ಮಳೆಗಾಲದ ಪ್ರಥಮ ಯಕ್ಷಗಾನ ಪ್ರದರ್ಶನ ಸಿದ್ದಾಪುರದ ಶ್ರೀ ರಂಗನಾಥ ಸಭಾಭವನದಲ್ಲಿ ಜೂ.9ರಂದು ಸೌಕೂರು ಮೇಳದ ಕಲಾವಿದರಾಗಿರುವ ನಾರಾಯಣ ನಾಯ್ಕ, ಉಳ್ಳೂರು ಇವರ ಸಂಯೋಜಕತ್ವದಲ್ಲಿ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ, ಹಾಲಾಡಿ ಇದರ ಸಹಯೋಗದಲ್ಲಿ ನಡೆಯಿತು. ದ್ರೌಪದಿವಸ್ತ್ರಾಪಹಾರವೆಂಬ ಪ್ರಸಂಗವನ್ನು ಪ್ರದರ್ಶಿಸಲಾಯಿತು.
ನಗರ ಸುಬ್ರಹ್ಮಣ್ಯ ಆಚಾರ್ ಭಾಗವತಿಕೆಯಲ್ಲಿ, ಕೋಟ ಶಿವಾನಂದ ಮತ್ತು ಗುಣವಂತೆ ಸುಬ್ರಹ್ಮಣ್ಯ ಭಂಡಾರಿ ಇವರ ಚೆಂಡೆಯ ನುಡಿತದೊಡನೆ ರಾಘವೇಂದ್ರ ಯಲ್ಲಾಪುರ ಮತ್ತು ಕಡತೋಕ ಪ್ರವೀಣ್ ಭಂಡಾರಿ ಇವರ ಮದ್ದಳೆ ವಾದನದಲ್ಲಿ ದ್ರೌಪದಿ ವಸ್ತ್ರಾಪಹಾರ ಕಳೆಯೇರಿತು. ಪ್ರಸಂಗದ ನಡೆಬಲ್ಲ ಹಿರಿಯ ವೇಷಧಾರಿ ಆರೊಡು ಮೋಹನದಾಸ್ ಶೆಣೈ ಇವರು ತಮ್ಮ ತರ್ಕಬದ್ಧವಾದ ಮಾತಿನಲ್ಲಿಯೇ ಪಾಂಡವರ ಕುರಿತಾದ ಅಸೂಯೆ, ಹಗೆತನ, ಕ್ರೌರ್ಯವನ್ನು ಪ್ರತಿಪಾದಿಸುವ ಕೌರವನ ಪಾತ್ರವನ್ನು ಕಟ್ಟಿಕೊಟ್ಟರು. ಶಕುನಿಯ ಪಾತ್ರಧಾರಿ ಶ್ರೀಧರ ಭದ್ರಾಪುರ ತಮ್ಮ ವಿಶಿಷ್ಟವಾದ ಮಾತು, ಆಂಗಿಕ ಚಲನೆ, ಅಭಿನಯ, ಕುಣಿತ, ಪೇಟದ ವೇಷಧಾರಿಯಾಗಿ ಅವನ ತಂತ್ರಗಾರಿಕೆ, ಕುತಂತ್ರಿ ಬುದ್ಧಿಯನ್ನು ಸಾಕಾರಗೊಳಿಸಿದರು. ಬಡಗುತಿಟ್ಟಿನ ಈಗಿನ ವೇಷಧಾರಿಗಳಲ್ಲಿ ಒಳ್ಳೆಯ ದೇಹ ಸಾಮರ್ಥ್ಯ, ಸ್ವರಭಾರ, ಅಭಿನಯ, ನೃತ್ಯಗಳಿಂದ ಪ್ರವರ್ಧಮಾನಕ್ಕೆ ಬರುತ್ತಿರುವ, ಎರಡನೆಯ ವೇಷಧಾರಿಯಾಗುವ ಸಕಲ ಸಾಮರ್ಥ್ಯ ಪಡೆದಿರುವ ಪ್ರಸನ್ನ ಶೆಟ್ಟಿಗಾರರು ದುಶಾÏಸನನಾಗಿ ಮೆರೆದರು. ಆದರೆ ತೆಂಕುತಿಟ್ಟಿನ ವೇಷ, ಕುಣಿತಗಳಿಂದ ದುಶಾÏಸನ ಪಾತ್ರಕ್ಕೆ ಖ್ಯಾತರಾದ ತೆಂಕುತಿಟ್ಟಿನ ಅರುವ ಕೊರಗಪ್ಪರ ಮಾದರಿಯನ್ನೆ ನೆನಪಿಸುವಂತಾಯಿತು.
ದ್ರೌಪದಿ ಪಾತ್ರಧಾರಿ ಶಶಿಕಾಂತ ಶೆಟ್ಟಿ ಇವರು ಕರುಣಾ ರಸದ ಪ್ರತಿಪಾದನೆ ಮಾಡಿದ ರೀತಿಯಲ್ಲಿ ಮುಪ್ಪುರಿಗೊಂಡ ಅಭಿನಯ, ವೇಷಗಾರಿಕೆಯಲ್ಲಿ ಪಾತ್ರಪೋಷಣೆ ಮಾಡಿ ಆಡಿದ ಮಾತುಗಳು ರಸ ಪ್ರತಿಪಾದಿಸಿ, ಸಾಹಿತ್ಯ ಕಾವ್ಯಮಯವಾಗುವಂತೆ ನ್ಯಾಯ ಸಲ್ಲಿಸಿದರು. ಭಾವ ತೀವ್ರತೆಯಲ್ಲಿ ತಾನೂ ಕಣ್ಣೀರು ಸುರಿಸಿ, ಪ್ರೇಕ್ಷಕರ ಕಣ್ಣಲ್ಲಿ ದ್ರೌಪದಿಗಾಗಿ ಮರುಗುವಂತೆ ಮಾಡಿ ಕೋಳ್ಯೂರು ರಾಮಚಂದ್ರ ರಾಯರ ದ್ರೌಪದಿ ಪಾತ್ರವನ್ನು ನೆನಪಿಸಿದರು. ಭಾಗವತಿಕೆಯು ಅವರಿಗೆ ಪೂರಕವಾಗುವಲ್ಲಿ ಸ್ವಲ್ಪ ತೊಡಕಾದ ಹಾಗೆ ಕಂಡಿತು. ವಿಕರ್ಣನಾಗಿ ಕಾಣಿಸಿಕೊಂಡ ಯುವ ವೇಷಧಾರಿ ಹೆನ್ನಾಬೈಲು ವಿಶ್ವನಾಥ ಪೂಜಾರಿ ಇವರು ಬಡಗುತಿಟ್ಟಿನ ನೃತ್ಯ, ಅಭಿನಯ, ವೇಷಗಾರಿಕೆ ಪ್ರದರ್ಶಿಸಿ ಈಗಿನ ಬಡಗುತಿಟ್ಟಿನ ಯುವ ಕಲಾವಿದರಿಗೆ ಮಾದರಿಯಾಗುವಂತಹ ನಡೆಗಳಿಂದ ಪಾತ್ರ ಪೋಷಣೆ ಮಾಡಿ ಪ್ರಶಂಸೆಗೆ ಪಾತ್ರರಾದರು. ಕ್ಯಾದಗಿ ಮಹಾಬಲೇಶ್ವರ ಇವರ ಪ್ರಾತಿಕಾಮಿ ಪಾತ್ರ ಗಂಭೀರವಾದ ನಡೆಯಿಂದ ಕೂಡಿದ್ದರಿಂದ ಹಾಸ್ಯಕ್ಕೆ ಹೆಚ್ಚು ಅವಕಾಶವಿಲ್ಲವಾದರೂ ಎಚ್ಚರದಿಂದಲೇ ಪಾತ್ರ ನಡೆಸಿಕೊಟ್ಟರು. ಧರ್ಮರಾಯ, ಕರ್ಣ, ಭೀಮ, ಅರ್ಜುನ, ದ್ರೌಪದಿ ಸಖೀ ಮತ್ತು ಗಾಂಧಾರಿ ಪಾತ್ರಧಾರಿಗಳು ತಾವಿನ್ನೂ ಬೆಳೆಯಬೇಕಾದವರು ಎಂಬಂತೆ ಅವರ ಅಭಿನಯ, ಮಾತು, ವೇಷಗಾರಿಕೆ ಇತ್ತಾದರೂ ಪ್ರಸಂಗ ನಡೆಗೆ ಪೂರಕವಾಗಿ ವರ್ತಿಸಿದ್ದರು. ತುಂಬಾ ಹೊತ್ತು ಸುಮ್ಮಗೆ ಕೂತಿರಬೇಕಾದ ಧೃತರಾಷ್ಟ್ರ ಪಾತ್ರಧಾರಿ ಮುಂದೆ ದ್ರೌಪದಿಗೆ ವರ ಕೊಡುವಲ್ಲಿ ಹೇಳಬೇಕಾದುದನ್ನು ಚೆನ್ನಾಗಿ ಹೇಳಿದರು.
ಬಡಗುತಿಟ್ಟಿನ ಪ್ರದರ್ಶನದಲ್ಲಿ ಆದಂತಹ ಬದಲಾವಣೆ ಹೇಳದೆ ಉಪಾಯವಿಲ್ಲ. ನಮ್ಮ ಹಿರಿಯರು ಬಹಳ ಸಾಧನೆಯಿಂದ ನಿರ್ಮಿಸಿರುವ ಎದೆಪದಕ, ಭುಜಮುಳ್ಳು, ವೀರಕಸೆ, ಮಾರುಮಾಲೆ ಮತ್ತು ಮುಖದ ಬರವಣಿಗೆಗಳು ಬದಲಾವಣೆ ಆಗಿ ನಡು ತಿಟ್ಟಿನ ಆ ಅಪೂರ್ವವಾದ ಆಭರಣಗಳು ಮತ್ತು ಮುಖವರ್ಣಿಕೆಗಳು ಇತಿಹಾಸವನ್ನು ಸೇರದಂತೆ ಉಳಿಸಿಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು.
ಕಲೆಗಾಗಿ ಕಲಾವಿದರೇ ವಿನಃ ಕಲಾವಿದರು ಕಲೆಯ ನಿರ್ನಾಮ ಮಾಡುವಲ್ಲಿ ಮುಂದಾಗಬಾರದು ಎಂಬ ಕಳಕಳಿ ನಮ್ಮದು. ಪ್ರಸಾಧನ ವರ್ಗದವರು ಕೂಡಾ ಈ ನಿಟ್ಟಿನಲ್ಲಿ ಎಚ್ಚರವಹಿಸಬೇಕಾದ ಅಗತ್ಯವಿದೆ.
ಮನೋಹರ್ ಎಸ್ ಕುಂದರ್