ಮೈಸೂರು: ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಉತ್ತಮ ಗುರು ಮತ್ತು ಗುರಿ ಇರಬೇಕೆಂದು ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಹೇಳಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಿರ್ದೇಶನದಂತೆ ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹೊಸದಾಗಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ವಾರದ ತರಬೇತಿ ಅಭಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣದಲ್ಲಿ ಅವರ ಪಾತ್ರ ಮತ್ತು ಜವಾಬ್ದಾರಿಗಳ ಬಗೆಗೆ ಅರಿವು ಮೂಡಿಸಲು ಮತ್ತು ಸಂಸ್ಥೆಯ ನಿಯಮಗಳು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಚಾರಗಳನ್ನು ತಿಳಿಸಿಕೊಡಲು ಅಭಿನ್ಯಾಸ ಕಾರ್ಯಕ್ರಮವು ಪ್ರಮುಖವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಉನ್ನತ ಶಿಕ್ಷಣವು ಸ್ಥಿರ ಜೀವನ ಶೈಲಿ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಶಿಸ್ತು ಮತ್ತು ಗುರಿ ಆಧಾರಿತ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ , ಕು. ಸನ್ನಿಧಿ, ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಡಾ.ಕುಮುದಿನಿ ಅಚ್ಚಿ ಉಪಸ್ಥಿತರಿದ್ದರು.