Advertisement

ಕಿರಿಯರ ಸಾಂಪ್ರದಾಯಿಕ “ಶ್ರೀರಾಮಾಶ್ವಮೇಧ’

10:12 PM May 02, 2019 | Sriram |

ಉಡುಪಿಯಲ್ಲಿ ಅನೇಕ ಯಕ್ಷಗಾನ ಮಂಡಳಿಗಳು ಬಾಲ ಕಲಾವಿದರಿಗೆ ಯಕ್ಷಗಾನ ತರಬೇತಿ ನೀಡಿ ಉತ್ತಮ ಕಲಾವಿದರನ್ನು ಯಕ್ಷರಂಗಕ್ಕೆ ನೀಡುತ್ತಿವೆ. ಇಂತಹ ಮಂಡಳಿಗಳಲ್ಲಿ ಮಾರ್ಪಳ್ಳಿ ಯಕ್ಷಗಾನ ಕಲಾ ಮಂಡಳಿಯೂ ಒಂದು. 33 ವರ್ಷಗಳಿಂದ ಕಲಾ ಸೇವೆ ನೀಡುತ್ತಿರುವ ಈ ಸಂಸ್ಥೆ ಅನೇಕ ಬಾಲ ಕಲಾವಿದರಿಗೆ ಯಕ್ಷಗಾನ ತರಬೇತಿ ನೀಡುತ್ತಾ ಬರುತ್ತಿದೆ. ಕಿರಿಯ ಕಲಾವಿದರಿಗೆ ಆರಂಭದಿಂದಲೇ ಸಾಂಪ್ರದಾಯಿಕ ಯಕ್ಷಗಾನ ಕುಣಿತ ಕಲಿಸಿದರೆ ಮುಂದೆ ಇದೇ ಕಿರಿಯರಿಂದ ಪ್ರಬುದ್ಧ ಕಲಾವಿದರಿಗೆ, ಹಿರಿಯರಿಗೆ ಸರಿಸಮಾನವಾದ ಪೌರಾಣಿಕ ಪ್ರಸಂಗ ಪ್ರದರ್ಶನ ನಡೆಸಬಹುದು ಎಂಬುದಕ್ಕೆ ಸಾಕ್ಷಿ ಇತ್ತೀಚೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ರಾಮೋತ್ಸವ ಸರಣಿ ಕಾರ್ಯಕ್ರಮದಲ್ಲಿ ನಡೆದ ಮಾರ್ಪಳ್ಳಿ ಕಿರಿಯರ ತಂಡದ “ಶ್ರೀ ರಾಮಾಶ್ವಮೇಧ’ ಪ್ರಸಂಗ.

Advertisement

ಸುಮಾರು ಎರಡೂವರೆ ತಾಸು ನಡೆದ ಈ ಪ್ರದರ್ಶನದಲ್ಲಿ ವೃತ್ತಿ ಮೇಳಗಳಲ್ಲಿ ಮಾಯವಾಗುತ್ತಿರುವ ಸಭಾಲಕ್ಷಣ, ಬಾಲಗೋಪಾಲ ಮತ್ತು ಪೀಠಿಕೆ ಸ್ತ್ರೀ ವೇಷವನ್ನು ಕ್ರಮಬದ್ಧವಾಗಿ ಸಮಯದ ಪರಿಮಿತಿಗೊಳಪಡಿಸಿ ಪ್ರದರ್ಶಿಸಲಾಯಿತು. ಪ್ರಸಂಗದುದ್ದಕ್ಕೂ ಕಿರಿಯರು ಪ್ರಬುದ್ಧ ಕಲಾವಿದರಿಗೆ ಕಡಿಮೆ ಇಲ್ಲವೆಂಬಂತೆ ಯಕ್ಷಗಾನ , ರಂಗನಡೆ, ಸಾಂಪ್ರದಾಯಿಕ ಕುಣಿತ, ಅಭಿನಯ, ಮುಖ ಭಾವನೆ ಮತ್ತು ಮಾತುಗಾರಿಕೆ ಪ್ರದರ್ಶಿಸಿದರು.

ಈ ತಂಡದಲ್ಲಿ ಎರಡನೇ ತರಗತಿಯಿಂದ ಎಂ.ಕಾಂ., ಎಂಜಿನಿಯರಿಂಗ್‌ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದರು. ಶತ್ರುಘ್ನನ ಪ್ರವೇಶದೊಂದಿಗೆ ಆರಂಭವಾದ ಪ್ರದರ್ಶನ, ರಾಮದರ್ಶನವನ್ನು ಹಾರೈಸುವ ಮಾಯಾಪುರದ ತರುಣಿಯರಿಗೆ ಬೆರಳ ಮುದ್ರಿಕೆಯನ್ನು ನೀಡುವಲ್ಲಿಗೆ ಸಮಾಪ್ತಿಯಾಯಿತು. ಪ್ರಸಂಗದ ಮುಖ್ಯಪಾತ್ರ ನಿರ್ವಹಿಸಿದ ಕು| ಅನಘಾಶ್ರೀ ನೃತ್ಯದಲ್ಲಿ ವಿದ್ವತ್‌ ಪಡೆದವರಾಗಿದ್ದು ಎಂಟೆಕ್‌ ವಿದ್ಯಾರ್ಥಿನಿ. ಶತ್ರುಘ್ನನ ಮತ್ತು ವಿದ್ಯುನ್ಮಾಲಿಯಾಗಿ ವಿಶ್ವೇಶ್‌ ಉಪಾಧ್ಯ ,ಪುಷ್ಕಳನಾಗಿ ಅಭಿಷೇಕ್‌, ದಮನವಾಗಿ ವರುಣ್‌,ನಾರದನಾಗಿ ಕು| ವರ್ಷಿಣಿ, ದೂತಿಯಾಗಿ ರಜತ್‌, ಮದನಾಕ್ಷಿಯಾಗಿ ಕು| ವನ್ಯಶ್ರೀ, ತಾರಾವರೆಯಾಗಿ ಕು| ಪ್ರಿಯಂವದಾ ಪ್ರದರ್ಶನ ರಂಜಿಸುವಲ್ಲಿ ಹೆಚ್ಚಿನ ಕೊಡುಗೆ ನೀಡಿದರು. ಇವರಲ್ಲದೆ ಉಳಿದಂತೆ ಕು| ಗೌತಮಿ ,ಹರ್ಷಿತ್‌ , ಪಾರ್ಥ ಸಾರಥಿ , ಕು| ಅಶ್ವಿ‌ನಿ , ಕು| ವೈಷ್ಣವಿ , ಕು| ರಕ್ಷಾ , ಉತ್ತಮ ಪ್ರದರ್ಶನ ನೀಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣುಮೂರ್ತಿ ಉಪಾಧ್ಯ ಮಾರ್ಪಳ್ಳಿ , ಮದ್ದಳೆಯಲ್ಲಿ ರತ್ನಾಕರ ಶೆಣೈ ಶಿವಪುರ, ದೇವರಾಯ ಶೆಟ್ಟಿಗಾರ್‌, ಚೆಂಡೆಯಲ್ಲಿ ಅಜಿತ್‌ ಕುಮಾರ್‌ ಅಂಬಲಪಾಡಿ ಸಹಕರಿಸಿದರು. ಶ್ರೀರಾಮ ದರ್ಶನ ಬಯಸುವ ಮದನಾಕ್ಷಿಯ ಭಾವನೆ ಉತ್ತಮವಾಗಿ ಮೂಡಿತು. ಎಂಟನೇ ತರಗತಿಯ ವರುಣ್‌ನ ಪದ ಎತ್ತುಗಡೆ ಬೆರಗಾಗಿಸಿತು.

-ಯಕ್ಷಾಭಿಮಾನಿ

Advertisement

Udayavani is now on Telegram. Click here to join our channel and stay updated with the latest news.

Next