ಬೆಂಗಳೂರು: ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾಗ ಅವರು ಕೊಟ್ಟ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನದಿಂದಾಗಿ ನನಗೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ವಕೀಲರ ಸಂಘದಿಂದ ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ನ್ಯಾ. ದಿನೇಶ್ ಮಹೇಶ್ವರಿ ಅವರ ಗೌರವ ಸಮರ್ಪಣೆ’ ಹಾಗೂ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿ ಆದ ನಂತರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ದಿನೇಶ್ ಮಹೇಶ್ವರಿ ಅವರನ್ನು ಭೇಟಿ ಮಾಡಿ ಅನೇಕ ಸಲಹೆಗಳನ್ನು ಪಡೆದುಕೊಂಡಿದ್ದೇನೆ.
ಅವರೂ ಸಹ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಉತ್ತಮವಾದ ಸಲಹೆಗಳನ್ನು ನೀಡಿದ್ದಾರೆ. ಇದರ ಪರಿಣಾಮವಾಗಿ ನನಗೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಯಿತು. ಅವರ ಕೆಲವು ತೀರ್ಪುಗಳು ಸರ್ಕಾರದ ಕಣ್ಣು ತೆರೆಸಿವೆ. ಆ ತೀರ್ಪುಗಳ ಮೂಲಕ ಆಡಳಿತ ಸರಿ ದಾರಿಗೆ ಬರಲು ಸಾಧ್ಯವಾಯಿತು ಎಂದು ಕುಮಾರಸ್ವಾಮಿ ಸ್ಮರಿಸಿಕೊಂಡರು.
ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಮಾತನಾಡಿ , ಹಸಿರು ನಗರವಾಗಿದ್ದ ಬೆಂಗಳೂರು ಫ್ಲೆಕ್ಸ್‌ಗಳಿಂದ ಹಾಳಾಗಿತ್ತು. ಅಲ್ಲದೆ ನಗರದ ರಸ್ತೆ ಗುಂಡಿಗಳು ಹಲವು ಮಂದಿ ನಾಗರಿಕರ ಜೀವ ಬಲಿಪಡೆದಿದ್ದವು. ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ದಿನೇಶ್ ಮಹೇಶ್ವರಿ ಅವರು ತಮ್ಮ ಖಡಕ್ ಆದೇಶ ಮೂಲಕ ನಗರದಲ್ಲಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ರಸ್ತೆ ಗುಂಡಿಗಳನ್ನು ನಿರ್ಮೂಲನೆ ಮಾಡಿದರು. ಹೀಗಾಗಿ ಇವರನ್ನು ಬೆಂಗಳೂರು ಜನರು ಸ್ಮರಿಸಿಕೊಳ್ಳುತ್ತಾರೆ ಎಂದರು.
ಬೆಂಗಳೂರು ಅಂದ್ರೆ ನನಗೆ ಇಷ್ಟ: ಗೌರವ ಸ್ವೀಕರಿಸಿ ಮಾತನಾಡಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಕರ್ನಾಟಕ, ಕನ್ನಡಿಗರು ವಿಶೇಷವಾಗಿ ಬೆಂಗಳೂರು ಅಂದ್ರೆ ನನಗೆ ತುಂಬಾ ಇಷ್ಟ. ಮೇಘಾಲಯ, ರಾಜಸ್ತಾನ ಹಾಗೂ ಕರ್ನಾಟಕದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದೇನೆ ಆದರೆ ಬೆಂಗಳೂರಿನಷ್ಟು ನನಗೆ ಇಷ್ಟವಾದ ನಗರ ಮತ್ತೂಂದಿಲ್ಲ.
ಇಲ್ಲಿನ ವಾತಾವರಣ, ಕನ್ನಡಿಗರ ಪ್ರೀತಿ ಇಷ್ಟವಾಗಿ ಸಂತೋಷವಾಗಿ ಇದ್ದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಸಿಕ್ಕ ನಂತರ ದೆಹಲಿ ಹೋಗಲು ಕಷ್ಟವಾಯಿತು. ಆದರೂ ಅನಿವಾರ್ಯವಾಗಿ ಹೋಗಬೇಕಾಯಿತು. ಗೌರವ ಸ್ವೀಕಾರದ ನೆಪದಲ್ಲಿ ಮತ್ತೆ ದೆಹಲಿಯಿಂದ ಬೆಂಗಳೂರಿಗೆ ಓಡೋಡಿ ಬಂದೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಹಾಗೂ ಇತರರು ಇದ್ದರು.