ಹುಬ್ಬಳ್ಳಿ: ಕೋಟ್ಯಂತರ ರೂ. ವೆಚ್ಚದ ಇಲ್ಲಿನ ನ್ಯಾಯಾಲಯ ಸಂಕೀರ್ಣ ಬಳಕೆಗೆ ಸಿದ್ಧಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಾಣದಾಗಿದೆ. ಇಲ್ಲಿನ ತಿಮ್ಮಸಾಗರದ ಹೊಸೂರು-ಉಣಕಲ್ಲ ರಸ್ತೆಯಲ್ಲಿ 5 ಎಕರೆ 15 ಗುಂಟೆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಂದಾಜು 129 ಕೋಟಿ ರೂ. ವೆಚ್ಚದಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಬಿ+ಜಿ+5 ಅಂತಸ್ತು ಮಾದರಿಯಲ್ಲಿ ನಿರ್ಮಾಣಗೊಂಡಿದೆ. ಆದರೆ ಅದರ ಉದ್ಘಾಟನೆ ಭಾಗ್ಯ ಮಾತ್ರ ಇನ್ನು ಕೂಡಿಬಂದಿಲ್ಲ.
ವಿಶಾಲವಾದ ನೂತನ ಸಂಕೀರ್ಣ: ಕಟ್ಟಡದ ಕಾಮಗಾರಿಯನ್ನು ಹೈದರಾಬಾದ್‌ನ ಕೆಎಂವಿ ಪ್ರೊಜೆಕ್ಟ್ ಸಂಸ್ಥೆ ನಿರ್ವಹಿಸುತ್ತಿದೆ. 2014ರ ಮಾರ್ಚ್‌ನಲ್ಲಿ ಆರಂಭಿಸಲಾದ ಈ ಕಟ್ಟಡದ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅಂದಾಜು 24525 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.
ಸಂಕೀರ್ಣದಲ್ಲಿ 20 ಕೋರ್ಟ್ ಹಾಲ್, ಕಕ್ಷಿದಾರರ ವಿಶ್ರಾಂತಿ ಕೊಠಡಿ ಹಾಗೂ ಆಸೀನರಾಗಲು ಸ್ಥಳ, ವಿಚಾರಣೆಗೊಳಪಡುವ ವಿಚಾರಣಾಧೀನ ಕೈದಿಗಳಿಗಾಗಿ ಪ್ರತ್ಯೇಕ ಸೆಲ್, ವಾಹನಗಳ ನಿಲುಗಡೆಗಾಗಿ ವಿಶಾಲವಾದ ಸ್ಥಳ ಸೇರಿದಂತೆ ಇನ್ನಿತರೆ ಮೂಲಸೌಕರ್ಯ ಹೊಂದಿದೆ. ಜೊತೆಗೆ ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ ಒಳಗೊಂಡಿದೆ.
ಉದ್ಘಾಟ
ನೆ ಭಾಗ್ಯವಿಲ್ಲ: ಕರ್ನಾಟಕದವರೇ ಆದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಇಲ್ಲಿನ ನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಕಟ್ಟಡ ಉದ್ಘಾಟನೆ ಕೈಗೊಳ್ಳಬೇಕೆಂಬ ಚಿಂತನೆ ಹೊಂದಲಾಗಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಕಟ್ಟಡದ ಉದ್ಘಾಟನೆ ವಿಳಂಬವಾಗಿತ್ತು. ಈ ನಡುವೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಡಿಸೆಂಬರ್ 2015ರಲ್ಲಿ ಸೇವಾ ನಿವೃತ್ತಿ ಹೊಂದಿದರು.
ದಿಢೀರ್‌ನೆ ರದ್ದಾದ ಉದ್ಘಾಟನೆ ಕಾರ್ಯಕ್ರಮ: ಕಟ್ಟಡದ ಉದ್ಘಾಟನೆಯನ್ನು ನ. 25ರಂದು ನೆರವೇರಿಸಲು ರಾಜ್ಯ ಸರಕಾರ ಮುಂದಾಗಿತ್ತು. ಇದಕ್ಕೆ ಮುಖ್ಯಮಂತ್ರಿ, ಕಾನೂನು ಸಚಿವರು ಸೇರಿದಂತೆ ಇನ್ನಿತರರಿಗೂ ಆಹ್ವಾನಿಸಲಾಗಿತ್ತು. ಜಿಲ್ಲಾಡಳಿತ ಸಹ ಅದಕ್ಕಾಗಿ ಎಲ್ಲ ಸಿದ್ಧತೆ ಕೈಗೊಂಡಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕಾರ್ಯಕ್ರಮ ರದ್ದುಗೊಂಡಿತು. ಕಾರ್ಯಕ್ರಮ ರದ್ದಾಗಲು ಕಾರಣವೇನೆಂಬುದು ಸ್ಪಷ್ಟವಾಗಿಲ್ಲ.
* ಶಿವಶಂಕರ ಕಂಠಿ