ಮಣಿಪಾಲ: ವಿಶ್ವದ ಗಮನ ಸೆಳೆದಿರುವ ಐತಿಹಾಸಿಕ ಅಯೋಧ್ಯೆ ತೀರ್ಪು ಹೊರಬಿದ್ದಿದೆ. ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ. ಅಬ್ದುಲ್ ನಜೀರ್ ಕರ್ನಾಟಕದವರು ಎಂದು ಹಲವರಿಗೆ ತಿಳಿಯದ ವಿಷಯ.
ಹೌದು. ನ್ಯಾಯಮೂರ್ತಿ ಅಬ್ದುಲ್ ನಜೀರ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಸಮೀಪದ ಬೆಳುವಾಯಿ ಗ್ರಾಮದವರು.
1958ರ ಜನವರಿ ಐದರಂದು ಜನಿಸಿದ ಎಸ್ ಎ ನಜೀರ್ ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು. ನಂತರ ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ಧಾರೆ.
1983ರಲ್ಲಿ ಅಬ್ದುಲ್ ನಜೀರ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಅಭ್ಯಾಸ ಆರಂಭಿಸಿದರು. 2003ರವರೆಗೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 2003ರಲ್ಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿ ಆಯ್ಕೆಯಾದ ಇವರು 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದರು.
ದೇಶದ ಪ್ರಮುಖ ತ್ರಿವಳಿ ತಲಾಖ್ ಪ್ರಕರಣದ ಪಂಚ ಸದಸ್ಯ ಪೀಠದ ಏಕಮಾತ್ರ ಮುಸ್ಲಿಂ ನ್ಯಾಯಾಧೀಶರಾಗಿದ್ದರು.
ಸದ್ಯ ಐತಿಹಾಸಿಕ ಅಯೋಧ್ಯೆ ಪ್ರಕರಣದ ಪಂಚ ಸದಸ್ಯ ಪೀಠದ ಏಕಮಾತ್ರ ಮುಸ್ಲಿಂ ಸದಸ್ಯರಾಗಿದ್ದಾರೆ