ಹೊಸದಿಲ್ಲಿ : ಕೋರ್ಟ್ ನಿಂದನೆಗಾಗಿ ಜಾರಿಯಾಗಿದ್ದ ಅರೆಸ್ಟ್ ವಾರೆಂಟ್‌ನಿಂದ ಇಷ್ಟು ಕಾಲವೂ ತಪ್ಪಿಸಿಕೊಂಡು ಕೊನೆಗೂ ನಿನ್ನೆ ಮಂಗಳವಾರ ತಮಿಳು ನಾಡಿನ ಕೊಯಮುತ್ತೂರಿನಲ್ಲಿ ಬಂಧಿಸಲ್ಪಟ್ಟಿದ್ದ ಕಲ್ಕತ್ತ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಜಸ್ಟಿಸ್ ಸಿ ಎಸ್ ಕರ್ಣನ್ ಅವರು ಕಳೆದ ಮೇ ತಿಂಗಳಲ್ಲಿ ನ್ಯಾಯಾಲಯವು ತನಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯ ರದ್ದತಿ ಹಾಗೂ ಜಾಮೀನು ಮಂಜೂರಾತಿಯನ್ನು ಕೋರಿ ಸುಪ್ರಿಂ ಕೋರ್ಟಿಗೆ ಅರ್ಜಿ ಹಾಕಿದ್ದರು. ಆದರೆ ಸುಪ್ರೀಂ ಕೋರ್ಟ್ ಇಂದು ಅವರ ಜಾಮೀನು ಕೋರಿಕೆಯ ಅರ್ಜಿಯನ್ನು ತಿರಸ್ಕರಿಸಿತು. ಇದನ್ನು ಅನುಸರಿಸಿ ಜಸ್ಟಿಸ್ ಕರ್ಣನ್ ಅವರನ್ನು ಕೋಲ್ಕತಾದ ಪ್ರಸಿಡೆನ್ಸಿ ಜೈಲಿಗೆ ಕಳುಹಿಸಲಾಯಿತು.
“ನಿಮ್ಮ ಜೈಲು ಶಿಕ್ಷೆಯನ್ನು ಅಮಾನತು ಮಾಡಲು ನಮಗೆ ಸಾಧ್ಯವಿಲ್ಲ, ಏಕೆಂದರೆ ಆ ಆದೇಶವನ್ನು ಜಾರಿ ಮಾಡಿದ್ದು ಏಳು ನ್ಯಾಯಾಧೀಶರ ಪೀಠ’ ಎಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ಮತ್ತು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟಿನ ರಜಾಕಾಲದ ನ್ಯಾಯ ಪೀಠ ಹೇಳಿತು.
ಕರ್ಣನ್ ಅವರ ಜಾಮೀನು ಕೋರಿಕೆಯನ್ನು ತಿರಸ್ಕರಿಸುತ್ತಾ ಜಸ್ಟಿಸ್ ಚಂದ್ರಚೂಡ್ ಅವರು “ಸಾರಿ’ (ಕ್ಷಮಿಸಿ) ಎಂದು ಹೇಳಿದರು.
ಜಸ್ಟಿಸ್ ಕರ್ಣನ್ ಪರವಾಗಿ ಕೋರ್ಟಿನಲ್ಲಿ ಹಾಜರಿದ್ದ ಅವರ ವಕೀಲ ಮ್ಯಾಥ್ಯೂ ಜೆ ನಡುಂಪರಾ ಅವರು, “ಜಸ್ಟಿಸ್ ಕರ್ಣನ್ ಅವರಿಗೆ ಜಾಮೀನು ಮಂಜೂರು ಮಾಡುವ ಎಲ್ಲ ಅಧಿಕಾರ ರಜಾಕಾಲದ ಈ ಕೋರ್ಟಿಗೆ ಇದೆ. ಅದುದರಿಂದ ನ್ಯಾಯಾಲಯ ತೆರೆಯುವ ತನಕದ ಅವಧಿಗೆ ಕರ್ಣನ್ ಅವರಿಗೆ ಜಾಮೀನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ಏಳು ನ್ಯಾಯಾಧೀಶರು ಜಾರಿ ಮಾಡಿರುವ ಆದೇಶವನ್ನು ನಾವು ಮೀರಿ ಹೋಗಲಾರೆವು; ಆದುದರಿಂದ ಕರ್ಣನ್ ಅವರ ಜಾಮೀನು ಕೋರಿಕೆಯ ಅರ್ಜಿಯನ್ನು ನಾವು ಮನ್ನಿಸಲಾರೆವು’ ಎಂದು ಆದರೆ ಪೀಠ ನಿಷ್ಠುರವಾಗಿ ಹೇಳಿತು.