ಇಷ್ಟಕ್ಕೂ ಸಂದೇಶ್ ಶೆಟ್ಟಿಗೆ ಏನೇನು ಅನುಭವಗಳಾಯಿತೋ ಗೊತ್ತಿಲ್ಲ. ಅವರು ಅದನ್ನು ಹೇಳಿಕೊಳ್ಳಲೂ ಇಲ್ಲ. ಆದರೆ, ಪದೇಪದೇ ಚಿತ್ರ ಎರಡು ವರ್ಷ ತಡವಾಗಿದ್ದರ ಬಗ್ಗೆ, ಸಾಕಷ್ಟು ಅಡೆತಡೆಗಳನ್ನು ಎದುರಿಸಿದ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಇದ್ದರು. ಹಾಗಂತ ತಮ್ಮ ಗೋಳಿನ ಕಥೆ ಹೇಳಿಕೊಳ್ಳುವುದಕ್ಕೆ ಅವರು ಬಂದಿರಲಿಲ್ಲ. ಇಂದು ಬಿಡುಗಡೆಯಾಗುತ್ತಿರುವ “ಕತ್ತಲ ಕೋಣೆ’ ಚಿತ್ರದ ಬಗ್ಗೆ ಹೇಳಿಕೊಳ್ಳುವುದಕ್ಕೆ ಬಂದಿದ್ದರು.
“ನಮಗೆ ಹಣದ ಕೊರತೆ ಇರಬಹುದು. ಆದರೆ, ದುಡ್ಡು ಕೊಟ್ಟು ಬಂದವರಿಗೆ ಖಂಡಿತಾ ಮೋಸ ಆಗುವುದಿಲ್ಲ. ನಾವೆಲ್ಲಾ ಕಲಿತು ಬಂದವರಲ್ಲ. ಕಲಿಯುತ್ತಲೇ ಚಿತ್ರ ಮಾಡಿದ್ದೇವೆ. ಸುಮ್ಮನೆ ಇದೊಂದು ವಿಭಿನ್ನ ಚಿತ್ರ ಎನ್ನುವುದಿಲ್ಲ. ನಿಜಕ್ಕೂ ವಿಭಿನ್ನವಾದ ಚಿತ್ರ. ಇಲ್ಲ ಎಂದಾದರೆ ಪ್ರಶ್ನೆ ಮಾಡಿ. ನೈಜವಾಗಿ ಚಿತ್ರೀಕರಣ ಮಾಡುವುದಕ್ಕೆ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ಸಂದೇಶ್.
“ಕತ್ತಲೆ ಕೋಣೆ’ ಚಿತ್ರವನ್ನು ಅವರು ನಿರ್ದೇಶಿಸಿರುವುದಷ್ಟೇ ಅಲ್ಲ, ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. 25 ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಅವರು ಚಿತ್ರ ಮಾಡಿದ್ದಾರೆ. ಅವರು ಮೂಲತಃ ಟಿವಿ ವರದಿಗಾರನಾಗಿರುವುದರಿಂದ, ಹಳೆಯ ಕಥೆಗೆ, ಪತ್ರಿಕೋದ್ಯಮದ ಆ್ಯಂಗಲ್ ಸಹ ಸೇರಿಸಿದ್ದಾರೆ. ಪತ್ರಕರ್ತರೊಬ್ಬರು ಹಳೆಯ ಘಟನೆಯನ್ನು ಬೇಧಿಸಿ ಹೊರಟಾಗ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ಅವರು ಹೇಳಹೊರಟಿದ್ದಾರಂತೆ. ಅವರ ಪ್ರಕಾರ ಇದೊಂದು ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರವಂತೆ.
ಈ ಚಿತ್ರವನ್ನು ಪುರುಷೋತ್ತಮ್ ಅಮೀನ್ ಎನ್ನುವವರು ನಿರ್ಮಿಸಿದ್ದಾರೆ. ಅವರ ಮಗ ವೈಶಾಖ್ ಅಮೀನ್ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ಹನಿಕಾ ರಾವ್ ಇದ್ದಾರೆ. ಆರ್.ಕೆ ಮಂಗಳೂರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.