ಹೊಸದಿಲ್ಲಿ : ಕೋರ್ಟ್ ನಿಂದನೆಗಾಗಿ ತನಗೆ ಸುಪ್ರೀಂ ಕೋರ್ಟ್ ವಿಧಿಸಿರುವ ಆರು ತಿಂಗಳ ಜೈಲು ಶಿಕ್ಷೆಯನ್ನು ಅಮಾನತು ಪಡಿಸುವಂತೆ ಕೋರಿ ಕಲ್ಕತ್ತ ಹೈಕೋರ್ಟ್ ನ್ಯಾಯಾಧೀಶ್ ಸಿ ಎಸ್ ಕರ್ಣನ್ ಅವರು ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಂಡಿದ್ದಾರೆ ಎಂಬುದಾಗಿ ಕರ್ಣನ್ ಅವರನ್ನು ಪ್ರತಿನಿಧಿಸುತ್ತಿರುವ ವಕೀಲರು ಹೇಳಿದ್ದಾರೆ.
ಆದರೆ ರಾಷ್ಟ್ರಪತಿ ಕಾರ್ಯಾಲಯದವರು ಇಂತಹ ಯಾವುದೇ ಬಗೆಯ ಮನವಿಯ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಜಸ್ಟಿಸ್ ಕರ್ಣನ್ ಅವರು ಸಂವಿಧಾನದ 72ನೇ ವಿಧಿಯಡಿ ತನ್ನ ಜೈಲು ಶಿಕ್ಷೆಯ ತಡೆ ಇಲ್ಲವೇ ಅಮಾನತನ್ನು ಕೋರಿ ರಾಷ್ಟ್ರಪತಿಯವರಿಗೆ ಇ-ಮೇಲ್ ಮೂಲಕ ತಮ್ಮ ಮನವಿಯನ್ನು ಕಳುಹಿಸಿದ್ದಾರೆ ಎಂದು ಅವರನ್ನು ಪ್ರತಿನಿಧಿಸುತ್ತಿರುವ ವಕೀಲರು ನಿನ್ನೆಯೇ ಹೇಳಿದ್ದರು.
ಸಂವಿಧಾನದ 72ನೇ ವಿಧಿಯ ಪ್ರಕಾರ ರಾಷ್ಟ್ರಪತಿಯವರಿಗೆ ಯಾವನೇ ವ್ಯಕ್ತಿಯ ಯಾವುದೇ ಬಗೆಯ ಅಪರಾಧವನ್ನು ರದ್ದು ಮಾಡುವ, ಅಮಾನತು ಪಡಿಸುವ, ಕ್ಷಮಾದಾನ ನೀಡುವ ಅಧಿಕಾರ ಇದೆ.
ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್ ಕೆ ಎಸ್ ಖೇಹರ್ ನೇತೃತ್ವದ ಪೀಠವು ತನಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯ ತಡೆ ಅಥವಾ ಅಮಾನತು ಕೋರುವ ಜಸ್ಟಿಸ್ ಕರ್ಣನ್ ಅವರ ಮನವಿಯನ್ನು ಕರ್ಣನ್ ಅವರ ವಕೀಲರಾಗಿರುವ ಮ್ಯಾಥ್ಯೂಸ್ ಜೆ ನಡೆಂಪರಾ ಅವರು ಸಿದ್ಧಪಡಿಸಿದ್ದರು ಎನ್ನಲಾಗಿದೆ.
ಮೇ 9ರಂದು ಸುಪ್ರೀಂ ಕೋರ್ಟ್ ಪೀಠ ಜಸ್ಟಿಸ್ ಕರ್ಣನ್‌ಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ ಬಳಿಕದ ವಿದ್ಯಮಾನಗಳನ್ನು ಮ್ಯಾಥ್ಯೂಸ್ ಅವರು ಜಸ್ಟಿಸ್ ಕರ್ಣನ್ ಅವರ ಮನವಿಯಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಜಸ್ಟಿಸ್ ಕರ್ಣನ್ ಅವರು ಈ ಮೊದಲೇ ತನಗೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ಹಿಂಪಡೆಯಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ಅಸಾಧ್ಯವೆಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ.