Advertisement
ಸಂಭಾಷಣೆಯನ್ನೇ ನಂಬಿಕೊಂಡು, ಎದುರಿಗಿರುವ ಕಲಾವಿದರ ಮಾತಿಗೂ ಅವಕಾಶ ಕೊಡದಷ್ಟರ ಮಟ್ಟಿಗೆ ಪಟಪಟನೇ ಮಾತನಾಡುವ ನಾಯಕನ ಪಾತ್ರಗಳು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಬಂದು ಹೋಗಿವೆ. ಈ ಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ. ಇಲ್ಲಿನ ನಾಯಕ ಅದೆಷ್ಟು ಮಾತನಾಡುತ್ತಾನೆ ಎಂದರೆ ಸಿನಿಮಾ ಮುಗಿಸಿ ಹೊರಬಂದ ಮೇಲೂ ಮಾತು ಗುಂಯ್‌ಗಾಡುತ್ತಿರುತ್ತದೆ.
Related Articles
Advertisement
ಮೇಲ್ನೋಟಕ್ಕೆ ಒರಟನಂತೆ ಕಾಣುವ ನಾಯಕ, ಯಾವ ರೀತಿ ಸ್ನೇಹಿತರ ಸಮಸ್ಯೆಗಳಿಗೆ ಸ್ಪಂಧಿಸುತ್ತಾನೆ ಎಂಬುದನ್ನು ವಿವಿಧ ಆಯಾಮಗಳಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ. ಸಿನಿಮಾದಲ್ಲಿ ಅನಾವಶ್ಯಕ ಅಂಶ ಎಂದು ಯಾವುದೂ ಪ್ರತ್ಯೇಕವಾಗಿ ಕಾಣುವುದಿಲ್ಲ. ನಾಯಕನಿಗೆ ಸುಖಾಸುಮ್ಮನೆ ಬಿಲ್ಡಪ್ ಫೈಟ್‌ಗಳಾಗಲಿ, ಎಲ್ಲೆಂದರಲ್ಲಿ ಹಾಡಾಗಲಿ ಅಥವಾ ಕಾಮಿಡಿಯಾಗಲೀ ಇಲ್ಲ. ಅವೆಲ್ಲವನ್ನು ನಾಯಕನ ಸಂಭಾಷಣೆಯಲ್ಲೇ ಮುಗಿಸಿದ್ದಾರೆ. ಆದರೆ, ಕಥೆಗಿಂತ ಮಾತೇ ಜಾಸ್ತಿಯಾಯಿತೇನೋ ಎಂಬ ಭಾವನೆ ಕಾಡದೇ ಇರದು.
ಒಂದು ಕೂಲ್ ಲವ್‌ಸ್ಟೋರಿಯನ್ನು ಸಣ್ಣ ಸಂದೇಶದೊಂದಿಗೆ ನಿರ್ದೇಶಕರು ಕಟ್ಟಿಕೊಡಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ನಾಯಕ ಸನತ್ ಮೊದಲ ಚಿತ್ರದಲ್ಲಿ ತಕ್ಕಮಟ್ಟಿಗೆ ಗಮನ ಸೆಳೆದಿದ್ದಾರೆ. ನಟನೆಗಿಂತ ಮಾತು ಸ್ವಲ್ಪ ಹೆಚ್ಚಾಯಿತು ಎನಿಸಿದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಶನಾಯ ಕಾಟ್ಪೆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ಅವಿನಾಶ್, ಮಾಳವಿಕ, ಭಾವನಾ ಪ್ರೀತಂ ಸೇರಿದಂತೆ ಚಿತ್ರದಲ್ಲಿ ನಟಿಸಿದ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
ಚಿತ್ರ: ಇದಂ ಪ್ರೇಮಂ ಜೀವನಂನಿರ್ಮಾಣ: ಗೋಕುಲ್, ನವೀನ್ ಕುಮಾರ್
ನಿರ್ದೇಶನ: ರಾಘವಾಂಕ ಪ್ರಭು
ತಾರಾಗಣ: ಸನತ್, ಶನಾಯ ಕಾಟ್ಪೆ, ಅವಿನಾಶ್, ಮಾಳವಿಕ, ಭಾವನಾ ಪ್ರೀತಂ, ದೀಪು, ರಾಮು, ಭರತ್, ನಾಗಾರ್ಜುನ್ ಮುಂತಾದವರು * ರವಿಪ್ರಕಾಶ್ ರೈ