ಮಂಗಳೂರು: ನಗರದಲ್ಲಿ ಪೊಲೀಸರ ಗೋಲಿಬಾರ್ ಬಗ್ಗೆ ಸರಕಾರ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದು, ನ್ಯಾಯಾಂಗ ತನಿಖೆಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದಿದ್ದಾರೆ.
ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗೆ ಸೋಮವಾರ ತೆರಳಿ ಸಾಂತ್ವನ ಹೇಳುವ ಜತೆಗೆ ಪಕ್ಷ ಮತ್ತು ತಮ್ಮ ವತಿಯಿಂದ ಪರಿಹಾರದ ಚೆಕ್ ವಿತರಿಸಿದ ಬಳಿಕ ನಗರದ ಸಕೀಟ್ ಹೌಸ್‌ನಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು. ಸಿಐಡಿ ತನಿಖೆಯಿಂದ ಸತ್ಯ ಹೊರಬರಲು ಅಸಾಧ್ಯ. ಇದು ಕಣ್ಣೊರೆಸುವ ತಂತ್ರ. ಯಾರು ತಪ್ಪು ಮಾಡಿದ್ದಾರೆಯೋ, ವಿನಾಕಾರಣ ಗೋಲಿಬಾರ್ ಮಾಡಿದ್ದಾರೆಯೋ ಅಂಥವರನ್ನು ರಕ್ಷಿಸುವ ತಂತ್ರ ಇದು ಎಂದು ಆರೋಪಿಸಿದರು.
ಮೃತಪಟ್ಟವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದೇನೆ. ನಮಗೆ ಪರಿಹಾರ ಮುಖ್ಯವಲ್ಲ; ನ್ಯಾಯ ಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ಅವರಿಗೆ ನ್ಯಾಯ ದೊರಕಿಸುವ ಕಾರ್ಯ ಸರಕಾರ ಮಾಡಬೇಕು. ಸರಕಾರ ಇದರಲ್ಲಿ ವಿಫಲವಾದರೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು.
ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರೂ ಪ್ರತಿಭಟನೆಗಳಾಗಿವೆ. ಆದರೆ ಮಂಗಳೂರಿನಲ್ಲಿ ನಡೆದಿರುವಂತಹ ಘಟನೆ ಎಲ್ಲೂ ನಡೆದಿಲ್ಲ. ಇದು ಸರಕಾರ ಮತ್ತು ಪೊಲೀಸರೇ ಸೃಷ್ಟಿಸಿದ ಹಿಂಸಾಚಾರವಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ ನೇರ ಹೊಣೆಗಾರರು ಎಂದವರು ಆರೋಪಿಸಿದರು.
ತಲಾ 7.5 ಲಕ್ಷ ರೂ. ಪರಿಹಾರ: ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ ಸಿದ್ದರಾಮಯ್ಯ, ವೈಯಕ್ತಿಕವಾಗಿ ಎರಡೂ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಚೆಕ್‌ಗಳನ್ನು ನೀಡಿದರು. ಜತೆಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ತಲಾ 2.5 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದರು. ಬಳಿಕ ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳನ್ನು ಭೇಟಿಯಾದರು.