ಮುದಗಲ್ಲ: ರೋಗ ಹಾಗೂ ದರ ಕುಸಿತದಿಂದ ಬೇಸತ್ತ ಈ ಭಾಗದ ಬಹುತೇಕ ರೈತರು ಪರ್ಯಾಯ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆಮದಿಹಾಳ, ನಾಗಲಾಪೂರ, ಛತ್ತರ, ಪಿಕಳಿಹಾಳ, ವ್ಯಾಕರನಾಳ, ಕನ್ನಾಳ, ಹಡಗಲಿ, ಕುಮಾರಖೇಡ, ಉಳಿಮೇಶ್ವರ, ಹಡಗಲಿ ತಾಂಡಾ, ಮರಳಿ, ಹುನೂರ ಸೇರಿದಂತೆ ಮುದಗಲ್ಲ ಭಾಗದ ಗ್ರಾಮೀಣ ಪ್ರದೇಶದಲ್ಲಿ ಪ್ರಮುಖವಾಗಿ ಈರುಳ್ಳಿ ಸಸಿ ಹೆಚ್ಚಾಗಿ ನಾಟಿ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾದರೂ ಈರುಳ್ಳಿಗೆ ಅಂಟಿಕೊಂಡಿರುವ ಬೂದಿ ರೋಗ, ಚುಕ್ಕಿರೋಗಕ್ಕೆ ಬೇಸತ್ತ ರೈತರು ಬಹಳಷ್ಟು ಜನರು ಪರ್ಯಾಯ ಬೆಳೆಗೆ
ಅವಲಂಬಿತರಾಗುತ್ತಿದ್ದಾರೆ.
ರೋಗ ಹತೋಟಿ ಮಾಡಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ನಷ್ಟ ಅನುಭವಿಸಿದ ರೈತರು ಈ ವರ್ಷ ಅದರ ತಂಟೆಯೇ ಬೇಡವೆಂದು ಹೆಚ್ಚಿನ ರೈತರು ಸೂರ್ಯಕಾಂತಿ ಮತ್ತು ತೊಗರಿ ಬೆಳೆಯಲು ಮುಂದಾಗಿದ್ದಾರೆ. ವರುಣನ ಕೃಪೆಯಿಂದ ಜುಲೈ ತಿಂಗಳು ಆರಂಭದಲ್ಲಿ ಉತ್ತಮ ಮಳೆಯಾಗಿ ಜಲ ಮೂಲಗಳಾದ ಕೆರೆ, ತೆರೆದ ಬಾವಿ, ಕೊಳವೆಬಾವಿಗಳು ತುಂಬಿ ಹರಿದರೂ ಈ ಬಾರಿ ಇಲ್ಲಿನ ನೂರಾರು ರೈತರು ಈರುಳ್ಳಿ ನಾಟಿಯ ಬಗ್ಗೆ ಚಕಾರವೆತ್ತಿಲ್ಲ. ಕೆಲವೇ ಬೆರಳೆಣಿಕೆಯಷ್ಟು ರೈತರು ಈರುಳ್ಳಿ ಬೆಳೆಯಲು ಮುಂದಾಗಿರುವುದು ಕಂಡು ಬಂದಿದೆ. ಆದರೆ ಮುಸುಕಿನ ವಾತಾವರಣ ಈರುಳ್ಳಿ ಬೆಳೆಯುವ ರೈತರಿಗೆ ಕಂಟಕವಾಗಿ ಪರಿಣಮಿಸಿದೆ.
ಭೂಮಿಗೆ ಬೀಜ ಹಾಕಿದಾಗಿನಿಂದ 45ದಿನ ಈರುಳ್ಳಿ ಸಸಿ ಮಡಿ ಬೆಳೆಸಬೇಕು. ನಂತರದಲ್ಲಿ ಭೂಮಿ ಹದಗೊಳಿಸಿ ಹೊಲದಲ್ಲಿ ನಾಟಿ ಮಾಡಿ ನಾಲ್ಕು ತಿಂಗಳ ಪಾಲನೆ ಮಾಡಿದ ಬಳಿಕ ಈರುಳ್ಳಿ ಬೆಳೆ ಕೈಗೆ ಬರುತ್ತದೆ. ಇದಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಆದರೆ ಈ ಬಾರಿ ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿದೆ.
ವಿದ್ಯುತ್ ಸಮಸ್ಯೆ: ಈರುಳ್ಳಿ (ಉಳ್ಳಾಗಡ್ಡೆ)ಸಸಿ ನಾಟಿ ಮಾಡಲು ಮುಂದಾಗಿರುವ ರೈತರಿಗೆ 7ತಾಸು ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಸರಕಾರದ ನಿಯಮದಂತೆ ಪ್ರತಿದಿನ 7ಗಂಟೆ 3ಫೇಸ್ ವಿದ್ಯುತ್ ನೀಡಬೇಕು ಆದರೆ ವಿದ್ಯುತ್ ಕಡಿತ ಮಾಡುವ ಅಧಿ ಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೇಸಾಯಿ ಬೋಗಾಪುರ ಗ್ರಾಮದ ಶಂಕ್ರಪ್ಪ, ಡಾಕಪ್ಪ ಗೊಲ್ಲರಹಟ್ಟಿಯ ಹನುಮಂತಪ್ಪ ಆರೋಪಿಸಿದ್ದಾರೆ.
ಈ ಭಾಗದ ಹಳ್ಳಿಗಳಲ್ಲಿ ಯಾವತ್ತೂ 7 ತಾಸು ವಿದ್ಯುತ್ ನೀಡಿಲ್ಲ. ಕುಡಿಯುವ ನೀರು ಹಾಗೂ ಬೀದಿದೀಪಕ್ಕೂ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ರೈತರು ಜೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪದೇ ಪದೇ ವಿದ್ಯುತ್ ಕಡಿತದಿಂದ ಜನರು ರೋಸಿ ಹೋಗಿದ್ದಾರೆ.
ಪ್ರತಿ ವರ್ಷ 3 ಸಾವಿರ ಹೆ. ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ ಈ ಬಾರಿ 200 ಎಕರೆ ಸಹ ಈರುಳ್ಳಿ ಬೆಳೆದಿಲ್ಲ.
ಸುರೇಶ, ತೋಟಗಾರಿಕೆ
ಇಲಾಖೆ ಅಧಿಕಾರಿ
*
ದೇವಪ್ಪ ರಾಠೋಡ