ನಾವು ಓದುತ್ತಿರುವ ಶಾಲೆ ಅಥವಾ ಕಾಲೇಜನ್ನು ಬಿಟ್ಟು ಹೋಗುವುದೆಂದರೆ, ಈಗ ತಾನೆ ಮದುವೆಯಾದ ವಧುವೊಬ್ಬಳು ತನ್ನ ತವರು ಮನೆಯನ್ನು, ತನ್ನ ಬಂಧು-ಬಾಂಧವರನ್ನ ಬಿಟ್ಟು ಗಂಡನ ಮನೆಗೆ ಹೊರಡುವಾಗ ಆಗುವ ಸಂಕಟದಂತೆಯೇ ಸರಿ. ಅಂತೆಯೇ ನಮ್ಮ ಕಾಲೇಜಿನಲ್ಲಿಯೂ ಈ ವರ್ಷ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ನಮಗಾಗಿ ಹಮ್ಮಿಕೊಂಡಿದ್ದರು.
ಈ ಸಮಾರಂಭದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಇಟ್ಟುಕೊಂಡಿದ್ದ ಉತ್ತಮ ಒಡನಾಟ ಹಾಗೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅವರುಗಳು ಹೇಳಿದ ಅನಿಸಿಕೆಗಳಲ್ಲಿ ಒಂದು ಪ್ರಮುಖ ಅಂಶವೆಂದರೆ “ನಮ್ಮ ಮತ್ತು ಅವರ ನಡುವಿನ ಒಡನಾಟ ಹೇಗಿತ್ತೆಂದರೆ ಯಾರು ಜೂನಿಯರ್ಸ್ ಹಾಗೂ ಯಾರು ಸೀನಿಯರ್ಸ್ ಎಂದು ಹೊರಗಿನವರಿಗೆ ತಿಳಿಯುತ್ತಿರಲಿಲ್ಲ’ ಎಂದು ಹೇಳಿದ ಮಾತುಗಳು.
ಹೀಗೆ, ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ನಂತರ ಬಂದದ್ದು ನಮ್ಮ ಸರದಿ. ನಾವು ಕಾಲೇಜಿನಲ್ಲಿ ಕಲಿತ ಪಾಠ, ಅನುಭವ ಹೀಗೆ ಅನಿಸಿಕೆ ಹೇಳುತ್ತಿದ್ದಂತೆ ಕೆಲವರ ಕಣ್ಣಂಚಿಗೆ ಕಣ್ಣೀರು ಬಂದು ತಲುಪಿತ್ತು.
ಇದೇ ಸಂದರ್ಭದಲ್ಲಿ ಆದ ಒಂದು ಅಚ್ಚರಿಯ ವಿಷಯವೆಂದರೆ, ನಮ್ಮ ಕೆಲವು ಗೆಳೆಯರೆಲ್ಲ ಯಾವುದೋ ಸಣ್ಣ ವಿಷಯಕ್ಕೆ ಮನಸ್ತಾಪಗೊಂಡು ಮಾತನಾಡದೇ ಇದ್ದವರು ಪರಸ್ಪರ ಮಾತನಾಡುವಂತೆ ಮಾಡಿದ್ದು. ಇದು ನಮ್ಮ ಜೂನಿಯರ್ಸ್ ಮಾಡಿದ ಉತ್ತಮ ಕೆಲಸ ಎಂದೇ ಹೇಳಬಹುದು.
ಇನ್ನು ನಮಗೋ ನಮ್ಮ ಕಾಲೇಜು, ನಮಗೆ ಕಲಿಸಿದ ಲೆಕ್ಚರರ್ಸ್ ಅನ್ನು ಬಿಟ್ಟುಹೋಗುವುದು ಅನಿವಾರ್ಯ. ನಮ್ಮಲ್ಲಿ ಕೆಲವರು ಉನ್ನತ ಶಿಕ್ಷಣ ಮಾಡಲು ತೆರಳಿದರೆ, ಇನ್ನು ಕೆಲವರು ಪದವಿ ಸಾಕೆಂದು ಕೆಲಸದ ಹುಟುಕಾಟಕ್ಕೆ ತೆರಳುವವರು.
ಅದೇನೆ ಇರಲಿ, ನಾವು ಓದಿದ ಕಾಲೇಜಿನಲ್ಲಿ ನಾವು ಮಾಡಿದ ತರಲೆ-ಕಿತಾಪತಿಗಳ ನೆನಪೇ ಶಾಶ್ವತ.
ಮಂಜುನಾಥ ಬಿ. ವಿ.
ತೃತೀಯ ಬಿ. ಎ., ಸರಕಾರಿ ಪ್ರಥಮದರ್ಜೆ ಕಾಲೇಜು, ಹೆಬ್ರಿ