Advertisement
ಇತ್ತೀಚಿನ ಅಂಕಿಅಂಶಗಳನ್ನು ಗಮನಿಸಿದರೆ, ಭಾರತದ ನ್ಯಾಯಾಲಯಗಳ ವಿಳಂಬ ನ್ಯಾಯದ ಬಗ್ಗೆ ಅಡಿಟಿಪ್ಪಣಿಯನ್ನು ಬರೆಯುತ್ತಿರುವುದು ತಿಳಿಯುತ್ತದೆ. ಇಡೀ ದೇಶದ ಕೆಳ ನ್ಯಾಯಾಲಯಗಳಲ್ಲಿ 2.77 ಕೋಟಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಹೈಕೋರ್ಟ್‌ಗಳಲ್ಲಿ 32.4 ಲಕ್ಷ ವಿಚಾರಣೆಯಲ್ಲಿಯೇ ಇವೆ. ದೇಶದ ಉನ್ನತ ನ್ಯಾಯ ವ್ಯವಸ್ಥೆ ಸುಪ್ರೀಂಕೋರ್ಟ್ ಕೂಡ 55 ಸಾವಿರ ಪ್ರಕರಣಗಳ ಕುರಿತು ತೀರ್ಪು ಕೊಡಬೇಕಾಗಿದೆ. ಈ ನಾಲ್ಕಾರು ಮಾಹಿತಿಗಳೇ ಪುಟಗಟ್ಟಲೆ ಬರೆಯುವುದನ್ನು ಅರ್ಥ ಮಾಡಿಸುತ್ತವೆ!
ಅರೆ ನ್ಯಾಯಾಂಗ ವ್ಯವಸ್ಥೆಯಾದ ಟ್ರಿಬ್ಯುನಲ್‌ಗಳಿಗೆ ದೇಶದ ಶಾಸಕಾಂಗ ಹೈಕೋರ್ಟ್‌ಗೆ ಸಮನಾದ ಅಧಿಕಾರವನ್ನು ಸಂಧಾನದ 136ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಅಧಿಕಾರ ಕೊಟ್ಟಿದೆ. ಸಂವಿಧಾನದ 323 ಎ ಹಾಗೂ ಬಿ ಪರಿಚ್ಛೇದದ ಅನ್ವಯ, ಹೈಕೋರ್ಟ್‌ನ ಸಮಾನ ಅಧಿಕಾರವನ್ನು ಕೂಡ ಕೊಡಲಾಗಿದೆ. ಇದನ್ನು ಮುಂದೆ ಸುಪ್ರೀಂಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿತು. ಅಂತಿಮವಾಗಿ ಟ್ರಿಬ್ಯುನಲ್ ತೀರ್ಪನ್ನು ಮತ್ತೂಂದು ಮೇಲ್ಮನೆ ಟ್ರಿಬ್ಯುನಲ್‌ನಲ್ಲಿ ಪ್ರಶ್ನಿಸಬಹುದು ಹಾಗೂ ನಂತರದಲ್ಲಿ ಸುಪ್ರೀಂಕೋರ್ಟ್‌ನ ಮೊರೆ ಹೋಗಬಹುದು ಎಂಬ ಕಾನೂನು ತಿದ್ದುಪಡಿಗಳ ಮೂಲಕ ಅದರ ಶಕ್ತಿಯನ್ನು ಉಳಿಸಲಾಯಿತು.
Related Articles
Advertisement
ಲೋಕ ಅದಾಲತ್‌ಗಳು ಬಂದವು… ಲೋಕ ಅದಾಲತ್‌ಗಳು ಅರೆ ನ್ಯಾಯಾಂಗ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆ. 1987ರ ಲೀಗಲ್ ಸರ್ವೀಸಸ್ ಅಥಾರಿಟೀಸ್ ಆ್ಯಕ್ಟ್ ಆಗಮನವು ಭಾರತದ ಸಂಧಾನದ 39-ಎ ಕಲಂನಲ್ಲಿ ಸಂಧಾನಾತ್ಮಕ ಆದೇಶದ ಅನುಸಾರ ಲೋಕ ಅದಾಲತ್‌ಗಳಿಗೆ ಶಾಸನಬದ್ಧ ಸ್ಥಾನಮಾನ ನೀಡಿತು. ಇದು ಲೋಕ ಅದಾಲತ್ ಮೂಲಕ ವಾದಗಳ ಪರಿಹಾರಕ್ಕಾಗಿ ಹಲವಾರು ನಿಬಂಧನೆಗಳನ್ನು ಒಳಗೊಂಡಿದೆ. ನ್ಯಾಯವನ್ನು ಪಡೆದುಕೊಳ್ಳುವ ಅವಕಾಶಗಳು ಆರ್ಥಿಕ ಅಥವಾ ಇತರ ಕಲಾಂಗಗಳ ಕಾರಣದಿಂದಾಗಿ ಯಾವುದೇ ನಾಗರಿಕರಿಗೆ ನಿರಾಕರಿಸಲ್ಪಡುವುದಿಲ್ಲವೆಂದು ಖಚಿತಪಡಿಸಿಕೊಳ್ಳಲು ಅದಾಲತ್‌ಗಳ ಅನಾವರಣವಾಯಿತು. ಸಮಾಜದ ದುರ್ಬಲ ವರ್ಗಗಳಿಗೆ ಮುಕ್ತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವ ಗುರಿಯಿಂದ ರೂಪಿತವಾದ ಅದಾಲತ್‌ಗೆ 1908ರ ಸಿಪಿಸಿ ಅನ್ವಯ ಕಾನೂನಿನ ಸಂಪೂರ್ಣ ಬೆಂಬಲವಿದೆ. ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಎನ್‌ಜಿಟಿ ಕೂಡ ಒಂದು ಅತ್ಯುತ್ತಮ ಅರೆ ನ್ಯಾಯಾಂಗ ವ್ಯವಸ್ಥೆ. 2010ರ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಕಾಯ್ದೆಯ ಅನುಸಾರ ರಚನೆಯಾದ ಕಾನೂನು ಪರಿಸರಕ್ಕೆ ಸಂಬಂಧಿಸಿದ, ಪ್ರಾಕೃತಿಕ ಸಂಪನ್ಮೂಲಕ್ಕೆ ಧಕ್ಕೆ ತರುವ ವಿಚಾರಗಳಲ್ಲಿ ಶೀಘ್ರ ತೀರ್ಪು ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ವ್ಯವಸ್ಥೆ ದಿನಗಳೆದಂತೆ ಜನರಿಗೆ ಹೆಚ್ಚು ಅನಿವಾರ್ಯವಾಗಬಹುದು. ಅಧಿಕಾರವನ್ನು ಕೊಡುವುದು ಎಂಬ ಮಾತು ಕ್ಲೀಷೆ. ಯಾವುದೇ ಹೊಸ ಕಾನೂನನ್ನು ರೂಪಿಸದೆ ಅಧಿಕಾರ ಕೊಟ್ಟರೂ ಟಿ.ಎನ್.ಶೇಷನ್ ಎಂಬ ಮುಖ್ಯ ಚುನಾವಣಾಧಿಕಾರಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದನ್ನು ನಮ್ಮ ಇತಿಹಾಸದ ಪುಟಗಳಲ್ಲಿ ನೋಡುತ್ತೇವೆ. ಗ್ರಾಹಕರಿಗೆ ಯಾರು ದಿಕ್ಕು?
ಬ್ಯಾಂಕಿಂಗ್ ಒಂಬುಡ್ಸ್‌ಮನ್, ತೆರಿಗೆ ಒಂಬುಡ್ಸ್‌ಮನ್, ವಿಮಾ ಲೋಕಪಾಲಗಳು ಇನ್ನಷ್ಟು ಗಮನಾರ್ಹವಾಗಿ ಕೆಲಸ ಮಾಡಬೇಕಿತ್ತು. ಈ ವ್ಯವಸ್ಥೆಗಳಡಿಯಲ್ಲಿ ದೂರುವ ಗ್ರಾಹಕ ಈ ಅರೆ ನ್ಯಾಯ ವ್ಯವಸ್ಥೆಯ ತೀರ್ಪಿನಿಂದ ಅಸಮಾಧಾನಗೊಂಡರೆ ಬೇರೆ ಕಾನೂನು ವ್ಯವಸ್ಥೆಯಡಿ ದೂರಬಹುದು. ಆದರೆ , ಸೇವೆ ನೀಡುವ ಸಂಸ್ಥೆಗಳು ತೀರ್ಪನ್ನು ಪಾಲಿಸುವುದು ಕಡ್ಡಾಯ. ಕಾನೂನಿನ ಅಂಶಗಳನ್ನೇ ಪ್ರಧಾನವಾಗಿ ಪರಿಗಣಿಸದೆ ಮಾನವೀಯ, ತಾರ್ಕಿಕ ನೆಲಗಟ್ಟಿನಲ್ಲಿ ತೀರ್ಪು ನೀಡಲು ಇದರಲ್ಲಿ ಅವಕಾಶ ಕಲ್ಪಿ$³ಸಲಾಗಿದೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಈ ಲೋಕಪಾಲ ವ್ಯವಸ್ಥೆಗಳ ನ್ಯಾಯ ಸಮಿತಿಯಲ್ಲಿರುವವರು ಇದೇ ವ್ಯವಸ್ಥೆಯಿಂದಲೇ ಬಂದವರಾಗಿರುವುದರಿಂದ ಅವರು ಸೇವಾದಾತರ ಪರವಾಗಿಯೇ ಅನುಕಂಪ ತೋರಿಸುತ್ತಾರೆ. ಗ್ರಾಹಕ ನ್ಯಾಯಾಲಯಗಳು ಕೂಡ ಅರೆ ನ್ಯಾಯಾಂಗ ವ್ಯವಸ್ಥೆಯೇ. 1986ರ ಗ್ರಾಹಕ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಚಾಲ್ತಿಗೆ ಬಂದ ಜಿಲ್ಲೆ, ರಾಜ್ಯ ಹಾಗೂ ಕೇಂದ್ರ ಗ್ರಾಹಕ ನ್ಯಾಯಾಲಯಗಳು ಕೂಡ ನ್ಯಾಯ ವ್ಯವಸ್ಥೆಯಲ್ಲಿ ಅತ್ಯಂತ ಹೆಚ್ಚಿನ ಪರಿಣಾಮ ಬೀರಬಹುದಿತ್ತು. ಇಲ್ಲಿ ಕೂಡ ನಿವೃತ್ತ ನ್ಯಾಯಾಧೀಶರನ್ನು ಮುಖ್ಯಸ್ಥರನ್ನಾಗಿ ನೇಮಿಸುವುದೇ ಸಾಮಾನ್ಯವಾಗಿರುವಾಗ, ಅವರು ಸಿವಿಲ್ ನ್ಯಾಯಾಲಯದ ಪ್ರಕ್ರಿಯೆ ಜಾಯಮಾನವನ್ನೇ ಅನುಸರಿಸುತ್ತಾರೆ. ಇದು ಮತ್ತೂಂದು ವಿಳಂಬ ಪ್ರಹಸನಕ್ಕೆ ಕಾರಣವಾಗುತ್ತಿದೆ. ಮತ್ತದೇ ವಾದ ಪ್ರತಿವಾದಗಳು ತೀರ್ಪು ಕೊಡಲು ಆಧಾರವಾಗಬಹುದೇ ವಿನಃ ನ್ಯಾಯ ಕೊಡಲು ಅಲ್ಲ. ಸಾಂಪ್ರದಾಯಿಕ ನ್ಯಾಯಾಲಯಗಳಲ್ಲಿನ ವಿಳಂಬವನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಷಿಪ್ರ ನ್ಯಾಯಕ್ಕಾಗಿ ರೂಪಿಸಿದ ಈ ಕ್ವಾಸಿ ಜ್ಯುಡಿಷರಿ ಕೂಡ ಅದೇ ದಾರಿ ಹಿಡಿದರೆ ದೇವರೇ ಕಾಪಾಡಬೇಕಾಗುತ್ತದೆ. ಗ್ರಾಹಕ ನ್ಯಾಯಾಲಯಗಳಲ್ಲಿನ ದೂರುಗಳ ಅಂಕಿಅಂಶವನ್ನು ತೆಗೆದರೆ, ಮಾರ್ಚ್ 2018ರಲ್ಲಿ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿರುವ ಒಟ್ಟು 9543 ಪ್ರಕರಣಗಳಲ್ಲಿ 1046ಕ್ಕೆ ಎರಡು ವರ್ಷ ದಾಟಿದ ವಯಸ್ಸು! ಆರು ತಿಂಗಳ ಒಳಗೆ ತೀರ್ಪು ಪ್ರಕಟಿಸಬೇಕಿದ್ದರೂ 1,125 ಪ್ರಕರಣಗಳು ಒಂದು ವರ್ಷ ದಾಟಿವೆ. ಜಿಲ್ಲಾ ನ್ಯಾಯಾಲಯಗಳಲ್ಲಿರುವ 8,759 ಪ್ರಕರಣಗಳಲ್ಲಿ 1356 ಎರಡು ವರ್ಷಗಳಿಂದ ಹಾಗೂ 1,519 ಒಂದು ವರ್ಷದಿಂದ ಧೂಳು ತಿನ್ನುತ್ತಿವೆ. ಸರ್ಕಾರವೇ ವ್ಯವಸ್ಥೆಯ ಅಬುìದ!
ಸರ್ಕಾರ ಬಹುತೇಕ ಅರೆ ನ್ಯಾಯಾಂಗ ವ್ಯವಸ್ಥೆಗಳಲ್ಲಿ ಅಗತ್ಯ ನ್ಯಾಯಾಧೀಶರು ಹಾಗೂ ಸಹ ಸದಸ್ಯರನ್ನು ನೇಮಿಸುವಲ್ಲಿ ಮಾಡುವ ವ್ಯತ್ಯಯ ಇಡೀ ವ್ಯವಸ್ಥೆಯನ್ನು ದುರ್ಬಲಗೊಳಿಸಿದೆ. ನೇಮಕದ ಅಸ್ತ್ರ ಸರ್ಕಾರದ ಕೈಯಲ್ಲಿ ಇರುವುದು ನೇಮಕಾತಿಯಲ್ಲಿ ವಶೀಲಿಬಾಜಿಗೆ ಅವಕಾಶ ಕೊಟ್ಟಿದೆ. ಸಮಿತಿಯ ಸಹಸದಸ್ಯರು ರಾಜಕೀಯ ಆಯ್ಕೆಗಳಾದಾಗ ಅವರಿಂದ ಪರಿಣಾಮಕಾರಿ ಕಾರ್ಯ ಚಟುವಟಿಕೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಇಂದು ಪ್ರಬಲ ನೈತಿಕ ಶಕ್ತಿಯನ್ನು ಹೊಂದಿರಬೇಕಾದ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಭ್ರಷ್ಟಾಚಾರದ ವಾಸನೆ ಗಪ್ಪನೆ ಮೂಗಿಗೆ ಬಡಿಯುತ್ತಿರುವಾಗ ಅರೆ ನ್ಯಾಯಾಂಗ ವ್ಯವಸ್ಥೆಯ ರಾಜಕೀಯ ನೇಮಕಗಳು ಹಾಗೂ ನೇಮಕವಾದ ವ್ಯಕ್ತಿಗಳ ನಡವಳಿಕೆ ಪ್ರಶ್ನಾರ್ಹವೇ ಆಗಿಬಿಡುತ್ತದೆ. ಇದು ಈ ವ್ಯವಸ್ಥೆಯನ್ನು ಸಂಪೂರ್ಣ ದುರ್ಬಲಗೊಳಿಸಿದೆ. ಸದ್ಯಕ್ಕಂತೂ ಈ ವಾತಾವರಣ ಬದಲಾಗುವ ಸಂಭವನೀಯತೆ ಕ್ಷೀಣ! – ಮಾ.ವೆಂ.ಸ.ಪ್ರಸಾದ್,
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ