Advertisement

ಕಾನೂನು ತಿಳಿದರೆ ಕಕ್ಷಿದಾರರಿಗೆ ನ್ಯಾಯ

05:33 PM Dec 04, 2021 | Team Udayavani |

ಹುಬ್ಬಳ್ಳಿ: ಪ್ರಕರಣಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಂಡರೆ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಸಾಧ್ಯವೆಂದು ಕಾರ್ಮಿಕ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಬಾಗಡೆ ಹೇಳಿದರು.

Advertisement

ವಕೀಲರ ದಿನಾಚರಣೆ ಅಂಗವಾಗಿ ಸಂಘದಿಂದ ವಕೀಲರ ಸಂಘದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು, ಕಕ್ಷಿದಾರರು ತಮಗೆ ಸಮಸ್ಯೆ ಆದಾಗ ನ್ಯಾಯ ಕೋರಿ ವಕೀಲರ ಬಳಿ ಹೋಗುತ್ತಾರೆ. ಕಕ್ಷಿದಾರರು ಮತ್ತು ನ್ಯಾಯಾಲಯದ ಮೊದಲ ಮುಖವೇ ಅವರಾಗಿದ್ದಾರೆ. ಹೀಗಾಗಿ ವಕೀಲರನ್ನು ಕೋರ್ಟ್‌ನ ಅಧಿಕಾರಿಗಳೆಂದು ಕರೆಯಲಾಗುತ್ತದೆ. ಕಾಗದಪತ್ರಗಳು, ಕಕ್ಷಿದಾರರು ಬಂದ ನಂತರವೆ ಅವರ ವೃತ್ತಿ ಆರಂಭವಾಗುತ್ತದೆ. ಪ್ರಕರಣ ಕುರಿತು ವಾಸ್ತವಿಕ ಸಂಗತಿ ಮತ್ತು ಕಾನೂನು ಅರಿತು ಓದಬೇಕು. ಸಂಬಂಧಿಸಿದ ಪ್ರಕರಣಗಳ ಕುರಿತು ನ್ಯಾಯಾಲಯಗಳಲ್ಲಿ ಆದ ಆದೇಶಗಳ ಬಗ್ಗೆ ತಿಳಿಯಬೇಕು.

ಪ್ರಕರಣಕ್ಕೆ ಸರಿಯಾದ ಅಡಿಪಾಯ ಹಾಕಿ ವಕಾಲತ್ತು ವಹಿಸಬೇಕು. ಅನ್ಯಾಯವಾದವರಿಗೆ ಅವರ ಪರ ವಕಾಲತ್ತು ವಹಿಸಿ ಹೋರಾಟ ಮಾಡಿ ನ್ಯಾಯ ಕೊಡಿಸುವವರೆ, ನ್ಯಾಯಕ್ಕಾಗಿ ವಾದ ಮಾಡುವವರೆ ನ್ಯಾಯವಾದಿಗಳಾಗಿದ್ದಾರೆ. ವಕೀಲರ ವೃತ್ತಿ ದಿನವನ್ನು ತಾತ್ವಿಕ, ಸಾಂದರ್ಭಿಕವಾಗಿ ಆಚರಿಸದೆ ಆಳವಾಗಿ ಅಭ್ಯಸಿಸಿ, ಹೊಸ ಹೊಸ ಕಾನೂನುಗಳ ಬಗ್ಗೆ ತಿಳಿದು ಕಕ್ಷಿದಾರರು ಬಂದು ಅವರು ಕೇಳಿದ ಪ್ರಶ್ನೆಗಳಿಗೆ ತಕ್ಷಣ ಉತ್ತರ ಕೊಡುವಷ್ಟು ತಯಾರಾದರೆ ಯಶಸ್ವಿ ವಕೀಲರಾಗಲು ಸಾಧ್ಯ ಎಂದರು.

ಮಹಾತ್ಮ ಗಾಂಧಿ, ಡಾ|ಬಿ.ಆರ್‌. ಅಂಬೇಡ್ಕರ್‌, ಡಾ| ರಾಜೇಂದ್ರ ಪ್ರಸಾದ, ಜವಾಹರಲಾಲ ನೆಹರು, ಅಲ್ಲಾಡಿ ಕೃಷ್ಣಮೂರ್ತಿ ಅಯ್ಯರ ಸೇರಿದಂತೆ ಅನೇಕ ಮಹನೀಯರು ವಕಾಲತ್ತು ವೃತ್ತಿ ಮಾಡಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಇಂದಿನ ವಕೀಲರು ತಮ್ಮ ಮಟ್ಟದಲ್ಲಾದರೂ ಅವರ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಮಾಜ ಸೇವೆ ಮಾಡಲು ಮುಂದಾಗಬೇಕು. ಕಕ್ಷಿದಾರರೇ ನಿಮ್ಮನ್ನು ಅರಸಿಕೊಂಡು ಬರುವ ರೀತಿ ಕಾರ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

Advertisement

ವಕೀಲರ ಸಂಘದ ಅಧ್ಯಕ್ಷ ಸಿ.ಆರ್‌. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರು ನ್ಯಾಯಾಲಯದಲ್ಲಿ ಸಮರ್ಪಕವಾಗಿ ಪ್ರಕರಣ ಮಂಡಿಸಿದರೆ ನೆಮ್ಮದಿ ಸಿಗುತ್ತದೆ. ಕಕ್ಷಿದಾರರು ಖುಷಿ ಪಡುತ್ತಾರೆ. ನಿಮ್ಮ ವೃತ್ತಿ ಬೆಳವಣಿಗೆ ಆಗುತ್ತದೆ. ಜತೆಗೆ ಯಶಸ್ಸು ಕಾಣಲು ಸಾಧ್ಯ. ಪ್ರಕರಣಕ್ಕೆ ಎಷ್ಟು ಅವಶ್ಯವೋ ಅಷ್ಟನ್ನು ಮಾತ್ರ ಕಾಲಮಿತಿಯೊಳಗೆ ವಾದ ಮಂಡಿಸುವುದರಿಂದ ನಿಮ್ಮ ಪ್ರಕರಣಕ್ಕೂ ಪ್ರಾಮುಖ್ಯತೆ ಬರುತ್ತದೆ. ನ್ಯಾಯಾಲಯದ ಸಮಯವೂ ಉಳಿತಾಯವಾಗುತ್ತದೆ. ಕಾರಣ ಬದಲಾವಣೆಯತ್ತ ಗಮನ ಹರಿಸಿ.ಶಿಸ್ತು ಮತ್ತು ಸಮವಸ್ತ್ರಕ್ಕೆ ಒತ್ತುಕೊಡಿ. ಇದರಿಂದ ನಿಮಗೂ ಮತ್ತು ನ್ಯಾಯಕ್ಕೆ ಮೌಲ್ಯ ಸಿಗುತ್ತದೆ ಎಂದರು.

ನ್ಯಾಯಾಧೀಶರಾದ ದೇವೆಂದ್ರಪ್ಪ ಬಿರಾದಾರ, ಜಿ.ಎ. ಮೂಲಿಮನಿ, ಸುಮಂಗಲಾ ಬಸವಣ್ಣೂರ, ಇಂದಿರಾ ಮೇಲಸ್ವಾಮಿ ಚೆಟ್ಟಿಯಾರ, ರವೀಂದ್ರ ಅರಿ, ಎಂ. ಮಂಜುನಾಥ ಹಾಗೂ ಹಿರಿಯ-ಕಿರಿಯ ನ್ಯಾಯಾಧೀಶರು, ಹಿರಿಯ-ಕಿರಿಯ ವಕೀಲರು, ಸಂಘದ ಪದಾಧಿಕಾರಿಗಳು ಮೊದಲಾದವರಿದ್ದರು. ವಕೀಲರಾದ ಶ್ರೀಮತಿ ಬಿ.ಎಸ್‌.ಬಾರಾಟಕೆ, ಭಾನು ಪ್ರಾರ್ಥಿಸಿದರು. ಸಂಘದ ಹಿರಿಯ ಸದಸ್ಯ ಕೆ.ಎಂ. ಲೋಕೇಶ ಸ್ವಾಗತಿಸಿ, ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧ್ಯಕ್ಷ ಎಸ್‌.ಜಿ. ಅರಗಂಜಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next