ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ದಿನೇಶ್ ಮಹೇಶ್ವರಿ ಅವರು ಸೋಮವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಪಾಲ ವಜೂಭಾಯ್ ವಾಲಾ ಅವರು ನೂತನ ಸಿಜೆಗೆ ಪ್ರತಿಜ್ಞಾವಿಧಿ ಬೋಧಿಸಿದರು. ನ್ಯಾ.ದಿನೇಶ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿದ್ದ ಸುಬ್ರೊ ಕಮಲ್ ಮುಖರ್ಜಿ 2017ರ ಅಕ್ಟೋಬರ್ 9ರಂದು ನಿವೃತ್ತರಾಗಿದ್ದರು. ಅಂದಿನಿಂದ ಈವರೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಾಗಿರಲಿಲ್ಲವಾಗಿತ್ತು. ಹಾಲಿ ಎಚ್ ಜಿ ರಮೇಶ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಮೇಘಾಲಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್ ನ ನೂತನ ಸಿಜೆಯನ್ನಾಗಿ ನೇಮಕ ಮಾಡಲಾಗಿದೆ.
ದಿನೇಶ್ ಮಹೇಶ್ವರಿ ಹುಟ್ಟಿದ್ದು 1958ರ ಮೇ 15ರಂದು. ಇವರ ತಂದೆ ರಮೇಶ್ಚಂದ್ರ ಮಹೇಶ್ವರಿ. ತಾಯಿ ರುಕ್ಮಿಣಿ ಮಹೇಶ್ವರಿ. ತಂದೆ ರಮೇಶ್ಚಂದ್ರ ಅವರು, ರಾಜಸ್ಥಾನ ಹೈಕೋರ್ಟ್‌ನ ಖ್ಯಾತ ವಕೀಲರಾಗಿದ್ದವರು.