ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಒಮ್ಮತಕ್ಕೆ ಬರಲು ವಿಫಲವಾಗಿದೆ.
Advertisement
ಈ ಕುರಿತು ಕಾನೂನು ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದೆ. ಇದರೊಂದಿಗೆ ಸದಾಶಿವ ಆಯೋಗದ ಒಳ ಮೀಸಲಾತಿ ವರದಿ ಜಾರಿಗೊಳ್ಳುವುದು ಮತ್ತಷ್ಟು ವಿಳಂಬವಾಗುವ ಲಕ್ಷಣ ಗೋಚರಿಸಿದೆ. ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
Related Articles
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಯಾವುದೇ ವರದಿ ಜಾರಿಗೊಳಿಸುವ ಮುನ್ನ ವರದಿಯಲ್ಲಿರುವ ಅಂಶಗಳು ಸಾಂವಿಧಾನಿಕವಾಗಿ ಎಷ್ಟು ಮಹತ್ವದ್ದು ಎಂದು ಅರಿಯಬೇಕಾಗುತ್ತದೆ. ಈ ಕಾರಣಕ್ಕೆ ಕಾನೂನು ಸಲಹೆ ಪಡೆದುಕೊಳ್ಳಲಾಗುತ್ತದೆ. ಹೀಗಾಗಿ ಅಡ್ವೊಕೇಟ್ ಜನರಲ್ ಮತ್ತು ಕಾನೂನು ಇಲಾಖೆ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
Advertisement
ಕಾನೂನು ಅಭಿಪ್ರಾಯ ವಾರದಲ್ಲಾದರೂ ಬರಬಹುದು, ಹದಿನೈದು ದಿನದಲ್ಲಾದರೂ ಬರಬಹುದು. ವರದಿ ಬಂದ ತಕ್ಷಣ ಮತ್ತೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಸದಾಶಿವ ಆಯೋಗ ವರದಿ ಜಾರಿ ಸಂಬಂಧ ಪರ-ವಿರೋಧ ಅಭಿಪ್ರಾಯ, ಹೋರಾಟ ಬಹಳ ದಿನಗಳಿಂದಲೂ ಇದೆ. ಹೀಗಾಗಿ ಮುಖ್ಯಮಂತ್ರಿಯವರು ಎರಡೂ ಕಡೆಯವರನ್ನು ಕರೆದು ಅಭಿಪ್ರಾಯ ಮಂಡಿಸಲು ಅವಕಾಶ ಮಾಡಿಕೊಟ್ಟಿದ್ದರು. ಸಭೆಯಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆದಿದ್ದು, ಎಲ್ಲರೂ ತಮ್ಮ ಅಭಿಪ್ರಾಯ ನೀಡಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಸದಾಶಿವ ಆಯೋಗ ವರದಿ ಸಂಪುಟ ಸಭೆಯ ಮುಂದೆ ಚರ್ಚೆಗೆ ಬಂದಾಗ, ವರದಿ ಒಪ್ಪುವ ಮುನ್ನ ಸಮುದಾಯದ ಮುಖಂಡರು ಮತ್ತು ಕಾನೂನು ಸಲಹೆ ಪಡೆಯಬೇಕು ಎಂದು ತೀರ್ಮಾನವಾಗಿತ್ತು. ಅಲ್ಲದೆ, ವರದಿಯಲ್ಲಿ ಭೋವಿ ಮತ್ತು ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡುವ ಅಂಶಗಳಿವೆ ಎಂಬಿತ್ಯಾದಿ ಹಲವು ಆತಂಕಗಳು ಇದ್ದವು. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಯಾವುದೇ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ಶಿಫಾರಸು ವರದಿಯಲ್ಲಿಲ್ಲ. ಇದ್ದರೂ ಆ ರೀತಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದರು ಎಂದು ತಿಳಿಸಿದರು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ಪ್ರಿಯಾಂಕ್ ಖರ್ಗೆ, ಆರ್.ಬಿ.ತಿಮ್ಮಾಪುರ್, ರುದ್ರಪ್ಪ ಲಮಾಣಿ, ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಶಾಸಕರಾದ ಅರವಿಂದ್ ಜಾಧವ್, ಆರ್.ಧರ್ಮಸೇನಾ, ಪಿ.ಎಂ.ನರೇಂದ್ರಸ್ವಾಮಿ, ಶಿವರಾಜ ತಂಗಡಗಿ ಮತ್ತಿತರರು ಇದ್ದರು.
ಭೋವಿ, ಲಂಬಾಣಿ ಕೈಬಿಡುವುದಿಲ್ಲನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾದರೆ ಭೋವಿ ಮತ್ತು ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕಾಗುತ್ತದೆ ಎಂಬ ಆತಂಕವನ್ನು ದೂರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಹ ಯಾವುದೇ ಅಂಶ ವರದಿಯಲ್ಲಿ ಇಲ್ಲ ಎಂದಿದ್ದಾರೆ. ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ನಡೆದ ಸಭೆಯಲ್ಲಿ ಶಾಸಕ ಶಿವರಾಜ್ ತಂಗಡಗಿ, ವರದಿಯಲ್ಲಿ ಭೋವಿ ಮತ್ತು ಲಂಬಾಣಿ ಸಮುದಾಯದ ಬಗ್ಗೆ ಏನು ಹೇಳಲಾಗಿದೆ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವರದಿಯಲ್ಲಿ ಅನೇಕ ಉಪಜಾತಿಗಳ ವಿಚಾರ ಪ್ರಸ್ತಾಪವಾಗಿದೆ. ಆದರೆ, ಎಲ್ಲೂ ಲಂಬಾಣಿ ಮತ್ತು ಭೋವಿ ಸಮುದಾಯವನ್ನು ಪಟ್ಟಿಯಿಂದ ಕೈಬಿಡುವಂತೆ ಶಿಫಾರಸು ಮಾಡಿಲ್ಲ. ಒಂದು ವೇಳೆ ಶಿಫಾರಸು ಮಾಡಿದರೂ ಹಾಗೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.