾಂಗದ ಪ್ರಾವೀಣ್ಯವಾಗಲಿ ಇಲ್ಲದ ನ್ಯಾ| ಕರ್ಣನ್‌ಗೆ ಭಡ್ತಿ ನೀಡಲು ಗಂಗೂಲಿ ನೀಡಿದ ಸಮರ್ಥನೆ ಮೇಲಿನ ನ್ಯಾಯಾಂಗಗಳಲ್ಲಿ ದಲಿತರಿಗೆ ಪ್ರಾತಿನಿಧ್ಯವಿರಬೇಕು ಎಂಬುದು. 10 ವರ್ಷ ವಕೀಲರಾಗಿ ಕೆಲಸ ಮಾಡಿದವರು ಹೈಕೋರ್ಟ್ ನ್ಯಾಯಾಧೀಶರಾಗಬಹುದು ಎಂಬ ನಿಯಮದಂತೆ ನ್ಯಾಯಾಧೀಶರಾದವರು ನ್ಯಾ| ಕರ್ಣನ್. ಅಂದರೆ, ಪ್ರಸ್ತುತ ನ್ಯಾಯಾಧೀಶರುಗಳನ್ನು ನೇಮಿಸಲು ಅನುಸರಿಸುತ್ತಿರುವ ವಿಧಾನ ಸಮಗ್ರವಾಗಿಲ್ಲ ಎನ್ನುವ ಅಂಶ ಈ ಪ್ರಕರಣದಿಂದ ಸ್ಪಷ್ಟವಾಗಿದೆ.
ಇದೀಗ ನ್ಯಾ| ಕರ್ಣನ್ ಪ್ರಕರಣ ನ್ಯಾಯಾಂಗ ನೇಮಕಾತಿ ವ್ಯವಸ್ಥೆಯಲ್ಲಿ ಆಮೂಲಾಗ್ರವಾದ ಬದಲಾವಣೆಗಳಾಗಬೇಕೆಂಬ ಚರ್ಚೆಯನ್ನು ಮತ್ತೂಮ್ಮೆ ಮುನ್ನೆಲೆಗೆ ತಂದಿದೆ. ಸುಪ್ರೀಂ ಕೋರ್ಟಿಗೆ ಸಡ್ಡು ಹೊಡೆದಿರುವ ಕರ್ಣನ್‌ಗೆ ಸಂಸತ್ತಿನಲ್ಲಿ ವಾಗ್ಧಂಡನೆ ಹಾಕುವ ಮತ್ತು ರಾಷ್ಟ್ರಪತಿಯಿಂದ ಛೀಮಾರಿ ಹಾಕಿಸುವ ಸಾಂವಿಧಾನಿಕ ಕ್ರಮಗಳು ಇವೆ ಎನ್ನುವುದು ನಿಜ. ಆದರೆ ತನ್ನ ಹುಚ್ಚಾಟಗಳಿಂದ ಕರ್ಣನ್ ನ್ಯಾಯಾಂಗದ ಪಾವಿತ್ರ್ಯಕ್ಕೆ ಅಳಿಸಲಾಗದ ಕಳಂಕ ಮೆತ್ತಿದ್ದಾರೆ.
ನ್ಯಾಯಾಧೀಶರಿಂದ ಭ್ರಷ್ಟಾಚಾರದಂತಹ ಪ್ರಕರಣಗಳು ಅಪರೂಪಕ್ಕೆ ಕಂಡುಬಂದಿದ್ದರೂ ಭಾರತೀಯ ನ್ಯಾಯಾಂಗ ತನ್ನ ಪಾವಿತ್ರ್ಯ ಮತ್ತು ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಕಾರ್ಯಾಂಗ ಮತ್ತು ಶಾಸಕಾಂಗ ವಿಫಲವಾದಾಗ ನ್ಯಾಯಾಂಗ ಸಕ್ರಿಯ ಪಾತ್ರವನ್ನು ನಿರ್ವಹಿಸಿದ ಅದೆಷ್ಟೋ ಉದಾಹರಣೆಗಳಿವೆ. ಜನತೆ ನ್ಯಾಯಾಂಗದ ಮೇಲೆ ಅಪಾರ ವಿಶ್ವಾಸ ಇರಿಸಿದ್ದಾರೆ. ನ್ಯಾ| ಕರ್ಣನ್ ಅವರಂತಹ ನ್ಯಾಯಾಧೀಶರಿಂದ ಈ ಘನತೆ, ವಿಶ್ವಾಸಾರ್ಹತೆಗಳಿಗೆ ಕುಂದು ಉಂಟಾಗಬಾರದು. ಹಾಗಾಗಿ ಒಂದೋ ಕರ್ಣನ್ ತನ್ನ ವರ್ತನೆಗಳನ್ನು ಸರಿಪಡಿಸಿಕೊಂಡು ಮುಂದುವರಿಯಲಿ ಅಥವಾ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿಧೇಯವಾಗಿ ವರ್ತಿಸಲಿ.